
ಹೊಸಕೋಟೆ: ಇಲ್ಲಿಗೆ ಸಮೀಪದ ಟೋಲ್‍ನ ಸರ್ವೀಸ್ ರಸ್ತೆಯಲ್ಲಿ ಇಂಡಿಕಾ ಕಾರಿನಲ್ಲಿ ಬೆಂಗಳೂರಿನ ಪೀಣ್ಯ ವಾಸಿ, ಉದ್ಯಮಿ ಶಿಬು (39) ಎಂಬುವವರ ಶವ ಪತ್ತೆಯಾಗಿದೆ. ಕಳೆದ 2
ದಿನಗಳಿಂದ ರಸ್ತೆ ಬದಿಯಲ್ಲಿ ಕಾರು ನಿಂತಿದ್ದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದರು.
ಸೋಮವಾರ ಬೆಳಿಗ್ಗೆ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ವಿಳಾಸ ಪತ್ತೆ ಹಚ್ಚಿ ಸಂಬಂಧಿಕರಿಗೆ ವಿಷಯ ತಿಳಿಸಿ ಕಾರನ್ನು ತೆರೆದಾಗ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದು ಕಾರಿನ ಎಸಿ ಚಾಲನೆಯಲ್ಲಿದ್ದುದು ಕಂಡುಬಂದಿದೆ. ಕೇರಳ ಮೂಲದವರಾಗಿದ್ದ ಶಿಬು ಕಳೆದ 20 ವರ್ಷಗಳಿಂದಲೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ಚಪ್ಪಲಿಗಳ ಮೌಲ್ಡಿಂಗ್ ವರ್ಕ್‍ಶಾಫ್ ಹೊಂದಿದ್ದಾರೆ.
ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಜೂ.9ರಂದು ದೇವಾಲಯಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದು ಜೂ.11ರಂದು ಮೈಸೂರಿನಿಂದ ಬರುತ್ತಿರುವುದಾಗಿ ಮನೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಆದರೆ ಮನೆಗೆ ಬಾರದ ಕಾರಣ ಪತ್ನಿ ಸುಜಾ ಶಿಬು ಬೆಂಗಳೂರಿನ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ಜೂ.13ರಂದು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು.
ವಾಹನದಲ್ಲಿ ಎಸಿ ಚಾಲನೆಯಿಂದ ಉಸಿರುಗಟ್ಟಿ ಅಥವಾ ವಿಷ ಸೇವಿಸಿ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಉದ್ದಿಮೆ ನಡೆಸಲು ಕೈಸಾಲ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
Advertisement