
ದೇವದುರ್ಗ: ವಿಶ್ವ ಯೋಗ ದಿನಾಚರಣೆ ನೆಪದಲ್ಲಿ ಕೇಂದ್ರದ ಮೋದಿ ಸರ್ಕಾರವು ಬಾಬಾ ರಾಮದೇವ್ ಮತ್ತು ರವಿಶಂಕರ್ ಗುರೂಜಿಯಂಥವರ ಸಂಸ್ಥೆಯಿಂದ ಉತ್ಪಾದಿಸುವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಸುವ ಕಾರ್ಯ ಮಾಡುತ್ತಿದೆ. ಯೋಗವನ್ನು ಹಿಂದೂ ಧರ್ಮದ ಆಸ್ತಿಎಂಬಂತೆ ಬಿಂಬಿಸಲಾಗುತ್ತಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಬಾಬಾ ರಾಮದೇವ್ ಮತ್ತು ರವಿಶಂಕರ್ ಗುರೂಜಿಯಂಥವರು ಎಂದಿಗೂ ಯೋಗ ಶಿಕ್ಷಕರೇ ವಿನಾ ಯೋಗಿಗಳಾಗಲಾರರು. ಯೋಗಿಗಳಾದವರು ಹಣಕ್ಕಾಗಿ ಹಪಾಹಪಿ ಹೊಂದಿರುವುದಿಲ್ಲ. ಆದರೆ ಕೋಟಿಗಟ್ಟಲೆ ಆಸ್ತಿ ಹೊಂದಿರುವ ಬಾಬಾ ರಾಮದೇವ್ ಮತ್ತು ರವಿಶಂಕರ್ ಗುರೂಜಿಯಂಥವರು ಎಂದಿಗೂ ಯೋಗಿಗಳೆಂದು ಕರೆಯಿಸಿಕೊಳ್ಳಲು ಅರ್ಹರಲ್ಲ ಎಂದು ವ್ಯಂಗ್ಯವಾಡಿದರು. ನಗರದಲ್ಲಿ ಭಾನುವಾರ ದೇವದುರ್ಗದ ಖೇಣೆದ್ ಮುರಿಗೆಪ್ಪ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ,ಪ್ರೊ.ಎಂ.ಎಂ. ಕಲಬುರ್ಗಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಯೋಗಕ್ಕೆ ವಿಶ್ವಮಟ್ಟದಲ್ಲಿ ಕೇಂದ್ರ ಸರ್ಕಾರ ಮಹತ್ವ ತಂದುಕೊಟ್ಟಿದ್ದು ಶ್ಲಾಘನೀಯ ಕಾರ್ಯವೇ ಆಗಿದೆ. ಆದರೆ ಅದರ ಹಿಂದೆ ಬಾಬಾ ಮತ್ತು ಧರ್ಮಗುರುಗಳು ಉತ್ಪಾದಿಸುವ ವಿವಿಧ ಆಯುರ್ವೇದಿಕ್ ಉತ್ಪನ್ನಗಳಿಗೆ ವಿಶ್ವಮಟ್ಟದಲ್ಲಿ ಹೆಸರು ತಂದುಕೊಟ್ಟು ಹಣ ಗಳಿಕೆಯ ಮಾರ್ಗ ಕಂಡುಕೊಳ್ಳಲು ಬಳಕೆ ಮಾಡುವ ಹುನ್ನಾರವಿದೆ ಎಂದು ಟೀಕಿಸಿದರು. ಬಾಬಾ ರಾಮದೇವ್ ಅವರ ಸಂಸ್ಥೆಯಿಂದ ಹೊರತಂದಿರುವ ಪುರುಷ ಸಂತಾನ ನೀಡುವ ಔಷಧಿಯನ್ನು ನಿಷೇಧಿಸಬೇಕು. ಈ ಮೂಲಕ ಬಾಬಾ ರಾಮದೇವ್ ಲಿಂಗ ತಾರತಮ್ಯ ಮಾಡುವುದಕ್ಕೆ ಪ್ರಚೋದನೆ ನೀಡಿದ್ದಾರಷ್ಟೇ ಅಲ್ಲ. ಇದೊಂದು ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣ ದಾಖಲಿಸಲು ಯೋಗ್ಯ ವಿಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯೋಗ ಹಿಂದೂ ಧರ್ಮದ್ದಲ್ಲ: ಯೋಗವನ್ನು ಹಿಂದೂಗಳ ಸ್ವತ್ತೆಂದು ಪ್ರಧಾನಿ ಮೋದಿ ಮಾಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ಅವರು ಮಾಡಿದ ಭಾಷಣದಲ್ಲಿ ಯೋಗವು ಸನಾತನ ಭಾರತೀಯ ಧರ್ಮಕ್ಕೆ ಸೇರಿದ್ದೆಂದು ಹೇಳುವ ಮೂಲಕ ಇತಿಹಾಸ ತಿರುಚುವ ಕಾರ್ಯ ಮಾಡಿದ್ದಾರೆ. ವಾಸ್ತವದಲ್ಲಿ ಆರ್ಯರ ಕಾಲಕ್ಕಿಂತಲೂ ಪೂರ್ವದಲ್ಲಿ ಹರಪ್ಪ ಮೊಹೆಂಜೋದಾರೋ ಕಾಲಕ್ಕೆ ಸೇರಿದ ಪ್ರತಿಮೆಗಳಲ್ಲಿ ವಿವಿಧ ಯೋಗಾಸನಗಳ ಭಂಗಿಯಿರುವುದು ಯೋಗ ಹಿಂದೂ ಧರ್ಮದ್ದಲ್ಲ ಎಂಬುದನ್ನು ಸಾಬೀತು ಮಾಡುತ್ತದೆ ಎಂದು ಅವರು ಹೇಳಿದರು.
Advertisement