ಆಂಗ್ಲ ಶಾಲೆಗಳಿಗೆ ಅನುಮತಿ ನಕಾರ: ಹೈಕೋರ್ಟ್ ಗರಂ

1ರಿಂದ 5ನೇ ತರಗತಿವರೆಗಿನ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಅನುಮತಿ ಕೋರುವ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ...
ಕರ್ನಾಟಕ ಹೈ ಕೋರ್ಟ್
ಕರ್ನಾಟಕ ಹೈ ಕೋರ್ಟ್

ಬೆಂಗಳೂರು: 1ರಿಂದ 5ನೇ ತರಗತಿವರೆಗಿನ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಅನುಮತಿ ಕೋರುವ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ.

ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗೆ ಅನುಮತಿ ನೀಡುವಂತೆ 2008ರಲ್ಲೇ ನ್ಯಾಯಾಲಯ ಆದೇಶಿಸಿದೆ. ಆದರೆ, ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅನುದಾನ ರಹಿತ ಆಡಳಿತ ಮಂಡಳಿ, ಅಲ್ಪಸಂಖ್ಯಾತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಸೇರಿ ಹಲವರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.

ಜೈಲಿಗೆ ಕಳಿಸುವ ಎಚ್ಚರಿಕೆ: ಮಂಗಳವಾರ ಈ ಕುರಿತು ವಿಚಾರಣೆ ನಡೆಸಿದ ನ್ಯಾ.ಎನ್.ಕುಮಾರ್ ಅವರಿದ್ದ ವಿಭಾಗೀಯ ಪೀಠ, ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಸರಿಯಾಗಿ ವೇತನ ಪಡೆಯುತ್ತಿಲ್ಲವೇ? ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಇಲಾಖೆ ಪರಿಗಣಿಸಬೇಕು ಎಂದು ಕೋರ್ಟ್ ಸಾಕಷ್ಟು ಬಾರಿ ನಿರ್ದೇಶನ ನೀಡಿದೆ. ಹೀಗಿದ್ದರೂ ಇಲಾಖೆ ಮೌನ ತಾಳಿರುವುದು ಸರಿಯಲ್ಲ. ಶಿಕ್ಷಣ ಇಲಾಖೆಗೆ ಕೋರ್ಟ್ ಎಂದರೆ ಗೌರವವಿಲ್ಲವೇ? ಈ ಪ್ರವೃತ್ತಿ ಮುಂದುವರಿದಿದ್ದೇ ಆದಲ್ಲಿ ನ್ಯಾಯಾಂಗ ನಿಂದನೆ ಎಂದರೇನು ಎಂಬುದನ್ನು ಇಲಾಖೆಗೆ ತೋರಿಸಬೇಕಾಗುತ್ತದೆ. ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಲು ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಗಳನ್ನು ಯಾವುದೇ ಮುಲಾಜಿಲ್ಲದೇ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಪೀಠ ಎಚ್ಚರಿಸಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಸರ್ಕಾರ ಈಗಾಗಲೇ 1,300 ಶಾಲೆಗಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವಂತೆ ಅನುಮತಿ ನೀಡಿದೆ ಎಂದು ಪೀಠದ ಗಮನಕ್ಕೆ ತಂದರು. ವಾದ-ವಿವಾದ ಆಲಿಸಿದ ವಿಭಾಗೀಯ ಪೀಠ, ಇನ್ನೆರಡು ದಿನದ ಒಳಗಾಗಿ ಆಂಗ್ಲ ಮಾಧ್ಯಮಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗಿರುವ ಒಟ್ಟು ಅರ್ಜಿ, ಈವರೆಗೂ ಅನುಮತಿ ನೀಡಿರುವ ಒಟ್ಟು ಶಾಲೆಗಳು, ಅನುಮತಿ ನೀಡಲು ಬಾಕಿ ಇರುವ ಶಾಲೆಗಳ ವಿವರ ಮತ್ತು ಸರ್ಕಾರ ಹೈಕೋರ್ಟ್‍ನ ಆದೇಶ ಪಾಲಿಸಿರುವ ಕುರಿತಾದ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಗುರುವಾರಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com