
ಬೆಂಗಳೂರು: ರಾಜ್ಯದಲ್ಲಿರುವ 68 ಸಕ್ಕರೆ ಕಾರ್ಖಾನೆಗಳ ಪೈಕಿ 20 ಕಾರ್ಖಾನೆಗಳಲ್ಲಿರುವ ಸಕ್ಕರೆ ದಾಸ್ತಾನನ್ನು ಸರ್ಕಾರ ವಶಪಡಿಸಿಕೊಂಡಿದ್ದು, ಹಂತಹಂತವಾಗಿ ಮಾರಾಟ ಮಾಡಿ ರೈತರ ಬಾಕಿಯನ್ನು ತೀರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಮಹದೇವಪ್ರಸಾದ್ ತಿಳಿಸಿದ್ದಾರೆ.
ಕಬ್ಬು ಬೆಲೆ ನಿಯಂತ್ರಣ ಮಂಡಳಿ ಸಭೆ ನಂತರ ಮಾತನಾಡಿದ ಸಚಿವ, ಕಬ್ಬು ಅರೆಯುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದಿರಲು ನಿರ್ಧರಿಸಿತ್ತು. ಜೂ.6 ಕ್ಕೆ ಕಬ್ಬು ಅರೆಯುವ ಕಾರ್ಯ ಪೂರ್ಣಗೊಂಡಿದೆ. ಮುಂದೆ ಕಬ್ಬು ಅರೆಯುವ ಕೆಲಸ ಆರಂಭಗೊಳ್ಳುವ ಮುನ್ನ ರೈತರಿಗೆ ಬಾಕಿ ಉಳಿದಿರುವ ಹಣವನ್ನು ತೀರುವಳಿ ಮಾಡಲು ಸರ್ಕಾರ ನಿರ್ಧರಿಸಿದೆ. ಸುಮಾರು 31 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ದಾಸ್ತಾನಿನಲ್ಲಿದೆ. ಇದರ ಮೌಲ್ಯ ಸುಮಾರು 6 ,000 ಕೋಟಿ. ದಾಸ್ತಾನಿರುವ ಶೇ.50 ರಷ್ಟು ಸಕ್ಕರೆ ಮಾರಾಟ ಮಾಡಿದರೂ ರೈತರ ಬಾಕಿಯನ್ನು ಸಂಪೂರ್ಣ ತೀರಿಸಬಹುದು ಎಂದು ಹೇಳಿದರು.
ಕಬ್ಬು ಬೆಳೆಗಾರರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ರೈತರ ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಾಗಲಾರದು. ರೈತರಿಗೆ ಸಮಸ್ಯೆ ಇದೆ ಎಂಬುದು ಸರ್ಕಾರಕ್ಕೆ ಅರಿವಿದೆ. ಕಬ್ಬಿನೊಂದಿಗೆ ರೈತರು ಇತರ ಬೆಳೆಗಳನ್ನು ಬೆಳೆಯಬೇಕು. ಕೇಂದ್ರ ಸರ್ಕಾರ ಕಬ್ಬು ಬೆಳೆಗೆ ಸಂಬಂಧಿಸಿದಂತೆ 6000 ಕೋಟಿ ಬಡ್ಡಿ ರಹಿತ ಸಾಲ ನೀಡುವುದಾಗಿ ಹೇಳಿದೆ. ಇದರಲ್ಲಿ ರಾಜ್ಯಕ್ಕೆ ಸುಮಾರು 900 ಕೋಟಿ ಲಭ್ಯವಾಗಲಿದೆ. ಈ ಹಣದಿಂದ ಎಫ್.ಆರ್.ಪಿಯಲ್ಲಿ ಶೇ.50 ರಷ್ಟು ಹಣ ಪಾವತಿಯಾಗಳು ಸಾಧ್ಯ. ಕಾರ್ಖಾನೆಗಳು ಸಾಲ ಪಡೆದರೆ ಆ ಹಣ ನೇರವಾಗಿ ರೈತನ ಖಾತೆಗೆ ವರ್ಗಾವಣೆಯಾಗುತ್ತದೆ. ಈ ಬಗ್ಗೆ ಕಾರ್ಖಾನೆಗಳು ಮುಂದಾಗುವ ನಿರೀಕ್ಷೆ ಇದೆ ಎಂದರು.
ಕಬ್ಬಿಗೆ 2014 -15 ನೇ ಸಾಲಿಗೆ ದರ ನಿಗದಿಪಡಿಸಲು ತಾಂತ್ರಿಕ ಸಮಿತಿ ವರದಿ ಸಿದ್ಧಪಡಿಸುತ್ತಿದೆ. 65 ಕಾರ್ಖಾನೆಗಳ ಪೈಕಿ 50 ಕಾರ್ಖಾನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಉಳಿದ ಕಾರ್ಖಾನೆಗಳಿಂದಲೂ ಮಾಹಿತಿ ಸಂಗ್ರಹಿಸಿದ ಮೇಲೆ ವರದಿ ಸಲ್ಲಿಸುತ್ತದೆ. ನಂತರ ದರ ನಿಗದಿಪಡಿಸಲಾಗುತ್ತದೆ ಎಂದು ಸಚಿವ ಮಹದೇವ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
Advertisement