ಮತದಾರರ ಪಟ್ಟಿಯಲ್ಲಿ ದೋಷ, 35 ಸಾವಿರ ಪ್ರಕರಣ ಪತ್ತೆ

ಬಿಬಿಎಂಪಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯಲ್ಲಿ ಸುಮಾರು 35 ಸಾವಿರ ಪ್ರಕರಣಗಳಲ್ಲಿ ವಿಶೇಷ ತಂತ್ರಾಂಶದ ಮೂಲಕ ದೋಷ ಪತ್ತೆಹಚ್ಚಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ...
ಬಿಬಿಎಂಪಿ ಆಯಕ್ತ ಜಿ. ಕುಮಾರ್ ನಾಯಕ್
ಬಿಬಿಎಂಪಿ ಆಯಕ್ತ ಜಿ. ಕುಮಾರ್ ನಾಯಕ್
Updated on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯಲ್ಲಿ ಸುಮಾರು 35 ಸಾವಿರ ಪ್ರಕರಣಗಳಲ್ಲಿ ವಿಶೇಷ ತಂತ್ರಾಂಶದ ಮೂಲಕ ದೋಷ ಪತ್ತೆಹಚ್ಚಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯಕ್ತ ಜಿ. ಕುಮಾರ್ ನಾಯಕ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಹೆಸರು ಹಾಗೂ ಭಾವಚಿತ್ರ ಅದಲು ಬದಲಾಗುವುದು, ಪುನರಾವರ್ತನೆಯಾಗುವುದು ಸೇರಿದಂತೆ ವಿವಿಧ ತಪ್ಪುಗಳಿರುವ ಸುಮಾರು 35 ಸಾವಿರ ಪ್ರಕರಣಗಳನ್ನು ಮತದಾರರ ಪಟ್ಟಿಯಲ್ಲಿ ಗುರುತಿಸಲಾಗಿದೆ.

ಚುನಾವಣಾ ಆಯೋಗ ಇಂತಹ ದೋಷಗಳ ಪತ್ತೆಗೆ ವಿಶೇಷ ತಂತ್ರಾಂಶ ಬಳಸುತ್ತಿದ್ದು, ಎಲ್ಲ ತಪ್ಪುಗಳನ್ನು ಪರಿಶೀಲಿಸಲಾಗುತ್ತಿದೆ. ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವುದು ಸವಾಲಿನ ಕೆಲಸವಾಗಿರುವುದರಿಂದ ದೋಷಗಳು ಕಂಡು ಬರುತ್ತಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಪಟ್ಟಿಯಲ್ಲಿ ಹೆಚ್ಚಿನ ತಪ್ಪು ಕಂಡುಬರುವ ಸಾಧ್ಯತೆಯಿಲ್ಲ. ಬಾಂಗ್ಲಾದೇಶದ ನಿವಾಸಿಗಳ ಹೆಸರು ಹಾಗೂ ವಿಳಾಸಗಳು ಪಟ್ಟಿಯಲ್ಲಿ ಕಂಡುಬಂದರೆ ಸಂಶಯಾಸ್ಪದವಾಗಿ ನೋಡಬೇಕು ಹಾಗೂ ಇಂತಹ ಅರ್ಜಿಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮತಗಟ್ಟೆಗೆ 1,500 ಮತದಾರರು: 198 ವಾರ್ಡ್ ಗಳಲ್ಲಿ 6,733 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ವ್ಯಾಪ್ತಿಯಲ್ಲಿ 37,38,735 ಪುರುಷ ಮತದಾರರು, 33,82,304 ಮಹಿಳಾ ಮತದಾರರು ಸೇರಿದಂತೆ ಒಟ್ಟು 71,22,165 ಮತದಾರರಿದ್ದಾರೆ. ಪ್ರತಿ ಮತಗಟ್ಟೆಗೆ 1,500 ಮತದಾರರನ್ನು ನಿಗದಿಪಡಿಸಿದ್ದು, ಇದಕ್ಕಿಂತ ಹೆಚ್ಚಿದ್ದರೆ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗುವುದು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಜು.15ರವರೆಗೆ ಅವಕಾಶವಿದ್ದರೂ, ಜು.5ರೊಳಗೆ ಅರ್ಜಿ ಸಲ್ಲಿಸಿದರೆ ಈ ಬಾರಿಯ ಚುನಾವಣೆಗೆ ಮತದಾನ ಮಾಡುವ ಅವಕಾಶ ಪಡೆದುಕೊಳ್ಳಬಹುದು. ಹೆಸರು ಸೇರ್ಪಡೆ ಪ್ರಕ್ರಿಯೆಗೆ 10 ದಿನಗಳ ಕಾಲಾವಕಾಶ ಬೇಕಿರುವುದರಿಂದ ಶೀಘ್ರದಲ್ಲಿ ಅರ್ಜಿ ನೀಡಿದರೆ ಮತದಾನ ಮಾಡಬಹುದು. ನಂತರ ಅಧಿಕಾರಿಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗುವುದರಿಂದ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಪ್ರಕ್ರಿಯೆ ತಡವಾಗಬಹುದು ಎಂದರು.

ಸಿಬ್ಬಂದಿ ನೇಮಕ:

ಮತದಾರರ ಪಟ್ಟಿ ಹಾಗೂ ಚುನಾವಣಾ ಪ್ರಕ್ರಿಯೆ ಮೇಲೆ ಕಣ್ಣಿಡಲು ಐವರು ವಿಶೇಷ ಚುನಾವಣಾ ವೀಕ್ಷಕರು ಹಾಗೂ 27 ಚುನಾವಣಾ ವೀಕ್ಷಕರನ್ನು ನೇಮಿಸಲಾಗಿದೆ. ಅಭ್ಯರ್ಥಿಗಳು ರು.5 ಲಕ್ಷದವರೆಗೆ ಖರ್ಚು ಮಾಡಲು ಅವಕಾಶವಿದ್ದು, ಇದರ ಪರಿಶೀಲನೆಗೆ 88 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 4-5 ವಾರ್ಡ್‍ಗಳಿಗೆ ಒಬ್ಬರಂತೆ 5 ಚುನಾವಣಾಧಿಕಾರಿಗಳು, ವಾರ್ಡ್‍ಗೆ ಒಬ್ಬರಂತೆ 198 ಸಹಾಯಕ ಚುನಾವಣಾಧಿಕಾರಿಗಳು, 53 ಹೆಚ್ಚುವರಿ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣೆಯ ದಿನದಂದು ಅಂದಾಜು 7,979 ಪ್ರಿಸೈಡಿಂಗ್, 7,979 ಸಹಾಯಕ ಪ್ರಿಸೈಡಿಂಗ್, 19,678 ಮತಗಟ್ಟೆ ಸಿಬ್ಬಂದಿ ಸೇರಿದಂತೆ ಒಟ್ಟು 35,636 ಅಧಿಕಾರಿ ಹಾಗೂ ಸಿಬ್ಬಂದಿ ನೇಮಿಸಲಾಗಿದೆ ಎಂದರು.

ವಿದ್ಯುನ್ಮಾನ ಮತಯಂತ್ರಗಳ ಮೂಲಕ ನಡೆಯುವ ಚುನಾವಣೆಗೆ 9,309 ಕಂಟ್ರೋಲ್ ಯೂನಿಟ್ ಹಾಗೂ 11,635 ಮತಯಂತ್ರಗಳನ್ನು ಬಳಸಲಾಗುತ್ತಿದೆ. ಯಂತ್ರ ತೊಂದರೆಗೆ ಒಳಗಾಗದಂತೆ ಎಚ್ಚರ ವಹಿಸಲಾಗಿದ್ದು, ಹೆಚ್ಚುವರಿ ಯಂತ್ರಗಳನ್ನೂ ನೀಡಲಾಗಿದೆ. ಯಂತ್ರ ಹಾಳಾದರೆ ಅರ್ಧಗಂಟೆಯೊಳಗೆ ಪರ್ಯಾಯ ಯಂತ್ರ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಮತದಾರರಿಗೆ ಅನುಕೂಲವಾಗುವಂತೆ ಮತದಾನ ಮಾಡುವ ಸ್ಥಳ ನೆಲಮಹಡಿಯಲ್ಲೇ ಇರುವಂತೆ ಹಾಗೂ ಒಂದನೇ ಮಹಡಿ ಹಾಗೂ ಕೆಳಮಹಡಿಯಲ್ಲಿ ಮತದಾನ ನಡೆಸದಂತೆ ಸೂಚನೆ ನೀಡಲಾಗಿದೆ ಎಂದರು.

ಜಾಗೃತಿಗೆ ಪ್ರಚಾರ: ಮತದಾನದ ಪ್ರಮಾಣ ಹೆಚ್ಚಿಸಲು ಪ್ರಚಾರ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಶೇಕಡಾವಾರು ಪ್ರಮಾಣ ಕಡಿಮೆಯಾಗುವ ಅಥವಾ ಹೆಚ್ಚಾಗುವ ನಿರೀಕ್ಷೆಯಿದ್ದರೂ, ಅಧಿಕಾರಿಗಳು ಪ್ರತಿ ಬಾರಿ ಸಾಧ್ಯವಾದಷ್ಟು ಪ್ರಮಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮತದಾನದ ದಿನ ರಜಾದಿನವಾಗಿರುವುದರಿಂದ ಪ್ರವಾಸಕ್ಕೆ ತೆರಳದೆ ಕಡ್ಡಾಯ ಮತದಾನ ಮಾಡಬೇಕು ಎಂದು ಸರ್ಕಾರಿ ನೌಕರರಿಗೂ ಸೂಚಿಸಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com