ಸಂಚಾರ ಪೊಲೀಸರ ಮೇಲೆ ನೈಜಿರಿಯಾ ಪ್ರಜೆಗಳ ಹಲ್ಲೆ

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಚಾಲಕರ ತಪಾಸಣೆ ಮಾಡುತ್ತಿದ್ದ ಪೊಲೀಸರ ಮೇಲೆ ನೈಜೀರಿಯಾ ಪ್ರಜೆಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ...
ಸಂಚಾರ ಪೊಲೀಸರ ಮೇಲೆ ನೈಜಿರಿಯಾ ಪ್ರಜೆಗಳ ಹಲ್ಲೆ (ಸಾಂದಱ್ಬಿಕ ಚಿತ್ರ)
ಸಂಚಾರ ಪೊಲೀಸರ ಮೇಲೆ ನೈಜಿರಿಯಾ ಪ್ರಜೆಗಳ ಹಲ್ಲೆ (ಸಾಂದಱ್ಬಿಕ ಚಿತ್ರ)

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಚಾಲಕರ ತಪಾಸಣೆ ಮಾಡುತ್ತಿದ್ದ ಪೊಲೀಸರ ಮೇಲೆ ನೈಜೀರಿಯಾ ಪ್ರಜೆಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಭಾನುವಾರ ರಾತ್ರಿ 1.45ರ ವೇಳೆಗೆ ಹುಳಿಮಾವು ಸಮೀಪದ ಗೊಟ್ಟಿಗೆರೆ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಆರೋಪಿಗಳು ಹುಳಿಮಾವು ಸಂಚಾರ ಠಾಣೆಯ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ವಾಸು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ಏನಾಯ್ತು:

ಸಂಚಾರ ಪೊಲೀಸರು ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ ಮದ್ಯಪಾನ ಮಾಡಿ ಚಾಲನೆ ಮಾಡುವ ವಾಹನ ಸವಾರರ ತಪಾಸಣೆ ಮಾಡುತ್ತಾರೆ. ಅದೇ ರೀತಿ ಭಾನುವಾರ ರಾತ್ರಿ ಹುಳಿಮಾವು ಸಂಚಾರ ಪೊಲೀಸರು ಪಾನಮತ್ತ ಚಾಲಕರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬಂದ ನೈಜೀರಿಯಾ ಪ್ರಜೆಗಳಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರು ಮದ್ಯ ಸೇವಿಸಿದ್ದುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿ ಕಾರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ಅದಕ್ಕೆ ವಿರೋಧ ವ್ಯಕ್ತಪಡಿಸಿದ ಆರೋಪಿಗಳು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿ ನಂತರ ಎಎಸ್‍ಐ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ವಾಹನ ಸಮೇತ ಪರಾರಿಯಾಗಿದ್ದಾರೆ. ವಾಸು ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದೂರು, ಬಂಧನ: ಹಲ್ಲೆಗೊಳಗಾದ ಪೊಲೀಸರು ಆರೋಪಿಗಳು ಸಂಚರಿಸುತ್ತಿದ್ದ ವಾಹನ ಸಂಖ್ಯೆ(ನಂ-ಕೆಎ19ಎನ್8263) ದಾಖಲಿಸಿಕೊಂಡು, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿ, ಘಟನೆ ನಡೆದಿರುವ ಸ್ಥಳದಲ್ಲಿದ್ದ ಸಿಸಿಟಿವಿಯ ದೃಶ್ಯಾವಳಿ ಪರಿಶೀಲಿಸಿ, ಐವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಿರುಕುಳ, ನೇಣು: ಪತಿ ಹಾಗೂ ಆತನ ಕುಟುಂಬ ಸದಸ್ಯರು ನೀಡಿದ ಕಿರುಕುಳದಿಂದ ಬೇಸತ್ತ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕದ ಹುಣಸೇಮಾರನಹಳ್ಳಿ ನಿವಾಸಿ ಶಿಲ್ಪ (24) ಮೃತರು. ಐದು ವರ್ಷಗಳ ಹಿಂದೆ ಆಟೋ ಚಾಲಕ ದಿನೇಶ್ ಜತೆ ಶಿಲ್ಪಾರ ವಿವಾಹವಾಗಿತ್ತು. ರಾತ್ರಿ ಎಲ್ಲರೂ ಮಲಗಿದ
ಮೇಲೆ ಶಿಲ್ಪಾ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿದೆ. ದಂಪತಿಗೆ ಎರಡು ವರ್ಷದ ಗಂಡು ಹಾಗೂ 10 ತಿಂಗಳ ಹೆಣ್ಣು ಮಗುವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com