ಚಲನಚಿತ್ರ ಕಾರ್ಮಿಕರ ವೇತನ ಬಿಕ್ಕಟ್ಟು ಶಮನ

ಕಾರ್ಮಿಕರ ವೇತನ ಪರಿಷ್ಕರಣೆ ವಿಚಾರದಲ್ಲಿ ಚಲನಚಿತ್ರ ಕಾರ್ಮಿಕರ ಒಕ್ಕೂಟ ಮತ್ತು ನಿರ್ಮಾಪಕರ ಸಂಘದ ನಡುವೆ ಬಹುದಿನಗಳಿಂದ ...
ಚಲನಚಿತ್ರ
ಚಲನಚಿತ್ರ

ಬೆಂಗಳೂರು: ಕಾರ್ಮಿಕರ ವೇತನ ಪರಿಷ್ಕರಣೆ ವಿಚಾರದಲ್ಲಿ ಚಲನಚಿತ್ರ ಕಾರ್ಮಿಕರ ಒಕ್ಕೂಟ ಮತ್ತು ನಿರ್ಮಾಪಕರ ಸಂಘದ ನಡುವೆ ಬಹುದಿನಗಳಿಂದ ತಲೆದೋರಿದ ಅಂತರಿಕ ಬಿಕ್ಕಟ್ಟು ಸದ್ಯಕ್ಕೆ ಶಮನವಾಗಿದೆ. ಹಿರಿಯ ನಟರಾದ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಮಧ್ಯಸ್ಥಿಕೆಯಲ್ಲಿ ಭಾನುವಾರ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಕಾರ್ಮಿಕರ ಒಕ್ಕೂಟ ಹಾಗೂ ನಿರ್ಮಾಪಕರ ಸಂಘದ ಮುಖಂಡರ ಸಭೆಯಲ್ಲಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.ಕಾರ್ಮಿಕರ ಬೇಡಿಕೆಯ ಇತ್ಯರ್ಥಕ್ಕಾಗಿ ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಸೇರಿದಂತೆ 9 ಜನರ ಸಮಿತಿಯನ್ನು ರಚಿಸಲು ಸಭೆ ನಿರ್ಧರಿಸಿದೆ. ಸಮಿತಿಯಲ್ಲಿ ಕಾರ್ಮಿಕರ ಒಕ್ಕೂಟದಿಂದ ಅಶೋಕ್, ರವೀಂದ್ರನಾಥ್ ಹಾಗೂ ಶಿವರಾಮು ಇದ್ದರೆ, ಜಯಣ್ಣ, ರಾಮು ಹಾಗೂ ಕೃಷ್ಣೇಗೌಡ ನಿರ್ಮಾಪಕರ ಸಂಘವನ್ನು ಪ್ರತಿನಿಧಿಸಲಿದ್ದಾರೆ. ಈ ಸಮಿತಿ ಏಪ್ರಿಲ್ 17 ರೊಳಗೆ ಕಾರ್ಮಿಕರ ವೇತನ ಪರಿಷ್ಕರಣೆಯ ಬೇಡಿಕೆಯ ಕುರಿತು ವರದಿ ನೀಡುವಂತೆ ಸಭೆ ತೀರ್ಮಾನ ತೆಗೆದುಕೊಂಡಿತು. ಸಭೆಯ ತೀರ್ಮಾನದಂತೆ ಕಾರ್ಮಿಕರ ಒಕ್ಕೂಟದ ಸದಸ್ಯರು ಈ ಹಿಂದಿನ ವೇತನದಂತೆಯೇ  ಕೆಲಸ ನಿರ್ವಹಿಸಲಿದ್ದು, ಏಪ್ರಿಲ್ 17ರ ನಂತರವೇ ಸಮಿತಿ ವರದಿಯನ್ನಾಧರಿಸಿ ಪರಿಷ್ಕೃತ ವೇತನ ಜಾರಿಗೆ ಬರಲಿದೆ.ಬಹು ಮುಖ್ಯವಾಗಿ ಏಪ್ರಿಲ್ 17 ರಂದು ನಿರ್ಮಾಪಕ ದಿ.ವೀರಸ್ವಾಮಿ ಅವರ ಜನ್ಮದಿನ. ಚಲನಚಿತ್ರ ಕಾರ್ಮಿಕರ ಸಂಘದ ಅಸ್ತಿತ್ವಕ್ಕೆ ಅವರೇ ಕಾರಣರು. ಹೀಗಾಗಿ ಅವರ ಜನ್ಮದಿನದ ಹೊತ್ತಿಗೆ ಕಾರ್ಮಿಕರ ಬೇಡಿಕೆಗಳು ಸೌಹಾರ್ದಯುತವಾಗಿ ಬಗೆಹರಿಯಬೇಕು ಎಂದು ಸಭೆ ತೆಗೆದುಕೊಂಡ ನಿರ್ಧಾರಕ್ಕೆ ತಾವು ಗೌರವ ನೀಡಿ, ಒಮ್ಮತದಿಂದ ಒಪ್ಪಿಕೊಳ್ಳಲಾಗಿದೆ ಎಂದು ಕಾರ್ಮಿಕರ ಒಕ್ಕೂಟದ ಮುಖಂಡ
ಅಶೋಕ್ ತಿಳಿಸಿದರು. ಕಾರ್ಮಿಕರು ಮತ್ತು ನಿರ್ಮಾಪಕರ ನಡುವೆ ಬಿಕ್ಕಟ್ಟು ಉಲ್ಬಣವಾಗುವುದಕ್ಕೆ ಈ ತನಕ ಯಾರೂ ಮಧ್ಯ ಪ್ರವೇಶಿಸದೆ ಇದ್ದದ್ದು ಕಾರಣವಾಗಿತ್ತು.ಆದರೆ, ಈಗ ಹಿರಿಯ ನಟರಾದ ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಮಧ್ಯ ಪ್ರವೇಶಿಸಿದ್ದಾರೆ. ಅವರಿಗೆ ನಟನೆಯ ಜತೆಗೆ ಚಿತ್ರ ನಿರ್ಮಾಣ ಅನುಭವವೂ ಇದೆ. ಹಾಗೆಯೇ  ಕಾರ್ಮಿಕರ ಕಷ್ಟವೂ ಗೊತ್ತಿದೆ. ಆದ್ದರಿಂದ ಬಿಕ್ಕಟ್ಟು ಸೌಹಾರ್ದಯುತವಾಗಿ ಬಗೆಹರಿಯುವ ವಿಶ್ವಾಸ ತಮಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿ.ಸೋಜಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ನಿರ್ಮಾ ಪಕರಾದ ರಾಮು, ಕೆ. ಮಂಜು, ಜಯಣ್ಣ, ಸಂದೇಶ್ ನಾಗರಾಜ್,ಸೂರಪ್ಪ ಬಾಬು, ಉಮೇಶ್ ಬಣಕಾರ್, ಜಯಸಿಂಹ, ರಮೇಶ್ ಯಾದವ್ ಜತೆಗೆ ಕಾರ್ಮಿಕ ಒಕ್ಕೂಟದ ಶಿವರಾಮು, ರವೀಂದ್ರನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com