ಕೆಪಿಎಸ್‍ಸಿ ನೇಮಕ: ಮಾರ್ಗಸೂಚಿ ಕೋರಿ ಕೇಂದ್ರಕ್ಕೆ ಪತ್ರ

ಕೆಪಿಎಸ್‍ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಏಕರೂಪ ರಾಷ್ಟ್ರೀಯ ನೀತಿ ಮತ್ತು ಮಾರ್ಗಸೂಚಿ ಹೊರಡಿಸುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದರ ಬಗ್ಗೆ ಚಿಂತನೆ ನಡೆಸಿದೆ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಕೆಪಿಎಸ್‍ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಏಕರೂಪ ರಾಷ್ಟ್ರೀಯ ನೀತಿ ಮತ್ತು ಮಾರ್ಗಸೂಚಿ ಹೊರಡಿಸುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದರ ಬಗ್ಗೆ ಚಿಂತನೆ ನಡೆಸಿದೆ ಎಂದು ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಹೈಕೋರ್ಟ್‍ಗೆ ಮೌಖಿಕವಾಗಿ ತಿಳಿಸಿದ್ದಾರೆ.

ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಹಾಗೂ ಏಳು ಸದಸ್ಯರ  ನಾಮ ನಿರ್ದೇಶನ ಪ್ರಶ್ನಿಸಿ ಟಿ.ಜೆ. ಅಬ್ರಾಹಂ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ವೇಳೆ ವಾದ ಮಂಡಿಸಿದ ಅಡ್ವೊಕೇಟ್ ಜನರಲ್, ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ನೇಮಕದಲ್ಲಿ ಕೇಂದ್ರ ಸರ್ಕಾರವು ಯಾವುದೇ ರೀತಿಯ ಮಾರ್ಗಸೂಚಿ ಹೊರಡಿಸಿಲ್ಲ. ಅಲ್ಲದೇ ಇದು ಸಚಿವ ಸಂಪುಟದ ನಿರ್ಧಾರವಷ್ಟೇ. ಈ ಹಂತದಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿರುವುದು ಸರಿಯಲ್ಲ. ಅಲ್ಲದೇ ಪ್ರಕರಣದಲ್ಲಿ ರಾಜ್ಯಪಾಲರನ್ನು ಪ್ರತಿವಾದಿ ಮಾಡಿದ್ದಾರೆ.

ಮನವಿಯಲ್ಲೂ ಸಹ ರಾಜ್ಯಪಾಲರಿಗೆ ಹೈಕೋರ್ಟ್ ನಿರ್ದೇಶನ ನೀಡಬೇಕೆಂದಿದೆ. ಸಂವಿಧಾನದ ಪ್ರಕಾರ ರಾಜ್ಯಪಾಲರು ಹೈಕೋರ್ಟ್‍ಗೆ ಉತ್ತರದಾಯಿ ಅಲ್ಲ. ಮಾರ್ಗಸೂಚಿಯ ಅನುಪಸ್ಥಿತಿಯಲ್ಲೂ ರಾಜ್ಯ ಸರ್ಕಾರ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡಬಹುದು. ಅಲ್ಲದೇ ಈಗಾಗಲೇ ರಾಜ್ಯ ಸರ್ಕಾರ ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ. ಈ ಕಾರಣಕ್ಕಾಗಿ ಅರ್ಜಿ ಶೀಘ್ರ ಇತ್ಯರ್ಥಪಡಿಸ ಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಕೆ. ಎಲ್.ಮಂಜುನಾಥ್ ಮತ್ತು ನ್ಯಾ.ಪಿ.ಬಿ.ಭಜಂತ್ರಿ ಅವರಿದ್ದ ವಿಭಾಗೀಯ ಪೀಠ, ಅನಪೇಕ್ಷಿತ ಅಭ್ಯರ್ಥಿಗಳನ್ನು ನೇಮಕ ಮಾಡಿದ್ದೇ ಆದಲ್ಲಿ ಮಾತ್ರ ಪ್ರಶ್ನಿಸಬಹುದು. ಅಲ್ಲದೇ ರಾಜ್ಯ ಪಾಲರಿಗೆ ಹೈ ಕೋರ್ಟ್ ನಿರ್ದೇಶನ ನೀಡ ಬೇಕೆಂದಿದೆ. ಈ ರೀತಿಯಾಗಿ ಹೈಕೋರ್ಟ್ ರಾಜ್ಯಪಾಲರಿಗೆ ನಿರ್ದೇಶನ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿತು. ಅರ್ಜಿಯಲ್ಲಿನ ಮನವಿಯಲ್ಲಿ ಈ ರೀತಿಯ ಕೆಲವು ತಾಂತ್ರಿಕ ದೋಷಗಳಿವೆ ಎಂದು ಪೀಠ ಅರ್ಜಿದಾರರಿಗೆ ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರು ಅರ್ಜಿ ತಿದ್ದುಪಡಿ ಮಾಡಿ ಸಲ್ಲಿಸುವುದಾಗಿ ಪೀಠಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು.

ರಾಜ್ಯ ಸಚಿವ ಸಂಪುಟದ ನಿರ್ಧಾರವೇನು?: ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್‍ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಗೂ ಸದಸ್ಯ ಸ್ಥಾನಕ್ಕೆ ಡಾ.ನಾಗಬಾಯಿ ಬಿ.ಬುಲ್ಲಾ, ಡಾ. ರವಿಕುಮಾರ್, ಸೈಯದ್ ಅಲ್ತಾಫ್ ಹುಸೇನ್, ರಘುನಂದನ್ ರಾಮಣ್ಣ, ಪ್ರೊ.ಎಚ್.ಗೋವಿಂದಯ್ಯ, ಮೃತ್ಯುಂಜಯ ಮತ್ತು ಮೈಕಲ್ ಸೈಮನ್ ಬಾರೆಟ್ಟೂ ಅವರ ಹೆಸರನ್ನು ನಾಮನಿರ್ದೇಶನ ಮಾಡಲು ತೀರ್ಮಾನಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com