ಒಂದೇ ರೀತಿಯ ಸಮಸ್ಯೆಗೆ ಪಿಐಎಲ್: ಅಸಮಾಧಾನ
ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿಯಾದರೆ ಒಂದು ಅರ್ಜಿ, ಒತ್ತುವರಿ ತೆರವುಗೊಳಿಸಲು ಹಾಗೂ ತೆರವುಗೊಳಿಸದಂತೆ ತಡೆಯಲು ಮತ್ತೊಂದು ಅರ್ಜಿ. ಹಾಗೆಯೇ ಟ್ರಾನ್ಸ್ ಫಾರ್ಮರ್ ತೆರವುಗೊಳಿಸಲು ಅದನ್ನು ತಡೆಹಿಡಿಯಲು, ಮರ ಕಡಿದರೆ ಒಂದು, ಕಡಿಯದಂತೆ ಸೂಚಿಸುವಂತೆ ಮತ್ತೊಂದು ಅರ್ಜಿ. ಅಂತೆಯೇ ಪಾದಚಾರಿ ಮಾರ್ಗದಲ್ಲಿ ಜಾಹೀರಾತು ಫಲಕ ಅಳವಡಿಸಲು ಕೋರಿ ಒಂದಾದರೆ ಅಳವಡಿಸಿದನ್ನು ತೆರವುಗೊಳಿಸಲು ಮತ್ತೊಂದು ಅರ್ಜಿ ಹೀಗೆ ಒಂದೇ ರೀತಿಯ ಸಮಸ್ಯೆಗೆ ಇಷ್ಟು ಪಿಐಎಲ್ ದಾಖಲಾದರೆ ಹೇಗೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನಗರದ ಪಾದಚಾರಿ ಮಾರ್ಗ ಒತ್ತುವರಿ ಹಾಗೂ ಪಾದಚಾರಿ ಮಾರ್ಗದಲ್ಲಿರುವ ಟ್ರಾನ್ಸ್ ಫಾರ್ಮರ್ ತೆರವುಗೊಳಿಸುವ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾ.ಕೆ.ಎಲ್.ಮಂಜುನಾಥ್ ಮತ್ತು ನ್ಯಾ.ಪಿ.ಬಿ.ಭಜಂತ್ರಿ ಅವರಿದ್ದ ವಿಭಾಗೀಯ ಪೀಠ ಒಂದೇ ಸಮಸ್ಯೆಗೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದೆ.
ಟ್ರಾನ್ಸ್ಫಾರ್ಮರನ್ನು ತೆರವುಗೊಳಿಸುವಂತೆ ಅರ್ಜಿ ಸಲ್ಲಿಕೆಯಾಗಿದೆ. ಈ ಹಿಂದೆ ಕೋರ್ಟ್ ನೀಡಿದ್ದ ಆದೇಶದಿಂದ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ ಫಾರ್ಮರ್‍ಗಳನ್ನು ತೆರವು ಮಾಡಲಾಗುತ್ತಿದೆ. ಟ್ರಾನ್ಸ್ ಫಾರ್ಮರ್, ವಿದ್ಯುತ್ ಕಂಬಗಳನ್ನು ತೆರವು ಗೊಳಿಸುತ್ತ ಹೋದಲ್ಲಿ ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾಗುತ್ತದೆ. ಆದ್ದರಿಂದ ವಾಸ್ತವ ಸಂಗತಿ ಮತ್ತು ನೈಜ ಸ್ಥಿತಿಗತಿಯನ್ನು ಅರ್ಜಿದಾರರು ಅರಿತು ಕೊಳ್ಳಬೇಕು ಎಂದು ತಿಳಿಸಿ ವಿಚಾರಣೆ ಮುಂದೂಡಿತು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ