ಮಾಜಿ ಸೈನಿಕನ ಮೇಲೆ ಹಲ್ಲೆ: ಎಸ್ಐ ಗಂಗಣ್ಣ ಅಮಾನತು

ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಆಂಬುಲೆನ್ಸ್ ಗೆ ತೆರಳಲು ಅನುವು ಮಾಡಿಕೊಟ್ಟಿದ್ದ ಮಾಜಿ ಸೈನಿಕರೊಬ್ಬರ ಮೇಲೆ ಹಲ್ಲೆ ಮಾಡಿದ್ದ ಟ್ರಾಫಿಕ್ ಎಸ್ಐ..
ಟ್ರಾಫಿಕ್ ಎಸ್ಐ ಯಿಂದ ಮಾಜಿ ಯೋಧನ ಮೇಲೆ ಹಲ್ಲೆ (ಸಂಗ್ರಹ ಚಿತ್ರ)
ಟ್ರಾಫಿಕ್ ಎಸ್ಐ ಯಿಂದ ಮಾಜಿ ಯೋಧನ ಮೇಲೆ ಹಲ್ಲೆ (ಸಂಗ್ರಹ ಚಿತ್ರ)

ಬೆಂಗಳೂರು: ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಆಂಬುಲೆನ್ಸ್ ಗೆ ತೆರಳಲು ಅನುವು ಮಾಡಿಕೊಟ್ಟಿದ್ದ ಮಾಜಿ ಸೈನಿಕರೊಬ್ಬರ ಮೇಲೆ ಹಲ್ಲೆ ಮಾಡಿದ್ದ ಟ್ರಾಫಿಕ್ ಎಸ್ಐ ಅನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಡಿಸಿಪಿ ಎಂಎನ್ ಬಿಆರ್ ಪ್ರಸಾದ್ ಅವರು ಮಾಜಿ ಯೋಧ ನಾಗಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದ ಟ್ರಾಫಿಕ್ ಎಸ್ಐ ಗಂಗಣ್ಣ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ವೇಳೆ ಮಾತನಾಡಿದ ಡಿಸಿಪಿ ಪ್ರಸಾದ್ ಅವರು, ಯಾವುದೇ ಕಾರಣಕ್ಕೂ ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂದು ಬೆಳಗ್ಗೆ ಸುರಿದ ಜೋರು ಮಳೆಯಿಂದಾಗಿ ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಅಂಡರ್ ಪಾಸ್ ನಲ್ಲಿ ಆಂಬುಲೆನ್ಸ್ ಸುಮಾರು 30ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಆ್ಯಂಬುಲೆನ್ಸ್ ನಲ್ಲಿ ರೋಗಿಯೊಬ್ಬರಿಗೆ ತುರ್ತಾಗಿ ರಕ್ತವನ್ನು ಸಾಗಿಸಲಾಗುತ್ತಿತ್ತು. ಆದರೆ ಟ್ರಾಫಿಕ್ ನಿಂದಾಗಿ ಆ್ಯಂಬುಲೆನ್ಸ್ ಸುಮಾರು ಅರ್ಧ ಗಂಟೆಗೂ ಅಧಿಕಕಾಲ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಈ ಸಂದರ್ಭದಲ್ಲಿ ಸೈಕಲ್ ನಲ್ಲಿ ಬರುತ್ತಿದ್ದ ಮಾಜಿ ಸೈನಿಕ ನಾಗಪ್ಪ ಎಂಬುವವರ ಬಳಿ ಆಂಬುಲೆನ್ಸ್ ಚಾಲಕ ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ತೆಗೆಯಲು ಮನವಿ ಮಾಡಿಕೊಂಡಿದ್ದರು.

ಬಳಿಕ ನಾಗಪ್ಪನವರು, ಟ್ರಾಫಿಕ್ ನಲ್ಲಿದ್ದ ಪೇದೆ ರಾಮಮೂರ್ತಿಯವರ ಬಳಿ ಹಗ್ಗ ಬಿಚ್ಚಲು ಕೇಳಿದ್ದಾರೆ. ಪೇದೆ ಹಗ್ಗ ತೆಗೆಯಲು ಅನುಮತಿ ನೀಡಿದ ಬಳಿಕ ರಸ್ತೆಯಲ್ಲಿ ಬ್ಯಾರಿಕೇಡ್ ಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ತೆಗೆದು ಆಂಬುಲೆನ್ಸ್ ಹೋಗಲು ಅನುವು ಮಾಡಿಕೊಟ್ಟಿದ್ದರು. ಆಗ ಏಕಾಏಕಿ, ಸದಾಶಿವನಗರ ಠಾಣೆಯ ಸಂಚಾರಿ ಎಸ್ಐ ರಂಗಪ್ಪ ಅವರು ಮಾಜಿ ಸೈನಿಕ ನಾಗಪ್ಪ ಮೇಲೆ ಹಲ್ಲೆ ನಡೆಸಿದ್ದರು.

ಆಗ ಎಸ್ಐ ಮತ್ತು ನಾಗಪ್ಪ ನಡುವೆ ಮಾತಿನ ಚಕಮಕಿ ನಡೆಯಿತು. ಆಂಬುಲೆನ್ಸ್ ತೆರಳಲು ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ತೆಗೆದದ್ದೇ ತಪ್ಪು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ರಂಗಪ್ಪ, ನಾಗಪ್ಪ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದರು. ಎಸ್ಐ ರಂಗಪ್ಪ ಅವರ ಈ ದುರ್ನಡತೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com