ಕತ್ತು ಕೊಯ್ದು ಒಂಟಿ ಮಹಿಳೆಯ ಕೊಲೆ

ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ದೊಮ್ಮಲೂರಿನಲ್ಲಿ ಸೋಮವಾರ ಹಾಡಹಗಲೇ ನಡೆದಿದೆ...
ಕೊಲೆಯಾದ ಮಹಿಳೆ
ಕೊಲೆಯಾದ ಮಹಿಳೆ
Updated on

ಬೆಂಗಳೂರು: ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ದೊಮ್ಮಲೂರಿನಲ್ಲಿ ಸೋಮವಾರ ಹಾಡಹಗಲೇ ನಡೆದಿದೆ.

ಒಡಿಶಾ ಮೂಲದ ಪ್ರಾಚಿ(30) ಕೊಲೆಯಾದವರು. ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಬಂದ ಪರಿಚಯಸ್ಥ ವ್ಯಕ್ತಿ ಬಸುದೇವ್ ಹತ್ಯೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರಿಗೂ ಹಳೆಯ ಪರಿಚಯವಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಚಿ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕಾಲ್ ಸೆಂಟರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. 8 ತಿಂಗಳ ಹಿಂದೆ ಒಡಿಶಾ ಮೂಲದ ವ್ಯಕ್ತಿ, ವಿಪ್ರೋದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ದೇಬಶಿಶ್ ಎಂಬುವವರೊಂದಿಗೆ ವಿವಾಹವಾಗಿದ್ದರು. ದಂಪತಿ ದೊಮ್ಮಲೂರಿನ 1ನೇ ಕ್ರಾಸ್ `ಎ' ಮುಖ್ಯರಸ್ತೆಯಲ್ಲಿ ನೆಲೆಸಿದ್ದರು. ದೇಬಶಿಶ್ ನ್ನು ಬೆಂಗಳೂರಿಗೆ ಕರೆಸಿ ಕೆಲಸಕೊಡಿಸಿದ್ದು ಬಸುದೇವ್ ಆಗಿದ್ದರಿಂದ ಇಬ್ಬರಿಗೂ ಆತ ಪರಿಚಯವಿದ್ದ. ಹಾಗಾಗಿ ಮನೆಗೆ ಆಗಾಗ ಬಂದು ಹೋಗುತ್ತಿದ್ದ.

ಅದೇ ರೀತಿ ಸೋಮವಾರ ಬಸುದೇವ್ ಸುಮಾರು 2 ಗಂಟೆ ವೇಳೆಗೆ ಪ್ರಾಚಿ ಮನೆಗೆ ಬಂದಿದ್ದ. ಆದರೆ, ಮಧ್ಯಾಹ್ನ ಆತ ಮೂರನೇ ಮಹಡಿಯಿಂದ ಓಡುತ್ತಿದ್ದ. ಅಷ್ಟರಲ್ಲಿ ಸದ್ದು ಕೇಳಿದ ಮನೆ ಮಾಲೀಕರು ಹೊರಗೆ ಬಂದರು. ಅಷ್ಟರಲ್ಲಿ ಬಸುದೇವ್  ಕೈಯಲ್ಲಿ ಚಾಕು ಹಾಗೂ ಬಟ್ಟೆಯೆಲ್ಲ ರಕ್ತಸಿಕ್ತವಾಗಿದ್ದುದು ಕಂಡು ಬಂದಿದೆ. ತಕ್ಷಣ ಮನೆ ಮಾಲೀಕರು ಸಹಾಯಕ್ಕಾಗಿ ಕೂಗಿದ್ದಾರೆ. ನೆರವಿಗೆ ಧಾವಿಸಿದ ಸ್ಥಳೀಯರು ಆತನನ್ನು ಹಿಡಿದು, ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಣಕಾಸು ವಿಚಾರ ಕಾರಣ?
ಮೂವರೂ ಒಡಿಶಾ ಮೂಲದವರಾಗಿದ್ದು ಬಸುದೇವ್ ಗೆ ವ್ಯಾಪಾರದಲ್ಲಿ ಸುಮಾರು ರು. 1 ಕೋಟಿ ನಷ್ಟವಾಗಿತ್ತು. ಹಾಗಾಗಿ ದೇಬಶಿಶ್ ಹಣ ನೀಡುತ್ತಿದ್ದರು. ಇತ್ತೀಚೆಗೆ ರು. 25 ಸಾವಿರ ನೀಡಿದ್ದರು. ಪಡೆದ ಹಣವನ್ನು ಆತ ಹಿಂತಿರುಗಿಸಿರಲಿಲ್ಲ. ಈ ವಿಚಾರವಾಗಿ ಜಗಳ ನಡೆದು ಕೊಲೆಗೆ ಕಾರಣ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸತೀಶ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲಸೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳೆಯ ಕೊಲೆ ಆರೋಪಿ ಬಂಧನ
ನೀಲಗಿರಿ ತೋಪೊಂದರಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿ, ಸೀಮೆಎಣ್ಣೆ ಸುರಿದು ಮೃತದೇಹವನ್ನು ಸುಟ್ಟುಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಎಚ್ ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಸೋಹಾರಬ್ ಅಲಿಶೇಖ್(24) ಬಂಧಿತ. ಈತ ವಂದನಾ ಎಂಬಾಕೆಯನ್ನು ಫೆ.27ರಂದು ಹತ್ಯೆ ಮಾಡಿದ್ದ. ಆರೋಪಿಯು ವಂದನಾಳನ್ನು ಪ್ರೀತಿಸುತ್ತಿದ್ದ. ವಿವಾಹವಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಹೊಂದಿದ್ದ. ನಂತರ ವಿವಾಹವಾಗುವುದಿಲ್ಲ ಎಂದು ಹೇಳಿದ್ದ. ಆದರೆ ಆಕೆ ತನ್ನನ್ನೆ ವಿವಾಹವಾಗುವಂತೆ ಪಟ್ಟುಹಿಡಿದಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ, ಆಕೆಯನ್ನು ನೀಲಗಿರಿ ತೋಪಿಗೆ ಕರೆದೊಯ್ದು ಈ ಕೃತ್ಯ ಎಸಗಿದ್ದನು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com