ರೋಗಿ ಸಾವು: ಆಸ್ಪತ್ರೆಯಲ್ಲಿ ಸಂಬಂಧಿಗಳಿಂದ ದಾಂದಲೆ

ಎಚ್1 ಎನ್1 ರೋಗಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿ ಮೃತ ರೋಗಿಯೊಬ್ಬರ ಸಂಬಂಧಿಗಳು ವಸಂತನಗರದಲ್ಲಿರುವ ಮಹಾವೀರ್ ಜೈನ್ ಆಸ್ಪತ್ರೆಯ...
ರೋಗಿ ಸಾವು: ಆಸ್ಪತ್ರೆಯಲ್ಲಿ ಸಂಬಂಧಿಗಳಿಂದ ದಾಂದಲೆ

ಬೆಂಗಳೂರು: ಎಚ್1 ಎನ್1 ರೋಗಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿ ಮೃತ ರೋಗಿಯೊಬ್ಬರ ಸಂಬಂಧಿಗಳು ವಸಂತನಗರದಲ್ಲಿರುವ ಮಹಾವೀರ್ ಜೈನ್ ಆಸ್ಪತ್ರೆಯ ಐಸಿಯು ಗಾಜು, ಬೆಲೆಬಾಳುವ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಶನಿವಾರ ಬೆಳಗ್ಗೆ ಘಟನೆ ನಡೆದಿದ್ದು ಈ ಸಂಬಂಧ ಆಸ್ಪತ್ರೆಯ ಆಡಳಿತ ಮಂಡಳಿ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಯಲಹಂಕ ನಿವಾಸಿ ಅಲ್ಲಾ ಬಾಬೆ (54) ಎಂಬುವರಿಗೆ ತೀವ್ರ ಕೆಮ್ಮು, ಉಸಿರಾಟದ ತೊಂದರೆ ಹಾಗೂ ಉಗುಳಿನಲ್ಲಿ ರಕ್ತ ಕಾಣಿಸಿಕೊಂಡಿದ್ದ ಕಾರಣ ಫೆ.26ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಸ್ವ್ಯಾಬ್ ಪರೀಕ್ಷೆ ನಡೆಸಿದಾಗ ಎಚ್1ಎನ್1 ಪಾಸಿಟಿವ್ ಎಂಬುದು ದೃಢಪಟ್ಟಿತ್ತು. ರೋಗಿ ಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಅಲ್ಲದೇ ಸ್ಥಿತಿಗತಿ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿತ್ತು. ಉತ್ತಮ ಚಿಕಿತ್ಸೆ ನಡುವೆ ರೋಗಿ ಅಲ್ಲಾ ಬಾಬೆ ಶನಿವಾರ ಬೆಳಗ್ಗೆ 6.30ರ ಸುಮಾರಿಗೆ ನಿಧನರಾಗಿದ್ದಾರೆ. ಈ ಬಗ್ಗೆ ಎಲ್ಲಾ ಮಾಹಿತಿಗಳನ್ನು ಜಿಲ್ಲಾ ಆರೋಗ್ಯ ಅ„ಕಾರಿಗಳಿಗೆ ನೀಡಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಫೂಲ್‍ಚಂದ್ ಜೈನ್ ತಿಳಿಸಿದ್ದಾರೆ. ವೈದ್ಯರ ಮೇಲೆ ಹಲ್ಲೆ: ಅಲ್ಲಾ ಬಾಬೆ ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಕುಪಿತಗೊಂಡ ಸಂಬಂಧಿಗಳು ಆಸ್ಪತ್ರೆಯಲ್ಲಿ ಗಲಾಟೆ ಆರಂಭಿಸಿದರು.

ಐಸಿಯು ಗಾಜುಗಳು, ಸ್ವಾಗತಕಾರರ ಕೊಠಡಿಯಲ್ಲಿರುವ ಗಾಜುಗಳನ್ನು ಒಡೆದು ಹಾಕಿದ್ದಾರೆ. ಲಕ್ಷಾಂತರ ರು. ಬೆಲೆ ಬಾಳುವ ವೈದ್ಯಕೀಯ ಯಂತ್ರಗಳನ್ನು ಧ್ವಂಸಗೊಳಿಸಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿಗೆ ಬೆದರಿಕೆ ಹಾಕಿ ವೈದ್ಯ ಡಾ.ಮೊರ್ಕೆಲ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ರೋಗಿಗಳಿಗೂ ತುಂಬಾ ತೊಂದರೆಯಾಗಿ ಆಸ್ಪತ್ರೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ಫುಲ್‍ಚಂದ್ ಹೇಳಿದ್ದಾರೆ.
ಆಸ್ಪತ್ರೆಯ ನಿರ್ಲಕ್ಷ್ಯ?: ಆಸ್ಪತ್ರೆಗೆ ದಾಖಲಾದ ದಿನದಿಂದ ತಾಯಿಯ ಆರೋಗ್ಯದ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿರಲಿಲ್ಲ. ದಿನಕ್ಕೆ ರು.12 ರಿಂದ ರು. 15 ಸಾವಿರ ಬಿಲ್ ಮಾಡುತ್ತಿದ್ದರು. ಆದರೆ, ಆರೋಗ್ಯದಲ್ಲಿ ಸ್ವಲ್ಪವೂ ಚೇತರಿಕೆ ಕಂಡು ಬರುತ್ತಿರಲಿಲ್ಲ. ನರ್ಸಗಳು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಅಲ್ಲಾ ಬಾಬೆ ಅವರ ಪುತ್ರಿ ನಿರುಪಮಾ ಮಾದ್ಯಮಗಳ ಮುಂದೆ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com