ಐಟಿ ಹಬ್‍ಗೆ ಸಿಗುತ್ತಾ ಐಐಟಿ?

ಐಐಟಿ ನಮ್ಮೂರಿಗಿರಲಿ ಎಂದು ಹತ್ತಾರು ಜಿಲ್ಲೆಗಳು ಸರ್ಕಾರದ ಮುಂದೆ ಒತ್ತಡ ತರಲಾರಂಬಿsಸಿವೆ. ಇನ್ನು ಕೆಲವು ಜಿಲ್ಲೆಗಳು ಜಾಗವನ್ನು ಗುರುತಿಸಿ, ಐಐಟಿಗೆ ಸೂಕ್ತ ಜಾಗವೂ ಸಿದ್ಧವಿದೆ ಎಂದು ಮನವರಿಕೆ ಮಾಡಿಕೊಡಲಾರಂಭಿಸಿವೆ...
ಬೆಂಗಳೂರು
ಬೆಂಗಳೂರು

ಬೆಂಗಳೂರು: ಐಐಟಿ ನಮ್ಮೂರಿಗಿರಲಿ ಎಂದು ಹತ್ತಾರು ಜಿಲ್ಲೆಗಳು ಸರ್ಕಾರದ ಮುಂದೆ ಒತ್ತಡ ತರಲಾರಂಭಿಸಿವೆ. ಇನ್ನು ಕೆಲವು ಜಿಲ್ಲೆಗಳು ಜಾಗವನ್ನು ಗುರುತಿಸಿ, ಐಐಟಿಗೆ ಸೂಕ್ತ ಜಾಗವೂ ಸಿದ್ಧವಿದೆ ಎಂದು ಮನವರಿಕೆ ಮಾಡಿಕೊಡಲಾರಂಭಿಸಿವೆ. ಈ ನಡುವೆ ರಾಜಧಾನಿ ಬೆಂಗಳೂರು ಸಹ ಐಐಟಿಗೆ ಸೂಕ್ತ ಸ್ಥಳ ಎಂಬುದು ಬೆಂಗಳೂರಿಗರ ಅಭಿಪ್ರಾಯ.

ಬೆಂಗಳೂರು ಐಟಿ ಹಬ್. ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಬೆಳವಣಿಗೆ ಕಂಡು ವಿಶ್ವವೇ ಬೆಕ್ಕಸಬೆರಗಾಗಿ ನೋಡುತ್ತಿರುವ ಹೊತ್ತಿನಲ್ಲಿ ಐಐಟಿಯಂತಹ ತಾಂತ್ರಿಕ ಶಿಕ್ಷಣ ಸಂಸ್ಥೆ ರಾಜಧಾನಿಯಲ್ಲೇ ಇರಬೇಕೆಂದು ಐಟಿಪತಿಗಳು ಹೇಳುತ್ತಾರೆ. ತಾಂತ್ರಿಕ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳನ್ನು ಈ ಕುರಿತು ಮಾತನಾಡಿಸಿದಾಗ ಐಐಟಿ ಬೆಂಗಳೂರಿಗೇ ಸರಿ ಎಂದು ಅಭಿಪ್ರಾಯಪಟ್ಟರು. ಐಐಟಿ ಆರಂಭವಾಗುವುದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಿಲ್ಲ, ಆದ್ಯತೆಯೂ ಇರದು. ಸ್ಥಳೀಯ ಜಾಗ ಆ ಸಂಸ್ಥೆಗೆ ಕೊಡುವ ಹೊರತಾಗಿ ನಯಾ ಪೈಸೆ ಉಪಯೋಗವಿಲ್ಲ. ಹೀಗಾಗಿ ದೂರದ ಉತ್ತರ ಕರ್ನಾಟಕವೋ, ಮಧ್ಯಕರ್ನಾಟಕವೋ ಸೂಕ್ತವಲ್ಲವೇ ಅಲ್ಲ. ಹಿಂದುಳಿದ ಪ್ರದೇಶ ಎಂತಲೋ, ಸುಲಭವಾಗಿ ಜಾಗ ಲಭ್ಯತೆ ಇದೆ ಎಂತಲೋ ಅಥವಾ ರಾಜಕೀಯ ಕಾರಣಕ್ಕೆ ಐಐಟಿಯನ್ನು ರಾಜ್ಯದ ಯಾವುದೋ ಒಂದು ಮೂಲೆಯಲ್ಲಿ ಸ್ಥಾಪಿಸುವುದು ಸರಿಯಲ್ಲ ಎಂದು ತಮ್ಮ ವಾದ ಮುಂದಿಡುತ್ತಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಭಾರತೀಯ ವಿಜ್ಞಾನ ಸಂಸ್ಥೆ, ಐಐಎಂ ಸೇರಿದಂತೆ ಹತ್ತಾರು ಸಂಶೋಧನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿಗೆ ಯಾರೂ ಸಹ ಸುಲಭವಾಗಿ ಬಂದುಹೋಗಬಹುದು, ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ ಎಂಬ ಕಾರಣಕ್ಕೆ ಈ ಸಂಸ್ಥೆಗಳ ಸಾಲಿನಲ್ಲಿ ಬರಬೇಕು ಎಂಬ ಮಾತು ಇದೆ.

ಬೆಂಗಳೂರಿನಲ್ಲಿ ಜಾಗದ ಕೊರತೆ ಬರಬಹುದು ಎಂದು ಹೇಳಲಾಗುತ್ತದೆಯಾದರೂ. ಐಐಟಿಯಂತಹ ಸಂಸ್ಥೆ ಸ್ಥಾಪನೆಗೆ ಬೆಂಗಳೂರೇ ಸೂಕ್ತ ಎನಿಸಿದ ಸಂದರ್ಭದಲ್ಲಿ ಜಾಗತಕ್ಕೆ ಕೊರತೆಯಾಗದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.  ಅಂತಾರಾಷ್ಟ್ರೀಯ ವಿಮಾ್ನ ನಿಲ್ದಾಣಕ್ಕೆ  ಹೊಂದಿಕೊಂಡಂತೆ ಅಥವಾ ಬೆಂಗಳೂರು ನಗರ ವ್ಯಾಪ್ತಿಯಿಂದ 25-30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಾಗ ಗುರುತು ಮಾಡುವುದು ಕಷ್ಟವೇನಲ್ಲ ಎಂದು ವಿವರಿಸುತ್ತಾರೆ.

ಬೆಂಗಳೂರು ಹೊರತುಪಡಿಸಿ ಯಾವುದೇ ಊರಿಗೆ ಐಐಟಿ ಕೊಟ್ಟರೂ ಅಡ್ಡಿ ಇಲ್ಲ ಎಂದು ಕೆಲ ರಾಜಕೀಯ ಪಂಡಿತರು ತಮ್ಮ ಅಭಿಪ್ರಾಯ ಹೊರಳಿಸಿದ್ದಾರಾದರೂ, ಒಟ್ಟಾರೆ ಸಮಗ್ರವಾಗಿ ಮಾಹಿತಿ ಕ್ರೋಡೀಕರಿಸಿದರೆ ಇತರೆ ಊರುಗಳಿಗಿಂತ ಬೆಂಗಳೂರು ಸೂಕ್ತ ಎನಿಸುತ್ತದೆ. ಐಐಟಿಗೆ ಬಂದು ಹೋಗುವಂತಹ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರೊಫೆಸರ್, ತಜ್ಞರುಗಳಿಗೆ ಬೆಂಗಳೂರು ತಲುಪುವುದೇ ಅತಿ ಸುಲಭ. ಮೂಲಭೂತ ಸೌಕರ್ಯ ಅಭಿವೃದ್ಧಿ ಶೀಘ್ರವಾಗಿ ಮುಗಿಸಲು ಈ ಊರೇ ಸೂಕ್ತ. ಜೊತೆಗೆ ಬೆಂಗಳೂರು ಮತ್ತು ಹೊರವಲಯದಲ್ಲಿ ಸೇರಿಕೊಂಡರೆ 70ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ಕಣ್ಣೆದುರಿಗೆ ಐಐಟಿ ಇದ್ದರೆ ಈ ವಿದ್ಯಾರ್ಥಿಗಳಿಗೆ ಹೆಚ್ಚಿನ  ಪ್ರೇರೇಪಣೆ ಸಿಕ್ಕಂತೆ. ಇತರೆ ನಗರ ಪಟ್ಟಣಗಳಿಗೆ ಹೋಲಿಸಿದರೆ ಬೆಂಗಳೂರಿನ ವಾತಾವರಣ ಹೆಚ್ಚು ಸೂಕ್ತವಾಗಿರುತ್ತದೆ.

ಭವಿಷ್ಯದಲ್ಲಿ ಐಐಟಿಯು ನಡೆಸಬಹುದಾದ ಸಂಯೋಜನಾ ಕಾರ್ಯಗಳಿಗೆ ರಾಜಧಾನಿಯಲ್ಲಿ ಸಿಗುವಷ್ಟು ಪ್ರೋತ್ಸಾಹ, ಸಹಕಾರ ಬೇರೆಲ್ಲೂ ಸಿಗದು. ರಾಜ್ಯದ ಶಿಕ್ಷಣ, ರಾಜಕೀಯ, ಉದ್ಯೋಗ ಸೇರಿದಂತೆ ಹತ್ತು ಹಲವು ವಿಚಾರಗಳಲ್ಲಿ ರಾಜಧಾನಿಯೇ ಕೇಂದ್ರೀಕೃತ ಪ್ರದೇಶ. ಎಲ್ಲರೂ ಅರಸಿಬರುವುದು ಇಲ್ಲಿಗೆ. ಒಟ್ಟಾರೆ ಬೆಂಗಳೂರಿನಲ್ಲಿ ಐಐಟಿ ನಿರ್ಮಾಣವಾದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಮೆರಗು ಮೂಡಲಿದೆ ಎಂಬ ಆಶಾಭಾವನೆಯೂ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com