ಪದವಿಪೂರ್ವ ಇಲಾಖೆ ಸಹಾಯವಾಣಿ ಬದಲು

`ಪದವಿಪೂರ್ವ ಶಿಕ್ಷಣ ಇಲಾಖೆ ಸಂವೇದನಾ ರಹಿತವಾಗಿದೆ, ಇದೇ ಶೀರ್ಷಿಕೆ ಕೊಡಿ' ಇಲಾಖೆಯ ಬೇಜವಾಬ್ದಾರಿ ನಡೆಗಳಿಗೆ ಪಿಯು ನಿರ್ದೇಶಕಿ ಸುಷ್ಮಾ ಗೋಡ್‍ಬೊಳೆ ನೀಡಿರುವ ಉದ್ಧತನದ ಪ್ರತಿಕ್ರಿಯೆಯಿದು...
ಪದವಿಪೂರ್ವ ಇಲಾಖೆ
ಪದವಿಪೂರ್ವ ಇಲಾಖೆ

ಬೆಂಗಳೂರು: `ಪದವಿಪೂರ್ವ ಶಿಕ್ಷಣ ಇಲಾಖೆ ಸಂವೇದನಾ ರಹಿತವಾಗಿದೆ, ಇದೇ ಶೀರ್ಷಿಕೆ ಕೊಡಿ' ಇಲಾಖೆಯ ಬೇಜವಾಬ್ದಾರಿ ನಡೆಗಳಿಗೆ ಪಿಯು ನಿರ್ದೇಶಕಿ ಸುಷ್ಮಾ ಗೋಡ್‍ಬೊಳೆ ನೀಡಿರುವ ಉದ್ಧತನದ ಪ್ರತಿಕ್ರಿಯೆಯಿದು.

ಪರೀಕ್ಷೆಗೆ ಒಂದು ದಿನ ಇರುವಾಗ ಯಾವುದೇ ಮಾಹಿತಿಯಿಲ್ಲದೇ ಸಹಾಯವಾಣಿ ಬದಲಾಯಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರಮದ ಬಗ್ಗೆ ಪ್ರಶ್ನಿಸಿದಾಗ ಕೋಪಗೊಂಡ ನಿರ್ದೇಶಕಿ ಇಂತಹ ಉತ್ತರ ನೀಡಿದ್ದಾರೆ. ಬುಧವಾರ ಮಧ್ಯಾಹ್ನದಿಂದ ಇಲಾಖೆಯ ಎಲ್ಲ ದೂರವಾಣಿ ಸಂಖ್ಯೆ ಬದಲಾಗಿದೆ. ಇದರಿಂದ ಸಹಾಯವಾಣಿ ಸಂಖ್ಯೆಯೂ ಬದಲಾಗಿದೆ. ಕಚೇರಿ ದೂರವಾಣಿಗಳು ಹಾಳಾಗಿದ್ದರಿಂದ ಅನಿವಾರ್ಯವಾಗಿ ಬೇರೆ ಸಂಖ್ಯೆ ನೀಡಬೇಕಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈಗಾಗಲೇ ವೆಬ್‍ಸೈಟ್‍ನಲ್ಲಿ ಹಾಕಲಾಗಿದೆ. ಇದಲ್ಲದೇ ಅನೇಕ ವಿದ್ಯಾರ್ಥಿಗಳು ನನಗೂ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಕಳೆದ ವಾರ ನಿರ್ದೇಶಕಿ ಸುಷ್ಮಾ, ಪತ್ರಿಕಾಗೋಷ್ಠಿಯಲ್ಲಿ ಬೇರೊಂದು ಸಹಾಯವಾಣಿ ಸಂಖ್ಯೆ ನೀಡಿದ್ದರು. ಆದರೆ, ಪರೀಕ್ಷೆ ಹಿಂದಿನ ದಿನ ಸಹಾಯವಾಣಿ ಸಂಖ್ಯೆ ಬದಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇಲಾಖೆಯ ಬೇಜವಾ ಬ್ದಾರಿ ಒಪ್ಪಿಕೊಳ್ಳುವ ಬದಲು ನಿರ್ದೇಶಕರು ವಾದಕ್ಕೆ ಇಳಿದು, ತಮ್ಮ ನಡೆ ಸಮರ್ಥಿಸಿಕೊಂಡರು. ಮತ್ತೊಂದೆಡೆ ಇಲಾಖೆಯ ಸಹಾಯವಾಣಿ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಹಾಗೂ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸದಿರುವುದು ಬೆಳಕಿಗೆ ಬಂದಿದೆ. ನಾಲ್ಕು ವಿಸ್ತರಣಾ ಸಂಖ್ಯೆ ಹೊಂದಿದ್ದ ಸಹಾಯವಾಣಿಗೆ ದಿನಕ್ಕೆ ಕೇವಲ 10-12 ಕರೆಗಳು ಬರುತ್ತಿವೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಆದರೆ, ನಿರ್ದೇಶಕರ ವೈಯಕ್ತಿಕ ಮೊಬೈಲ್‍ಗೆ 200ಕ್ಕೂ ಅಧಿಕ ಕರೆಗಳು ಬಂದಿವೆ ಎಂದು ಹೇಳುವ ಮೂಲಕ ಇಲಾಖೆಯ ಕಾರ್ಯವೈಖರಿಯನ್ನು ತಾವೇ ಬಿಚ್ಚಿಟ್ಟಿದ್ದಾರೆ.

ಗುರುವಾರದಿಂದ ಆರಂಭವಾಗುತ್ತಿರುವ ಪದವಿಪೂರ್ವ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಸಹಾಯವಾಣಿ ಅಥವಾ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಸುಷ್ಮಾ ತಿಳಿಸಿದ್ದಾರೆ.

ಸಿಸಿಟಿವಿಗೆ ಸರ್ಕಾರದಅನುಮತಿ ದೊರೆತಿಲ್ಲ
ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುತ್ತೇವೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹಾಗೂ ಪಿಯು ನಿರ್ದೇಶಕರಿ ಸುಷ್ಮಾ ಪ್ರತ್ಯೇಕ ಸಂದರ್ಭಗಳಲ್ಲಿ ಘೋಷಿಸಿದ್ದರು. ವಿಚಿತ್ರವೆಂದರೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಂದ ಪ್ರಸ್ತಾಪಕ್ಕೆ ಅನುಮತಿ ದೊರೆತಿಲ್ಲ. ಸಚಿವರು ಹೇಳಿದರೂ ಇಲಾಖೆ ಯಲ್ಲಿ ಅನುಷ್ಠಾನಕ್ಕೆ ಬಾರದಿರುವುದು ಆಶ್ಚರ್ಯ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಯು ನಿರ್ದೇಶಕಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಒಪ್ಪಿಗೆ ದೊರೆಯದಿರುವುದರಿಂದ ಸಿಸಿಟಿವಿ ಅಳವಡಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ತಪ್ಪಿತಸ್ಥರ ಮಾಹಿತಿಯಿಲ್ಲ!

ನಿರಂತರವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿರುವ ಆರೋಪಿಗಳ ಬಗ್ಗೆ ಮಾಹಿತಿ ಇಲ್ಲ, ಮಾಹಿತಿ ಸಿಕ್ಕ ಬಳಿಕ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪಿಯು ನಿರ್ದೇಶಕಿ ಸುಷ್ಮಾ ಗೋಡ್‍ಬೊಳೆ ತಿಳಿಸಿದ್ದಾರೆ. ಕಳೆದ ಒಂದು ದಶಕದಲ್ಲಿ ಶಿಕ್ಷಣ ಇಲಾಖೆಯ ನಾನಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯನ್ನು ಕೆಲ ನಿರ್ದಿಷ್ಟ ಆರೋಪಿಗಳು ಸೋರಿಕೆ ಮಾಡುತ್ತಿದ್ದಾರೆ. ಆದರೆ, ಪ್ರಕರಣ ಬಹಿರಂಗಗೊಂಡ ಕೆಲ ದಿನಗಳ ಬಳಿಕ ಜಾಮೀನಿನ ಮೇಲೆ ಬಂದು ಮತ್ತೆ ಸೋರಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಸಮಯದಲ್ಲಿ
ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲು ಈ ಹಿಂದೆ ಸರ್ಕಾರ ನಿರ್ಧರಿಸಿತ್ತು. ಈ ಬಗ್ಗೆ ನಿರ್ದೇಶಕರನ್ನು ಪ್ರಶ್ನಿಸಿ ದಾಗ, `ಇಂತಹ ಆರೋಪಿಗಳ ಬಗ್ಗೆ ನನಗೆ ಯಾರೂ ಮಾಹಿತಿ ನೀಡಿಲ್ಲ, ಮುಂದೆ ನೋಡುತ್ತೇನೆ' ಎಂಬ ಹಾರಿಕೆ ಉತ್ತರ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com