ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅನುಮಾನಾಸ್ಪದ ಸಾವು

ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರು ಸೋಮವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ...
ಡಿಕೆ ರವಿ (ಸಂಗ್ರಹ ಚಿತ್ರ)
ಡಿಕೆ ರವಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರು ಸೋಮವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಈ ಹಿಂದೆ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಮತ್ತು ಪ್ರಸ್ತುತ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಡಿಕೆ ರವಿ ಅವರ ಸಾವು ಆತ್ಮಹತ್ಯೆ ಎಂದು ಕಂಡಬಂದರೂ ಅವರ ಸಾವಿನ ಹಿಂದೆ ಹಲವು ಅನುಮಾನಗಳು ಮೂಡುತ್ತಿವೆ. ಕೋರಮಂಗಲದ ಅಪಾರ್ಟ್ ಮೆಂಟ್ ನಲ್ಲಿ ರವಿ ಅವರ ದೇಹ ನೇಣು ಬಿಗಿದೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿಂದೆ ವಾಣಿಜ್ಯ ತೆರಿಗೆ ಇಲಾಖೆಯ ಮೂಲಕವಾಗಿ ಡಿಕೆ ರವಿ ಅವರು ಹಲವು ಖ್ಯಾತ ಉದ್ಯಮಿಗಳು ಮತ್ತು ತೆರಿಗೆ ಕಳ್ಳರ ಮನೆಗಳ ಮೇಲೆ ದಾಳಿ ಮಾಡಿ ತೆರಿಗೆ ಚೋರರ ಅಕ್ರಮವನ್ನು ಬಯಲು ಮಾಡಿದ್ದರು.

ಇತ್ತೀಚೆಗೆ ಕೋಲಾರ ಡಿಸಿಯಾಗಿದ್ದ ರವಿ ಅವರು ತಮ್ಮ ಪ್ರಾಮಾಣಿಕತೆಯಿಂದ ಖಡಕ್‌ ಅಧಿಕಾರಿ ಎಂದೇ ಹೆಸರು ಗಳಿಸಿದ್ದರು. ಸಾಮಾನ್ಯ ಕೃಷಿ ಕುಟುಂಬದಿಂದ ಬಂದಿದ್ದ ಡಿ ಕೆ ರವಿ ಅವರು ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಬಿಎಸ್‌ಸಿ ಕೃಷಿ ಪದವಿ, ಆನಂತರ ನವದೆಹಲಿಯ ಐಎಆರ್‌ಐ ವಿಶ್ವವಿದ್ಯಾನಿಲಯದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದರು. ಕಲಬುರಗಿ, ಕೊಪ್ಪಳ, ಕೋಲಾರದಲ್ಲಿ ಸೇವೆ ಸಲ್ಲಿಸಿ ಅಪಾರ ಜನಪ್ರಿಯತೆ ಗಳಿಸಿದ್ದ ರವಿ ಅವರು, ಕಳೆದ ಅಕ್ಟೋಬರ್‌ನಿಂದ ಬೆಂಗಳೂರಿನ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.

ಇದಲ್ಲದೆ ಕೋಲಾರದ ಡಿಸಿಯಾಗಿ ಸೇವೆ ಸಲ್ಲಿಸಿದ್ದ ಅವರು ಕೋಲಾರದಲ್ಲಿನ ಅಕ್ರಮ ಭೂ ಒತ್ತವರಿದಾರರ ವಿರುದ್ಧ ಸಮರವನ್ನೇ ಸಾರಿ ಸರ್ಕಾರಿ ಗೋಮಾಳ, ಸರ್ಕಾರಿ ಭೂಮಿ ಮತ್ತು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದ್ದರು. ಹೀಗಾಗಿ ಕೋಲಾರ ಜಿಲ್ಲೆಯಾದ್ಯಂತ ರವಿ ಅವರು ಪ್ರಮಾಣಿಕ ಅಧಿಕಾರಿ ಎಂದೇ ಖ್ಯಾತಿ ಗಳಿಸಿದ್ದರು. ಇವಿಷ್ಟೇ ಅಲ್ಲದೇ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಕೋಲಾರ ಜನತೆಗೆ ರವಿ ಆಧುನಿಕ ಭಗೀರಥರಾಗಿದ್ದರು. ಕೋಲಾರದ ಸಾಕಷ್ಟು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೋಲಾರದ ಜನತೆಯ ನೀರಿನ ದಾಹವನ್ನು ತಮ್ಮ ಕೈಲಾದ ಮಟ್ಟಿಗೆ ನೀಗಿಸಿದ್ದರು. ಅಷ್ಟೇ ಅಲ್ಲ ಅಕ್ರಮವಾಗಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಲೇಔಟ್ ಗಳನ್ನು ಮಾಡಿಕೊಂಡಿದ್ದ ಭೂಗಳ್ಳರನ್ನು ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಿದ್ದರು. ಇದೇ ಕಾರಣಕ್ಕಾಗಿ ರವಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ತೀವ್ರ ಒತ್ತಡ ಕೂಡ ಇತ್ತು ಮತ್ತು ಇದಕ್ಕಾಗಿಯೇ ಅವರನ್ನು ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಕೋಲಾರದ ಭೂಮಾಫಿಯಾ ಮತ್ತು ತೆರಿಗೆ ಕಳ್ಳರ ವಿರೋಧ ಎದುರಿಸುತ್ತಿದ್ದ ಡಿಕೆ ರವಿ ಅವರಿಗೆ ಕಳೆದ ಕೆಲ ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ತಿಳಿದುಬಂದಿದೆ. ಹೀಗಾಗಿ ರವಿ ಅವರ ದಿಢೀರ್ ಸಾವಿನ ಹಿಂದೆ ಹಲವು ಅನುಮಾನಗಳು ಮೂಡುತ್ತಿವೆ. ಇನ್ನು ಪ್ರಸ್ತುತ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಡಿಕೆ ರವಿ ಅವರ ದಿಢೀರ್ ಸಾವಿನಿಂದ ಕೋಲಾರ ಜಿಲ್ಲೆಯ ಶಾಸಕರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದು, ಶ್ರೀನಿವಾಸಪುರ ಶಾಸಕ ರಮೇಶ್‌ ಕುಮಾರ್‌, ಮಾಜಿ ಶಾಸಕ ವೈ.ಸಂಪಂಗಿ ಸೇರಿದಂತೆ ಅನೇಕ ಹಿರಿಯ ರಾಜಕಾರಣಿಗಳು ರವಿ ಅವರ ಅಪಾರ್ಟ್‌ಮೆಂಟ್‌ನತ್ತ ಧಾವಿಸಿದ್ದಾರೆ.

ರವಿ ಆಪಾರ್ಟ್ ಮೆಂಟ್ ಗೆ ಆಗಮಿಸಿದ್ದ ಮೂವರು ಅಪರಿಚಿತರು

ಇನ್ನು ಕೋರಮಂಗಲ ಬಳಿಯ ತಮ್ಮ ಸೇಂಟ್ ಜಾನ್ಸ್ ವುಡ್ ಅಪಾರ್ಟ್ ಮೆಂಟ್ ಬಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ರವಿ ಅವರನ್ನು ಕಾಣಲು ಇಂದು ಸಂಜೆ 5.30ರಲ್ಲಿ ಮೂವರು ವ್ಯಕ್ತಿಗಳು ಆಗಮಿಸಿದ್ದರು ಎಂದು ತಿಳಿದುಬಂದಿದೆ. ತಮ್ಮನ್ನು ತಾವು ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡಿದ್ದ ಅವರು ರವಿ ಅವರನ್ನು ಕಾಣಲು ಅಪಾರ್ಟ್ ಮೆಂಟ್ ಒಳಗೆ ಹೋಗಿದ್ದರು. ಆ ಬಳಿಕವೇ ರವಿ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com