ಮಹಿಳೆಯಿಂದ ರು.4.5 ಲಕ್ಷ ಎಗರಿಸಿ ಬೈಕ್‍ನಲ್ಲಿ ಪರಾರಿ

ಬ್ಯಾಂಕ್‍ನಿಂದ ಡ್ರಾ ಮಾಡಿ ರು.4.5 ಲಕ್ಷ ಹಣ ತೆಗೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಹಣವಿದ್ದ ಬ್ಯಾಗ್ ಕಸಿದು ಬೈಕ್‍ನಲ್ಲಿ ಪರಾರಿಯಾಗಿರುವ ಘಟನೆ ತಿಲಕನಗರದಲ್ಲಿ ಗುರುವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬ್ಯಾಂಕ್‍ನಿಂದ ಡ್ರಾ ಮಾಡಿ ರು.4.5 ಲಕ್ಷ ಹಣ ತೆಗೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಹಣವಿದ್ದ ಬ್ಯಾಗ್ ಕಸಿದು ಬೈಕ್‍ನಲ್ಲಿ ಪರಾರಿಯಾಗಿರುವ ಘಟನೆ ತಿಲಕನಗರದಲ್ಲಿ ಗುರುವಾರ ನಡೆದಿದೆ.

ತಿಲಕ್‍ನಗರ ನಿವಾಸಿ ಅಣ್ಣಮ್ಮ (45) ಗುರುವಾರ ಮಧ್ಯಾಹ್ನ 12 ಗಂಟೆಗೆ ಜಯನಗರ 9ನೇ ಬ್ಲಾಕ್‍ನಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಗೆ ತೆರಳಿ ಹಣ ಡ್ರಾ ಮಾಡಿ, ಬ್ಯಾಗ್‍ನಲ್ಲಿಟ್ಟುಕೊಂಡು ಹೊರ ಬಂದಿದ್ದಾರೆ. ಮನೆಗೆ ಹೋಗಲು ಸಮೀಪದ ಬಸ್ ನಿಲ್ದಾಣಕ್ಕೆ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಕಪ್ಪು ಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಬ್ಯಾಗ್ ಕಿತ್ತು ಪರಾರಿಯಾಗಿದ್ದಾರೆ. ಅಣ್ಣಮ್ಮ ನೆರವಿಗಾಗಿ ಚೀರಿಕೊಂಡರಾದರೂ ಸ್ಥಳೀಯರು ಬರುವಷ್ಟರಲ್ಲಿ ಆರೋಪಿಗಳು ಕಣ್ಮರೆಯಾಗಿದ್ದಾರೆ. ಈ ಸಂಬಂಧ ತಿಲಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

1.5 ಕೆಜಿ ಚಿನ್ನಾಭರಣ, ನಗದು ವಶ: ಸೂಕ್ತ ದಾಖಲೆಗಳಿಲ್ಲದೇ ಕೇರಳಕ್ಕೆ ಸಾಗಿಸಲಾಗುತ್ತಿದ್ದ 1.5 ಕೆಜಿ ಚಿನ್ನಾಭರಣ ಹಾಗೂ ರು. 4.7 ಲಕ್ಷ ನಗದನ್ನು ವಶಪಡಿಸಿಕೊಂಡಿರುವ ಚಿಕ್ಕಪೇಟೆ ಪೊಲೀಸರು, ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಕೇರಳ ತ್ರಿಶೂರ್‍ನ ವಿಜಯನ್(50) ಬಂಧಿತ. ಬುಧವಾರ ರಾತ್ರಿ ಮೈಸೂರು ಬ್ಯಾಂಕ್ ವೃತ್ತ ಸಮೀಪ ಆರೋಪಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ಸಿಬ್ಬಂದಿ ತಡೆದು ಪರಿಶೀಲಿಸಿದಾಗ ಆತನ ಬಳಿ ಚಿನ್ನ ಹಾಗೂ ನಗದು ಪತ್ತೆಯಾಯಿತು.

ಠಾಣೆಗೆ ಕರೆತಂದು ವಿಚಾರಿಸಿದಾಗ ಕೇರಳದ ತ್ರಿಶೂರ್‍ನಲ್ಲಿ ಚಿನ್ನದ ವ್ಯಾಪಾರಿ ಪಾಲ್‍ಸನ್ ಎಂಬುವರ ಬಳಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಚಿನ್ನಾಭರಣ ಖರೀದಿಸಿ ವಾಪಸ್ ಕೇರಳಕ್ಕೆ ಹೋಗುತ್ತಿದ್ದೆ ಎಂದಿದ್ದಾನೆ. ಆದರೆ, ಈ ಬಗ್ಗೆ ಯಾವುದೇ ದಾಖಲೆ ಪತ್ರ ಇರಲಿಲ್ಲ. ಹೀಗಾಗಿ, ಚಿನ್ನ, ನಗದು ಜಪ್ತಿ ಮಾಡಿ ಬಂಧಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಪೇಟೆ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com