ಮಾಧ್ಯಮ ಉದ್ಯಮ ಆಗೋದು ಬೇಡ: ಸಿಎಂ

ಮಾಧ್ಯಮ ಉದ್ಯಮ ಆಗಬಾರದು. ಅದು ವೃತ್ತಿಯೇ ಆಗಿರಬೇಕು. ಇಲ್ಲವಾದಲ್ಲಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮಾಧ್ಯಮ ಉದ್ಯಮ ಆಗಬಾರದು. ಅದು ವೃತ್ತಿಯೇ ಆಗಿರಬೇಕು. ಇಲ್ಲವಾದಲ್ಲಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಶುಕ್ರವಾರ ವಾರ್ತಾ ಇಲಾಖೆಯಲ್ಲಿ ಏರ್ಪಡಿಸಿದ್ದ `2012-13 ನೇ ಸಾಲಿನ ಟಿ.ಎಸ್. ಆರ್.ಸ್ಮಾರಕ, ಮೊಹರೆ ಹಣಮಂತರಾಯ, ಅಭಿವೃದ್ಧಿ ಹಾಗೂ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಮಾಡಿ ಮಾತನಾಡಿದರು.

ಸ್ವಾತಂತ್ರ್ಯಪೂರ್ವ, ನಂತರ ಹಾಗೂ ಇತ್ತೀಚಿನ ಮಾಧ್ಯಮಗಳನ್ನು ಗಮನಿಸಿದರೆ ಮಾಧ್ಯಮ ಎಂಬುದು ಒಂದು ದೊಡ್ಡ ಉದ್ಯಮದಂತೆ ಬೆಳೆಯುವತ್ತ ಸಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಇಂದು ಪತ್ರಿಕಾ ಮಾಧ್ಯಮ ಎಂಬುದು ರಾಜಕಾರಣಿಗಳು ಹಾಗೂ ಉದ್ಯಮಿಗಳ ಕೈಯಲ್ಲಿದೆ. ಹೀಗಿದ್ದಾಗ ಏಕಮುಖ ಸುದ್ದಿಗಳು ಮಾತ್ರ ಬಿತ್ತರವಾಗುತ್ತವೆ. ಇದರಿಂದ ಯಾರಿಗೂ ಉಪಯೋಗವಿಲ್ಲ. ಬದಲಾಗಿ ಸಮಾಜವನ್ನು ತಿದ್ದುವ ಹಾಗೂ ಸುದ್ದಿ ಬಿತ್ತರದಲ್ಲಿ  ಯಾವುದೇ ತಾರತಮ್ಯ ಇರಬಾರದು. ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೋದ್ಯಮದ ಮೇಲೆ ಜನರು ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಮಾಧ್ಯಮ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಪತ್ರಿಕೋದ್ಯ ಮದ ಉದ್ದೇಶ ಸಾರ್ಥಕವಾಗಬೇಕು ಎಂದರು.

ಪತ್ರಿಕೋದ್ಯಮದ ವೃತ್ತಿಪರತೆ ವಸ್ತುನಿಷ್ಟವಾಗಿ ಇರಬೇಕು. ಆದರೆ ಇಂದು ಸುದ್ದಿಗಳನ್ನು ಹೆಚ್ಚು ವರ್ಣ ರಂಜಿತವಾಗಿಯೇ ಬಿಂಬಿಸುತ್ತಾರೆ. ಅದರ ಉದ್ದೇಶ ತಿಳಿಯದು. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಾರದು. ಹಾಗೂ  ದುರುಪಯೋಗವಾಗಬಾರದು ಹಾಗಾಗಿ ಉತ್ತಮ ಹಾಗೂ ಸಮಾಜಕ್ಕೆ ಒಳಿತಾಗುವ ವಸ್ತುನಿಷ್ಟ ಸುದ್ದಿ ನೀಡಿ. ಸಂವಿಧಾನದ ನಾಲ್ಕೂ ಅಂಗಗಳು ಸೇರಿ ಸಮಾಜದ ಉತ್ತಮ ಸ್ವಾಸ್ತ್ಯಕ್ಕಾಗಿ ಶ್ರಮಿಸೋಣ ಎಂದರು.

ಪ್ರಶಸ್ತಿ ಸ್ವೀಕರಿಸಿದ ಎನ್.ಅರ್ಜುನ್ ದೇವ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೃಶ್ಯಮಾಧ್ಯಮದ ಹಾವಳಿಯಿಂದ ಮುದ್ರಣ ಮಾಧ್ಯಮ ಮಸುಕಾಗಿದ್ದು, ಅನಿವಾರ್ಯವಾಗಿ ತನ್ನ ರೂಪ ಪರಿವರ್ತನೆ ಮಾಡಿಕೊಂಡು ಕೆಲಸ ಮಾಡುತ್ತಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ವ್ಯಾಪ್ತಿಗೆ ದೃಶ್ಯ ಮಾಧ್ಯಮಗಳನ್ನು ತಂದು ಕೆಲ ನಿಯಂತ್ರಣ ಹೇರುವ ಅಗತ್ಯವಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸಬೇಕು ಎಂದರು.

ಇದೇ ವೇಳೆ 2012-13ನೇ ಸಾಲಿನ ಟಿ.ಎಸ್.ಆರ್. ಸ್ಮಾರಕ, ಮೊಹರೆ ಹಣಮಂತರಾಯ, ಅಭಿವೃದ್ಧಿ ಹಾಗೂ ಪತ್ರಿಕೋದ್ಯಮ ಪ್ರಶಸ್ತಿಗೆ ಭಜನರಾದ 8 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್.ರೋಷನ್ ಬೇಗ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ನಾಗಾಂಬಿಕಾ ದೇವಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ನ್ಯಾ.ಅರಳಿ ನಾಗರಾಜ್ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com