ಪವರ್ ಫುಲ್ ಆಗಲು ಕೂಡಗಿ ಬೇಕು

ಕೂಡಗಿ ವಿದ್ಯುತ್ ಯೋಜನೆಗೆ ವಿರೋಧ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ರೈತರನ್ನು ಕೋರಿದ್ದಾರೆ...
ಇಂಧನ ಇಲಾಖೆ ಆಯೋಜಿಸಿದ್ದ `ರೈತರನ್ನು ರಕ್ಷಿಸಿ, ವಿದ್ಯುತ್ ಉಳಿಸಿ' ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಇಂಧನ ಇಲಾಖೆ ಆಯೋಜಿಸಿದ್ದ `ರೈತರನ್ನು ರಕ್ಷಿಸಿ, ವಿದ್ಯುತ್ ಉಳಿಸಿ' ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕೂಡಗಿ ವಿದ್ಯುತ್ ಯೋಜನೆಗೆ ವಿರೋಧ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ರೈತರನ್ನು ಕೋರಿದ್ದಾರೆ.

ಇಂಧನ ಇಲಾಖೆ ಆಯೋಜಿಸಿದ್ದ `ರೈತರನ್ನು ರಕ್ಷಿಸಿ, ವಿದ್ಯುತ್ ಉಳಿಸಿ' ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 70ರ ದಶಕದಲ್ಲಿ ಕರ್ನಾಟಕದಲ್ಲಿ ಬೇಡಿಕೆಗಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿತ್ತು, ಇಂದು ಶೇ.15ರಷ್ಟು ಕೊರತೆ ಇದೆ. ವಿದ್ಯುತ್ ಕೊರತೆಯನ್ನು ನೀಗಿಸುವ ಸಲುವಾಗಿ ಕೂಡಗಿ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಯೋಜನೆಯಿಂದ ರಾಜ್ಯಕ್ಕೆ 2000 ಮೆಗಾವ್ಯಾಟ್ ವಿದ್ಯುತ್ ಹೆಚ್ಚುವರಿಯಾಗಿ ಲಭ್ಯವಾಗುತ್ತದೆ. ಇದರಿಂದ ರಾಜ್ಯದ ವಿದ್ಯುತ್ ಕೊರತೆ ತಕ್ಕಮಟ್ಟಿಗೆ ನೀಗುತ್ತದೆ. ಆದರೆ, ಪರಿಸರವಾದಿಗಳು, ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.

ಸದ್ಯ ಲಭ್ಯವಿರುವ ವಿದ್ಯುತ್‍ನಲ್ಲಿ ಶೇ.36ರಿಂದ 38ರಷ್ಟು ವಿದ್ಯುತ್ ರೈತರ ಪಂಪ್‍ಸೆಟ್‍ಗಳಿಗೇ ಬಳಕೆಯಾಗುತ್ತಿದೆ. ಉಳಿದದ್ದು ಗೃಹೋಪಯೋಗಿ, ಕೈಗಾರಿಕೆ ಹಾಗೂ ಇತ್ಯಾದಿಗಳಿಗೆ ಬಳಕೆಯಾಗುತ್ತಿದೆ. ಇವೆಲ್ಲಾ ಅಂದಾಜಿನ ಲೆಕ್ಕವಷ್ಟೆ. ನಿಖಿರ ಮಾಹಿತಿ ಸಿಗುತ್ತಿಲ್ಲ. ಅದರಲ್ಲೂ ರೈತರ ಪಂಪ್‍ಸೆಟ್‍ಗಳಿಗೆ ಮೀಟರ್ ಇಲ್ಲದ ಕಾರಣ ಎಷ್ಟು ವಿದ್ಯುತ್ ಬಳಕೆಯಾಗುತ್ತಿದೆ ಎಂಬ ಮಾಹಿತಿ ಇಲ್ಲ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚು ವಿದ್ಯುತ್ ಪಂಪ್‍ಸೆಟ್‍ಗೆ ಬಳಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ 40 ಲಕ್ಷ ಪಂಪ್ ಸೆಟ್ ಇದ್ದರೂ ಅಲ್ಲಿ ಬಳಕೆಯಾಗುತ್ತಿರುವುದು ಶೇ.27ರಷ್ಟು ವಿದ್ಯುತ್. ಇನ್ನು ಆಂಧ್ರದಲ್ಲಿ 32 ಲಕ್ಷ ಪಂಪ್‍ಸೆಟ್‍ಗಳಿಗೆ ಶೇ.38ರಿಂದ 39ರಷ್ಟು ವಿದ್ಯುತ್ ಬಳಕೆಯಾಗುತ್ತಿದೆ. ಒಟ್ಟಾರೆ ತಾಂತ್ರಿಕ, ವಿದ್ಯುತ್ ರವಾನೆಯಲ್ಲಿ ಎಷ್ಟು ಸೋರಿಕೆಯಾಗುತ್ತಿದೆ ಎಂಬುದರ ಲೆಕ್ಕವೇ ಸಿಗುತ್ತಿಲ್ಲ. ಒಂದು ವೇಳೆ ಲೆಕ್ಕ ಸಿಕ್ಕರೆ ನಷ್ಟ ತಡೆಯಲು ಕ್ರಮಕೈಗೊಳ್ಳಲು ಸಾಧ್ಯವಿದೆ ಎಂದರು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರವು ಎನರ್ಜಿ ಆಡಿಟ್ ಮಾಡವಂತೆ ಹೇಳುತ್ತಲೇ ಇದೆ. ಇನ್ನೊಂದೆಡೆ ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವ ಕಾರಣ ಸರ್ಕಾರದ ಮೇಲೆ ಭಾರ ಹೆಚ್ಚಾಗುತ್ತಿದೆ. ಪಂಪ್‍ಸೆಟ್‍ಗಳಿಗೆ ವಿದ್ಯುತ್ ನೀಡಲು 10 ವರ್ಷದ ಹಿಂದೆ ರು.1200 ಕೋಟಿ ವೆಚ್ಚವಾದರೆ, ಈ ಬಜೆಟ್‍ನಲ್ಲಿ ರು.7,500 ಕೋಟಿ ತೆಗೆಡಿದಲಾಗಿದೆ. ಈ ಭಾರ ಮನಗಾಣಬೇಕು. ಪಂಪ್ ಸೆಟ್ ಗಳಿಗೆ ಎಷ್ಟು ವಿದ್ಯುತ್ ಹೋಗುತ್ತಿದೆ ಎಂಬುದೂ ಮುಖ್ಯ ಎಂದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ರೈತನಿಗೆ ಸಂಬಳ ಇಲ್ಲ, ಬಡ್ತಿ ಇಲ್ಲ, ಪಿಂಚಣಿ ಇಲ್ಲ, ಲಂಚ ಇಲ್ಲ, ನಿವೃತ್ತಿಯೂ ಇಲ್ಲ. ಇಂತಹ ಸನ್ನಿವೇಶದಲ್ಲಿ ರೈತ ಬದುಕಬೇಕು. ಈ ದೇಶದ ಬೆಂಬಲವಾಗಿ ನಿಂತಿಹ ರೈತನಿಗೆ ಬೆಂಬಲವಾಗಿ ನಿಲ್ಲವೆಂಬುದು ಸರ್ಕಾರದ ಆಲೋಚನೆ. ಈ ನಿಟ್ಟಿನಲ್ಲಿ ರೈತರ ಅಪೇಕ್ಷೆ ಏನೆಂದು ಕೇಳಲು ಈ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ನೀರು ಹಾಗೂ ವಿದ್ಯುತ್‍ನ ಸದ್ಬಳಕೆ ಕುರಿತಾಗಿ ಕೃಷಿ, ತೋಟಗಾರಿಕೆ, ಸಹಕಾರ, ನೀರಾವರಿ ಇಲಾಖೆ ಸೇರಿಕೊಂಡು ಏನು ಮಾಡಬೇಕೆಂಬ ಬಗ್ಗೆ ಆಲೋಚಿಸುತ್ತಿದೆ. ಅದಕ್ಕಿಂತ ಮುಖ್ಯವಾಗಿ ರೈತರ ಧ್ವನಿ, ಚಿಂತನೆ, ಅನುಭವ ಸರ್ಕಾರಕ್ಕೆ ಅವಶ್ಯಕತೆ ಇದೆ ಎಂದರು.

ಸಹಕಾರ ಸಚಿವ ಮಹದೇವ ಪ್ರಸಾದ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ಮೇಲ್ಮನೆ ಸದಸ್ಯ ವೀರಕುಮಾರ್, ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರವಿಕುಮಾರ್, ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಮತ್ತಿತರರು ಹಾಜರಿದ್ದರು.


ಮೀಟರ್ ಪ್ರಸ್ತಾಪಿಸಿದ ಸಿಎಂಗೆ ಮಾತಿನ ಗುದ್ದು!
ಇಂಧನ ಇಲಾಖೆ ಆಯೋಜಿಸಿದ್ದ `ರೈತರನ್ನು ರಕ್ಷಿಸಿ, ವಿದ್ಯುತ್ ಉಳಿಸಿ' ಸಂವಾದ ಕಾರ್ಯಕ್ರಮ ಹಲವು ಸಂದೇಶ ರವಾನೆಗೆ ಸಾಕ್ಷಿಯಾಯಿತು. ಎನರ್ಜಿ ಆಡಿಟ್ ಬಗ್ಗೆ ಮುಖ್ಯಮಂತ್ರಿಯವರು ಪ್ರಸ್ತಾಪಿಸಿದರೆ, ಯಾವುದೇ ಕಾರಣಕ್ಕೂ ಪಂಪ್ ಸೆಟ್‍ಗೆ ಮೀಟರ್ ಅಳವಡಿಸಲು ಅವಕಾಶ ಕೊಡುವುದಿಲ್ಲ ಎಂದು ರೈತರು ಸ್ಪಷ್ಟ ನಿಲುವು ಪ್ರಕಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವಾಗ ಪಂಪ್‍ಸೆಟ್‍ಗೆ ಎಷ್ಟು ವಿದ್ಯುತ್ ಬಳಕೆಯಾಗುತ್ತಿದೆ ಎಂಬುದು ಗೊತ್ತಾಗಬೇಕಲ್ಲ ಎಂದು ಸೂಚ್ಯವಾಗಿ ಮೀಟರ್ ವಿಚಾರ ಪ್ರಸ್ತಾಪಿಸಿದರು.

ಇದರ ವಾಸನೆ ಅರಿತ ರೈತರು ಆ ಕ್ಷಣವೇ ಪ್ರತಿರೋಧ ತೋರಿಸಿದರು. ಯಾವುದೇ ಕಾರಣಕ್ಕೂ ಮೀಟರ್ ಹಾಕಲು ಅವಕಾಶ ಕೊಡುವುದಿಲ್ಲ ಎಂದು ರೈತರು ಗಟ್ಟಿದನಿಯಲ್ಲಿ ಹೇಳಿದರು. ಒಂದು ಕ್ಷಣ ಸಿಟ್ಟಾದ ಸಿಎಂ, ನಾವೀಗ ಮೀಟರ್ ಹಾಕುತ್ತೇವೆಂದು ಹೇಳಿಲ್ಲ, ತೀರ್ಮಾನವನ್ನೂ ಮಾಡಿಲ್ಲ. ನಿಮ್ಮ ಅಭಿಪ್ರಾಯ ಕೇಳಲು ಸಂವಾದ ಕರೆದಿದ್ದೇವೆ. ನೀವೇ ಸಲಹೆ ಕೊಡಿ ಎಂದಾಗ ಸಭೆ ತಣ್ಣಗಾಯಿತು. ಸದ್ಯದ ವಿದ್ಯುತ್ ಪರಿಸ್ಥಿತಿ, ಹೇಗೆ ನಿಭಾಯಿಸಬೇಕು, ರೈತರ ಸಹಕಾರ ಯಾವ ರೀತಿ ಇದೆ, ಸರ್ಕಾರ ಏನು ಮಾಡುತ್ತದೆ ಎಂಬ ಬಗ್ಗೆ ರೈತರಿಂದಲೇ ಅಭಿಪ್ರಾಯ ಪಡೆಯಬೇಕು. ತಜ್ಞರಿಂದ ಸಲಹೆ ಪಡೆಯಬೇಕು, ನಂತರ ಸರ್ಕಾರ ಮುಂದುವರಿಯಬೇಕೆಂಬುದು ಕಾರ್ಯಕ್ರಮದ ಉದ್ದೇಶ ಎಂದು ಡಿ.ಕೆ.ಶಿವಕುಮಾರ್ ಸಭೆಯಲ್ಲಿ ತಿಳಿಸಿದರು.

ವಿದ್ಯುತ್ ಇಲಾಖೆ ಎದುರಿಸುತ್ತಿರುವ ವಿದ್ಯುತ್ ಹಂಚಿಕೆ, ಹಣಕಾಸು ಕೊರತೆಯ ಬಗ್ಗೆ ಮತ್ತು ಸಮಸ್ಯೆ ನಿವಾರಣೆ ಬಗ್ಗೆ ಸೂಕ್ಷ್ಮವಾಗಿ ಮಾಹಿತಿ ನೀಡಿದ ಡಿ.ಕೆ.ಶಿವಕುಮಾರ್, ರೈತರಿಂದ ಸಲಹೆ ಬಯಸಿದರು. ಎಂ.ಪಿ.ನಾಡಗೌಡ, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಎಚ್.ಆರ್. ಬಸವರಾಜಪ್ಪ, ಚಾಮರಸಮಾಲೀ ಪಾಟೀಲ, ಕೆ.ಟಿ.ಗಂಗಾಧರ್ ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ರೈತರು ವಿದ್ಯುತ್ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು ಮತ್ತು ತಮ್ಮ ಅಪೇಕ್ಷೆಯನ್ನು ಮಂಡಿಸಿದರು. ಬೆಳಿಗ್ಗೆಯಿಂದ ಸಂಜೆವರೆಗೂ ಅಹವಾಲು ಆಲಿಕೆ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com