ಏಪ್ರಿಲ್‍ನಲ್ಲಿ ಸಂಪುಟ ಪುನಾರಚನೆ ಖಚಿತ

ಏಪ್ರಿಲ್‍ನಲ್ಲಿ ಸಂಪುಟ ಪುನಾರಚನೆ ನಡೆಯುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಮಾಗಡಿ: ಏಪ್ರಿಲ್‍ನಲ್ಲಿ ಸಂಪುಟ ಪುನಾರಚನೆ ನಡೆಯುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಾಲೂಕಿನ ಸೋಲೂರಿನಲ್ಲಿ ಆರ್ಯ ಈಡಿಗ ಸಂಘದ ಮಹಾಸಂಸ್ಥಾನ ಮಠದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ  ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಪುಟ ಪುನಾರಚನೆ ಬಗ್ಗೆ ಅನುಮಾನವೇ ಬೇಡ. ಆದರೆ ಸಂಪುಟದಲ್ಲಿ ಹೊಸಮುಖಗಳು ಬರುತ್ತಾರೋ ಅಥವಾ ಹಳೆಯ ಮುಖಗಳೇ ಇರುತ್ತವೆಯೋ ಎಂಬುದರ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದರು.

ಹಿಂದುಳಿದ ವರ್ಗದವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೇಲ್ವರ್ಗದ ಮಂದಿ ಸದಾ ಕಾಲು ಕೆರೆಯುತ್ತಾ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನವನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ದೇವರಾಜು ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರಿಗೂ ಈ ಅನುಭವಗಳಾಗಿವೆ. ಈಗ ನನ್ನನ್ನು ಕಾಲೆಳೆಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ರಮೇಶ್‍ಕುಮಾರ್ ಅವರು ಹಳ್ಳಿಗಳಲ್ಲಿ ಅನಧಿಕೃತ ಮದ್ಯ ಮಾರಾಟ ಹೆಚ್ಚಾಗಿದೆ ಎಂದು ಹೇಳಿ ನನ್ನ ಗಮನಸೆಳೆದರು. ಆಗ ನಾನು ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡಲು ಇನ್ನೂ ಹೆಚ್ಚಿನ ಪರವಾನಗಿ ನೀಡಬೇಕು ಇಲ್ಲವೇ ಸಾರಾಯಿ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದ್ದೆ. ಆದರೆ ನಾನು ಸಾರಾಯಿ ಮಾರಾಟ ಪುನಾರಂಭದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಸಾರಾಯಿ ಮಾರಾಟ ಮತ್ತೆ ಪುನರಾರಂಭಿಸುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಸಿಎಂ ಹೇಳಿದ್ದರಾ?
ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೋ ಎಂದು ಐಎಎಸ್ ಅಧಿಕಾರಿ ಡಿ.ಕೆ.ರವಿಗೆ ಸಿಎಂ ಸಿದ್ದರಾಮಯ್ಯ ಹೇಳಿರಲಿಲ್ಲ. ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯರನ್ನು ವಿಲನ್ ಮಾಡುವ ಸಲುವಾಗಿಯೇ ಮಾಜಿ ಮುಖ್ಯಮಂತ್ರಿಯೊಬ್ಬರು ಯಾವ್ಯಾವ ರೀತಿ ನಡೆದುಕೊಂಡಿದ್ದಾರೆಂದು ನಾವು ಕಂಡಿದ್ದೇವೆ ಎಂದು ಹಿರಿಯ ರಾಜಕಾರಣಿ, ಮಾಜಿ ಸಚಿವ ಆರ್.ಎಲ್.ಜಾಲಪ್ಪ ಇದೇ ಸಮಾರಂಭದಲ್ಲಿ ಹೇಳಿದರು.

ರವಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಎಲ್ಲ ಸ್ವಾಮೀಜಿಗಳು ಒಂದಾದರು. ಸಮುದಾಯದ ಮುಖಂಡರು ಒಂದಾದರು. ಸಿಎಂ ವಿರುದ್ಧ ಇಲ್ಲಸಲ್ಲದ ಕಥೆಯನ್ನು ಹೆಣೆದು ಮುಖ್ಯಮಂತ್ರಿಯನ್ನು ಬಲಿಪಶು ಮಾಡುವ ಪ್ರಯತ್ನ ನಡೆಯಿತು. ಆದರೆ ಡಿ.ಕೆ.ರವಿ ಆತ್ಮಹತ್ಯೆಯಾದ 8 ದಿನಗಳಲ್ಲೇ ಸಿಬಿಐ ತನಿಖೆಗೆ ನೀಡಿದ್ದು ಸಿಎಂ ಸಿದ್ದರಾಮಯ್ಯ ಎಂಬುದನ್ನು ಎಲ್ಲರೂ ಅರ್ಥ ಮಾಡಿ ಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com