ಕೆರೆ ಒತ್ತುವರಿ ತೆರವು ತೋರಣ

ಪೂರ್ವ ತಾಲೂಕಿನ ಕಾಡುಗೋಡಿ ಪ್ಲಾಂಟೇಷನ್, ಬಾಣಸವಾಡಿ ಕೆರೆ ಹಾಗೂ ಆನೇಕಲ್ ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡ ನಗರ ಜಿಲ್ಲಾಡಳಿತ ರು.7551 ಕೋಟಿ ಮೌಲ್ಯದ 750.30 ಎಕರೆ ಭೂಮಿ ವಶಪಡಿಸಿಕೊಂಡಿದೆ...
ಬಾಣಸವಾಡಿ ಕೆರೆಜಾಗದಲ್ಲಿ ತೆರವು ಕಾರ್ಯಾಚರಣೆ ನಂತರ ಸ್ಥಳೀಯರು ಮನೆ ಹಾಗೂ ಶೆಡ್ ಗಳ ಪರಿಕರಗಳನ್ನು ಸಂಗ್ರಹಿಸಿದರು.
ಬಾಣಸವಾಡಿ ಕೆರೆಜಾಗದಲ್ಲಿ ತೆರವು ಕಾರ್ಯಾಚರಣೆ ನಂತರ ಸ್ಥಳೀಯರು ಮನೆ ಹಾಗೂ ಶೆಡ್ ಗಳ ಪರಿಕರಗಳನ್ನು ಸಂಗ್ರಹಿಸಿದರು.

ಬೆಂಗಳೂರು: ಪೂರ್ವ ತಾಲೂಕಿನ ಕಾಡುಗೋಡಿ ಪ್ಲಾಂಟೇಷನ್, ಬಾಣಸವಾಡಿ ಕೆರೆ ಹಾಗೂ ಆನೇಕಲ್ ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡ ನಗರ ಜಿಲ್ಲಾಡಳಿತ ರು.7551 ಕೋಟಿ ಮೌಲ್ಯದ 750.30 ಎಕರೆ ಭೂಮಿ ವಶಪಡಿಸಿಕೊಂಡಿದೆ.

ಸುಬ್ಬಯ್ಯನಪಾಳ್ಯದ ಬಾಣಸವಾಡಿ ಕೆರೆಯಸ.ನಂ.211ರಲ್ಲಿ ಒಟ್ಟು 16.64 ಎಕರೆ ಒತ್ತುವರಿಯಾಗಿದ್ದು, ತಹಸೀಲ್ದಾರ್ ಹರೀಶ್ ನಾಯಕ್  ತಂಡ 2.37 ಎಕರೆ ತೆರವು ಮಾಡಿದೆ. 42.38 ಎಕರೆಯಲ್ಲಿ ಕೆರೆಯಿದ್ದು, 14.27 ಎಕರೆಯಲ್ಲಿ ಬಿಡಿಎ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಂಚಿದೆ. 1988-89ರಲ್ಲಿ ಬಿಡಿಎ ಈ ಪ್ರದೇಶದಲ್ಲಿ 222 ನಿವೇಶನಗಳನ್ನು ವಿಂಗಡಿಸಿ, ಎಚ್‍ಆರ್‍ಬಿಆರ್ ಲೇಔಟ್ ಬಡಾವಣೆ ನಿರ್ಮಿಸಿತ್ತು. ಕೆರೆ ಜಾಗದಲ್ಲಿ ನಿವೇಶನ ಹಂಚಿರುವ ಬಗ್ಗೆ ಜಿಲ್ಲಾಡಳಿತದಿಂದ ಬಿಡಿಎಗೆ ನೋಟಿಸ್ ನೀಡಲಾಗಿದೆ.

ಬಿಡಿಎ ಸರ್ಕಾರದ ಅಂಗಸಂಸ್ಥೆಯಾಗಿರುವುದರಿಂದ ಒತ್ತುವರಿ ತೆರವು ಮಾಡದೆ ಸರ್ಕಾರದ ವಶಕ್ಕೆ ಒಪ್ಪಿಸಲಾಗಿದೆ. ರಾಜ್ಯ ಸರ್ಕಾರ ಈ ಭೂಮಿಯಲ್ಲಿನ ಒತ್ತುವರಿ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಕೆರೆಯ 2.37 ಎಕರೆಯಲ್ಲಿ ಮನೆ, ವಾಣಿಜ್ಯ ಕಟ್ಟಡಗಳಿದ್ದು, ಜೆಸಿಬಿ ಮೂಲಕ ತೆರವು ಮಾಡಲಾಯಿತು. ರು.120 ಕೋಟಿ ಮೌಲ್ಯದ ಈ ಜಮೀನಿನಲ್ಲಿ 100 ವಾಣಿಜ್ಯ ಕಟ್ಟಡ ಹಾಗೂ ಮನೆಗಳಿವೆ. ಓಂ ಶಕ್ತಿ ದೇವಸ್ಥಾನ, ನಾಗಶಕ್ತಿ ಹಾಗೂ ಮುನೇಶ್ವರ ದೇವಾಲಯವಿದ್ದು, ಮುಜರಾಯಿ ಇಲಾಖೆ ವಶಕ್ಕೆ ನೀಡಲಾಗಿದೆ. ಇದೇ ಭಾಗದಲ್ಲಿ ನಾರಾಯಣ ಚಾರಿಟಬಲ್ ಟ್ರಸ್ಟ್ ಇದ್ದು, ತೆರವುಗೊಳಿಸದೆ ಸರ್ಕಾರದ ವಶಕ್ಕೆ ನೀಡಲಾಗಿದೆ.

ಮತ್ತೊಂದು ಕಡೆ 2 ಪೆಟ್ರೋಲ್ ಬಂಕ್ ನಿರ್ಮಾಣವಾಗಿದ್ದು, ಒತ್ತುವರಿ ಮಾಡಿದವರಿಗೆ ನೋಟಿಸ್ ನೀಡಿ ಮೊದಲ ದಿನ ಸ್ವಲ್ಪಭಾಗವನ್ನು ತೆರವು ಮಾಡಲಾಗಿದೆ. ಇಲ್ಲಿನ ಭೂಮಿಯ ಬೆಲೆ ಚದರ ಅಡಿಗೆ ರು.10ಸಾವಿರ ಎಂದು ಅಂದಾಜಿಸಲಾಗಿದೆ.

ಅರಣ್ಯ ಒತ್ತುವರಿ ತೆರವು
ಕಾಡುಗೋಡಿ ಗ್ರಾಮದಲ್ಲಿ `ಕಾಡುಗೋಡಿ ಪ್ಲಾಂಟೇಷನ್'ನ 711 ಎಕರೆ ಅರಣ್ಯಭೂಮಿಯಲ್ಲಿನ ಒತ್ತುವರಿ ತೆರವುಗೊಳಿಸಿ, ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈ ಭೂಮಿ ರು.7100 ಕೋಟಿ ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ. 1898ರಲ್ಲಿ ರಾಜವಂಶಸ್ಥರು ಈ ಜಾಗವನ್ನು ಅರಣ್ಯ ಇಲಾಖೆಗೆ ನೀಡಿದ್ದು, ಒಂದು ಶತಮಾನವೇ ಕಳೆದರೂ ಕಂದಾಯ ಇಲಾಖೆಯಲ್ಲಿ ಪಹಣಿ ಹಾಗೂ ಮ್ಯುಟೇಷನ್ ಖಾತೆ ಮಾಡಿರಲಿಲ್ಲ. ಆದರೆ, 79 ಎಕರೆ ಮಾತ್ರ ಅರಣ್ಯ ಇಲಾಖೆಯ ವಶದಲ್ಲಿತ್ತು. 711 ಎಕರೆಯಲ್ಲಿ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಕೃಷಿ, ಪಾರ್ಕಿಂಗ್, ಕಟ್ಟಡ, ಬಂಗಲೆಗಾಗಿ ಬಳಕೆಯಾಗಿದೆ. ಈಗ ಎಲ್ಲ ಒತ್ತುವರಿದಾರರಿಗೆ ನೋಟಿಸ್ ನೀಡಿದ್ದು, ಭೂಮಿಯನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿದೆ.

ಶಾಲೆ ವಶಕ್ಕೆ
ಮುನೆಕೊಳಲು ಗ್ರಾಮದ ಸ.ನಂ.36ರಲ್ಲಿ 9.18 ಎಕರೆಯಲ್ಲಿ ನವಜೀವನ್ ಟ್ರಸ್ಟ್ ನಿರ್ಮಿಸಿದ್ದ ಶಾಲೆ ಹಾಗೂ ವಸತಿನಿಲಯವನ್ನು ಸರ್ಕಾರದ ವಶಕ್ಕೆ ಒಪ್ಪಿಸಲಾಗಿದೆ. ಸರ್ಕಾರದ ಆದೇಶದಂತೆ ಕುಷ್ಠರೋಗಿಗಳ ಪುನರ್ವಸತಿಗಾಗಿ ನಿಲಯ ನಿರ್ಮಿಸಲು ಟ್ರಸ್ಟ್ ಗೆ ಈ ಜಾಗವನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಟ್ರಸ್ಟ್ ಮಾಲೀಕರು ಜಮೀನನ್ನು ನಿಗದಿತ ಉದ್ದೇಶಕ್ಕೆ ಬಳಸದೆ, `ನವ ಪ್ರಜ್ಞಾ ಪಬ್ಲಿಕ್ ಸ್ಕೂಲ್' ಹಾಗೂ ಬಾಲಕಿಯರ ವಸತಿಗೃಹ ನಿರ್ಮಿಸಿದೆ.

ಸರ್ಕಾರಕ್ಕೆ ತಿಳಿಸಿದ ಉದ್ದೇಶದ ಬದಲಾಗಿ ಅನ್ಯ ಉದ್ದೇಶಕ್ಕೆ ಜಮೀನು ಬಳಸಿಕೊಂಡಿರುವುದರ ಬಗ್ಗೆ ಈ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಸರ್ಕಾರ ಟ್ರಸ್ಟ್ ನೊಂದಿಗಿನ ಗುತ್ತಿಗೆ ರದ್ದುಪಡಿಸಿದ್ದು, 2 ಎಕರೆ ಜಮೀನನ್ನು `ಶ್ರೀಕೃಷ್ಣ ಸೇವಾಶ್ರಮ ಟ್ರಸ್ಟ್' ಗೆ ಮಂಜೂರು ಮಾಡಲಾಗಿದೆ. ಉಳಿದ 7.18 ಎಕರೆಯನ್ನು ಜಿಲ್ಲಾಡಳಿತ ಸರ್ಕಾರದ ವಶಕ್ಕೆ ನೀಡಿದೆ. ಜಮೀನು ರು.300 ಕೋಟಿ ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.

9 ಜನರ ವಿರುದ್ಧ ದೂರು

ಅಧಿಕಾರಿಗಳೂ ಸೇರಿದಂತೆ ಒತ್ತುವರಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ 9 ಮಂದಿ ವಿರುದ್ಧ ಬಿಎಂಟಿಎಫ್ ನಲ್ಲಿ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಶಂಕರ್ ತಿಳಿಸಿದರು.

ಒತ್ತುವರಿ ಮಾಡುವಾಗ ನಕಲಿ ದಾಖಲೆ ಸೃಷ್ಟಿಸಿ ನೆರವಾದ ಅಧಿಕಾರಿಗಳ ವಿರುದ್ಧವೂಭೂ ಕಂದಾಯ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ವಿನಿವಿಂಕ್ ಹಾಗೂ ಸತ್ಯಂ ಕಂಪ್ಯೂಟರ್ಸ್ ಹಗರಣದ ಪ್ರಕರಣದಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪಿನಲ್ಲಿ ಒತ್ತುವರಿಗೆ ಕಾರಣರಾದವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮನೆ ನಷ್ಟವಾದವರಿಗೆ ಪರಿಹಾರ ನೀಡಬಹುದು ಎಂದು ಹೇಳಲಾಗಿದೆ. ತೆರವು ವೇಳೆ ಸಂತ್ರಸ್ಥರಾದ ನಿವಾಸಿಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ, ಆಸ್ತಿ ಮುಟ್ಟುಗೋಲು ಹಾಕಿಕೊಂಡು ಅದನ್ನೇ ಪರಿಹಾರದ ರೂಪದಲ್ಲಿ ನೀಡಬಹುದು.

ಕೆಲವು ಪ್ರಕರಣಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ನಿರ್ಮಿಸಿಕೊಡಲಾಗುತ್ತಿದೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು. ಕೆರೆ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಸರ್ಕಾರ ತೀರ್ಮಾನ ಕೈಗೊಂಡರೆ ಮೊದಲು ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ನೀಡಲಾಗುತ್ತದೆ. ಈ ಅಭಿಪ್ರಾಯ ಕ್ರೋಢೀಕರಣ ನಂತರ ಸರ್ಕಾರವೇ ಕೆರೆ ಜಾಗವನ್ನು ಏನು ಮಾಡಬೇಕೆಂದು ನಿರ್ಧರಿಸುತ್ತದೆ. ಬಿಡಿಎ, ಅರಣ್ಯ ಇಲಾಖೆ, ಬಿಬಿಎಂಪಿ ಸೇರಿದಂತೆ ಸರ್ಕಾರದ ಅಂಗಸಂಸ್ಥೆಗಳಿಗೆ ಕೆರೆಜಾಗವನ್ನು ಹಸ್ತಾಂತರಿಸಿದ ನಂತರ ನಿರ್ವಹಣೆಯನ್ನೂ ಈ ಸಂಸ್ಥೆಗಳೇ ಮಾಡಬೇಕಾಗುತ್ತದೆ ಎಂದರು.

ಕಾಡುಗೋಡಿ ಪ್ಲಾಂಟೇಷನ್‍ನ ಅರಣ್ಯ ಭೂಮಿಗೆ ಸೇರಿದ ಪ್ರದೇಶ ಕ್ರೀಡಾಂಗಣ, ಆಟದ ಮೈದಾನ, ಪಾರ್ಕಿಂಗ್ ಸ್ಥಳ, ಕೃಷಿ, ಎರಡು ಕಾರ್ಖಾನೆಗಳಿಗೆ ಬಳಕೆಯಾಗಿದೆ. ಕನ್ನಡ ನಟ ಗುಲ್ಜಾರ್ ಖಾನ್ ಅವರಿಗೆ ಸೇರಿದ ಬಂಗಲೆಯೊಂದು ಇಲ್ಲಿದ್ದು, ಯಾರೂ ವಾಸಿಸುತ್ತಿಲ್ಲ. ಅರಣ್ಯ ಪ್ರದೇಶ ಒಟ್ಟು 10 ಕಿ.ಮೀ ವ್ಯಾಪ್ತಿಯಲ್ಲಿದ್ದು, ದಿಣ್ಣೂರು ಎಂಬ ಸ್ಥಳದಲ್ಲಿ ಮಾತ್ರ ವಸತಿ ಪ್ರದೇಶ ನಿರ್ಮಾಣವಾಗಿದೆ. ಆದರೆ ಇಲ್ಲಿ ಮನೆಗಳನ್ನು ತೆರವು ಮಾಡುವುದಿಲ್ಲ ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್. ಕುಮಾರ್ ಅವರಿಗೆ 711 ಎಕರೆ ಜಾಗ ಹಸ್ತಾಂತರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com