
ಬೆಂಗಳೂರು: 4 ವರ್ಷ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮಗು ಕರುಣಿಸಿದ ಯುವಕನೊಬ್ಬ ಬೇರೆ ಯುವತಿಯೊಂದಿಗೆ ಮದುವೆಯಾಗಲು ಮುಂದಾಗಿದ್ದಾನೆ. ಇದನ್ನು ಆಕ್ಷೇಪಿಸಿದ ಹುಡುಗಿ ಕಡೆಯವರು ಮಾತುಕತೆ ನಡೆಸಲು ಹುಡುಗನ ಮನೆಗೆ ತೆರಳಿದಾಗ ಕುಟುಂಬ ಸದಸ್ಯರು ಹಲ್ಲೆ ನಡೆಸಿರುವ ಘಟನೆ ಕಾಡುಗೋಡಿ ಸಮೀಪದ ಚೆನ್ನಸಂದ್ರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ನೊಂದ ಯುವತಿ, ತಂಡೆ ಪೆದ್ದ ರೆಡ್ಡಪ್ಪ, ಚಿಕ್ಕಪ್ಪಿ ಚಿನ್ನ ರೆಡ್ಡಪ್ಪ ಸಹೋದರರಾದ ಮನೋಜ್, ಸಂದೀಪ್ ಹಲ್ಲೆಗೀಡಾದವರು. ಇವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ವೇಳೆ ಯುವಕನ ಕಡೆಯವರಿಗೂ ಗಾಯಗಳಾಗಿವೆ. ಮದುವೆಯಾಗದೆ ವಂಚಿಸಿದ್ದಲ್ಲದೆ, ಕೇಳಲು ಹೋದಾಗ ಹಲ್ಲೆ ನಡೆಸಿದ್ದಾಗಿ ಸುನೀಲ್, ಆತನ ಕುಟುಂಬ ಸದಸ್ಯರ ವಿರುದ್ಧ ನೊಂದ ಯುವತಿ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುನೀಲ್ ಕಾಡುಗೋಡಿ ಠಾಣೆಗೆ ದೂರು ನೀಡಿದ್ದಾನೆ.
ಮದುವೆಗೆ ಮುಂಚೆಯೇ ಮಗು!
ಆರೋಪಿ ಸುನೀಲ್ ಮತ್ತು ರಮ್ಯಾ ಇಬ್ಬರೂ ಒಂದೇ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದರು. ಪರಿಚಯ ಪ್ರೇಮಕ್ಕೆ ತಿರುಗಿ 4 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದರು. ಪ್ರೀತಿಯಲ್ಲಿ ಸುನೀಲ್ ಆತ್ಮೀಯವಾಗಿ ನಡೆದುಕೊಂಡಿದ್ದ. ನಮ್ಮ ಮನೆಯವರೂ ಸುನೀಲ್ ನನ್ನು ವರಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ, ಕೆಲವು ದಿನಗಳಲ್ಲೇ ಸುನೀಲ್ ತನ್ನ ವರ್ತನೆ ಬದಲಿಸಿದ್ದ.
ಹೀಗಾಗಿ 2014 ರ ಆಗಸ್ಟ್ ನಲ್ಲಿ ಸುನೀಲ್ ವಿರುದ್ಧ ವರ್ತೂರು ಠಾಣೆಗೆ ವಂಚನೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಸುನೀಲ್, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಮಧ್ಯೆ ನಮ್ಮ ಪ್ರೀತಿಗೆ ಸಾಕ್ಷಿಯಾಗಿ ಮದುನೆಗೆ ಮುನ್ನವೇ ಗಂಡು ಮಗುವಿನ ತಾಯಿಯಾದೆ. ಸದ್ಯ ಮಗುವಿಗೆ 7 ತಿಂಗಳು ಎಂದು ನೊಂದ ಯುವತಿ ಮಾಧ್ಯಮಗಳಿಗೆ ತಿಳಿಸಿದ್ದಾಳೆ.
Advertisement