
ಬೆಂಗಳೂರು: ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದಲ್ಲಿ ರಾಜಕೀಯ ಹಸ್ತಕ್ಷೇಪ, ಸ್ವಜನ ಪಕ್ಷಪಾತ ಮಾಡುತ್ತಿರುವುದು ಶೈಕ್ಷಣಿಕ ಬೆಳವಣಿಗೆಗೆ ಪೂರಕವಲ್ಲ. ನೇಮಕವನ್ನು ದಕ್ಷತೆ ಹಾಗೂ ಪ್ರಾಮಾಣಿಕತೆ ಆಧಾರದ ಮೇಲೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಎಸ್. ರಾಜೇಂದ್ರಬಾಬು ಹೇಳಿದರು.
ಶನಿವಾರ ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಆಯೋಜಿಸಿದ್ದ `ಕುಲಪತಿಗಳ ಆಯ್ಕೆಯಲ್ಲಿ ಅನುಸರಿಸಬೇಕಾದ ವಿಧಾನಗಳ' ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, `ಕುಲಪತಿ ಎಂದರೆ ವಿವಿ ಘನತೆ ಎತ್ತಿ ಹಿಡಿಯುವ ಮುಖ್ಯಸ್ಥ. ಅವರು ವಿದ್ವಾಂಸರಾಗಿದ್ದು, ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಚಾಣಾಕ್ಷತನ, ದೂರದೃಷ್ಟಿ ಮತ್ತು ನಾಯಕತ್ವ ಗುಣ ಹೊಂದಿರಬೇಕು. ಕುಲಪತಿ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದು ಕೊಳ್ಳಬೇಕು. ಆದರೆ, ಇತ್ತೀಚಿನ ಶೋಧನಾ ಸಮಿತಿಗಳು ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸುತ್ತವೆ. ಇದರಿಂದ ಅರ್ಹತೆ ಇರುವವರು ಅರ್ಜಿ ಹಾಕಿಕೊಳ್ಳದಿರಬಹುದು. ಆದ್ದರಿಂದ ಅರ್ಹತೆ ಇರವವರ ನೇರ ಆಯ್ಕೆಗೆ ಅವಕಾಶವಿರಬೇಕು.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿ ಆಯ್ಕೆಯಾದರೂ ವಿವಿ ಕುಲಪತಿಯಾಗುವ ಅವಕಾಶ ಸಿಗಲಿಲ್ಲ. ಅರ್ಹತೆಯಿರುವ ವಿದ್ವಾಂಸರಿಗೆ ಹಿನ್ನೆಡೆಯಾಗದಂತೆ ಶೋಧನಾ ಸಮಿತಿ ಅವಕಾಶ ಕಲ್ಪಿಸಬೇಕು' ಎಂದು ಕಿವಿಮಾತು ಹೇಳಿದರು. ಪ್ರೊ. ಎಂ.ಐ. ಸವದತ್ತಿ ಮಾತನಾಡಿ,ವಿಶ್ವವಿದ್ಯಾಲಯದ ಕುಲಪತಿ ನಿವೃತ್ತಿಗೊಳ್ಳುವ ಮೂರು ತಿಂಗಳ ಮೊದಲು ಮತ್ತೊಬ್ಬ ಕುಲಪತಿಯನ್ನು ನೇಮಕ ಮಾಡಬೇಕು. ಹತ್ತು ವಿಶ್ವವಿದ್ಯಾಲಯದ ಕುಲಪತಿಗಳ ನೇಮಕ ಕುರಿತು ಒಮ್ಮೆಗೇ ನಿರ್ಧಾರ ಕೈಗೊಳ್ಳಬಾರದು. ಅದನ್ನು ಕಾನೂನಾತ್ಮವಾಗಿ ಪ್ರಶ್ನಿಸುವ ಸಾಧ್ಯತೆ ಇರುತ್ತದೆ.
ಸರ್ಕಾರ ವಿಶ್ವವಿದ್ಯಾಲಯಗಳಿಗೆ ಬಜೆಟ್‍ನಲ್ಲಿ ಶೇ. 1ಕ್ಕಿಂತಲೂ ಕಡಿಮೆ ಅನುದಾನ ನೀಡುತ್ತಿದ್ದು, ವಿಶ್ವವಿದ್ಯಾಲಯಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡಬೇಕು. ಒಂದು ವೇಳೆ ತಪ್ಪು ನಡೆದರೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು. ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷ ಪ್ರೊ. ಎಂ. ಮಹದೇವಪ್ಪ ಮಾತನಾಡಿ, ' ಇತ್ತೀಚೆಗೆ ಸಕಾಲದಲ್ಲಿ ಕುಲಪತಿ ಸ್ಥಾನ ತುಂಬದೆ ತಿಂಗಳಾನುಗಟ್ಟಲೆ ಉಸ್ತುವಾರಿ ವ್ಯವಸ್ಥೆ ಮುಂದುವರಿಸುತ್ತಿರುವುದು ಪರಿಪಾಠವಾಗಿ ಬೆಳೆಯುತ್ತಿದೆ. ನಿರ್ದಿಷ್ಟ ಸಂಖ್ಯೆ ಇಲ್ಲ ಎನ್ನುವ ಕಾರಣಕ್ಕಾಗಿ ಶೋಧನಾ ಸಮಿತಿಯ ಸಭೆಯಲ್ಲಿ ಕುಲಪತಿ ಆಯ್ಕೆಯಾಗದಿರುವುದಿದೆ.
ಇಂಥ ಸಮಸ್ಯೆಗಳನ್ನು ಸಂವಹನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಕುಲಪತಿ ಸ್ಥಾನಕ್ಕೆ ಅರ್ಜಿ ಕರೆಯುವುದು ಸಲ್ಲ. ಅರ್ಹರೆನಿಸಿದರವರ ಹೆಸರು ಸೂಚಿಸಿ, ಅರ್ಹತೆ ಮಾನದಂಡ ಪರಿಗಣಿಸಬೇಕು. ಶೋಧನಾ ಸಮಿತಿಯ ಸದಸ್ಯರಲ್ಲಿ ನ್ಯಾಯಾಂಗ, ಶಿಕ್ಷಣ ಮತ್ತು ಆಡಳಿತ ಕ್ಷೇತ್ರದಲ್ಲಿ ಹೆಸರು ಮಾಡಿದ ನಿರ್ವಿವಾದ ವ್ಯಕ್ತಿಗಳಿರಬೇಕು ಎಂದರು. ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಎನ್.ಪ್ರಭುದೇವ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಆರ್. ಸುಬ್ರಮಣ್ಯಉಪಸ್ಥಿತರಿದ್ದರು.
Advertisement