
ಬೆಂಗಳೂರು: ಕುಖ್ಯಾತ ಡಕಾಯಿತಿ ತಂಡದ ಇಬ್ಬರನ್ನು ಬಂಧಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೂಲಿಬೆಲೆ ಪೊಲೀಸರು 5 ಪಿಸ್ತೂಲ್, 8 ಜೀವಂತ ಗುಂಡುಗಳು, 5 ದ್ವಿಚಕ್ರ ಹಾಗೂ ರು.25 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಜಾರ್ಖಂಡ್ ಮೂಲದ ಪ್ರೇಮ್ ಕುಮಾರ್(25), ಹೊಸಕೋಟೆ ಸಮೀಪದ ಮುತ್ಸಂದ್ರ ಗ್ರಾಮದ ನಾರಾಯಣಸ್ವಾಮಿ (28) ಬಂಧಿತರು. ಆರೋಪಿಗಳು ಪಿಳ್ಳಗುಂಪ ಕೈಗಾರಿಕ ಪ್ರದೇಶದಲ್ಲಿರುವ ಕಾರ್ಖಾನೆಯೊಂದರ ಮುಂದೆ ವ್ಯವಸ್ಥಾಪಕ ಮೇಲೆ ಗುಂಡು ಹಾರಿಸಿ ರು.7.80 ಲಕ್ಷ ದರೋಡೆ ಹಾಗೂ ಹೊಸಕೋಟೆ ಪಟ್ಟಣದಲ್ಲಿರುವ ಎಸ್‍ಬಿಐ ಗ್ರಾಹಕ ಸೇವಾ ಕೇಂದ್ರದಲ್ಲಿ ಪಿಸ್ತೂಲ್ ತೋರಿಸಿ ರು.4.83 ಲಕ್ಷ ದರೋಡೆ ಮಾಡಿದ್ದರು. ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬೆಂಗಳೂರು ಜಿಲ್ಲೆ ಎಸ್ಪಿ ರಮೇಶ್ ಬಾನೋತ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.
ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರು, ಹೊಸಕೋಟೆ ಸುತ್ತ ಮುತ್ತ ಕಂಟ್ರಿಮೇಡ್ ಪಿಸ್ತೂಲ್ ಮಾರಾಟದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಈ ವೇಳೆ ಜಾರ್ಖಂಡ್ ಮೂಲದ ಆರೋಪಿ ಪ್ರೇಮ್ ಕುಮಾರ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಪೊಲೀಸರೇ ಪಿಸ್ತೂಲ್ ಕೊಳ್ಳುವ ಗ್ರಾಹಕರ ನೆಪದಲ್ಲಿ ಪ್ರೇಮ್ ಕುಮಾರ್‍ನನ್ನು ಸಂಪರ್ಕಿಸಿದರು. ಒಂದೆರೆಡು ತಿಂಗಳಿಂದ ರು.20 ಸಾವಿರಕ್ಕೆ ಪಿಸ್ತೂಲ್ ಕೊಡುವುದಾಗಿ ಹೇಳಿದ್ದ ಆರೋಪಿ, ಸ್ವಲ್ಪ ಸ್ವಲ್ಪ ಹಣ ಪಡೆದು ಸತಾಯಿಸುತ್ತಿದ್ದ. ಕೊನೆಗೆ ರು.80 ಸಾವಿರಕ್ಕೆ ಪಿಸ್ತೂಲ್ ಕೊಡುವುದಾಗಿ ಹೇಳಿ ಹಣ ಪಡೆದು ಪಿಸ್ತೂಲ್ ನೀಡಿದಾಗ ಆತನನ್ನು ಬಂಧಿಸಿದರು.
ತೀವ್ರ ವಿಚಾರಣೆ ನಡೆಸಿದಾಗ ಮತ್ತೊಬ್ಬ ಆರೋಪಿ ನಾರಾಯಣಸ್ವಾಮಿ ಬಗ್ಗೆ ಮಾಹಿತಿ ನೀಡಿದ್ದಾನೆ. ನಾರಾಯಣಸ್ವಾಮಿ ಬಂಧಿಸಿ ಮನೆಯಿಂದ ನಾಲ್ಕು ಪಿಸ್ತೂಲ್‍ಗಳು ಹಾಗೂ 8 ಜೀವಂತ ಗುಂಡುಗಳು ನಗದು ಹಾಗೂ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್ಪಿ ರಮೇಶ್ ಬಾನೋತ್ ತಿಳಿಸಿದರು. ಪ್ರೇಮ್ ಕುಮಾರ್ ಈ ಹಿಂದೆ ವಾರಂಗೇರ್ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದು ಪ್ರಮುಖ ಆರೋಪಿ ತಲೆಮರೆಸಿಕೊಂಡಿರುವ ಮರಂಡಿ ಜತೆ ಮುತ್ಸಂದ್ರ ಗ್ರಾಮದಲ್ಲಿ ವಾಸವಿದ್ದ. ಹೊಸಕೋಟೆ ಸಮೀಪ ಇರುವ ಕಾರ್ಖಾನೆಗಳಿಗೆ ಬಿಹಾರದಿಂದ ಕಾರ್ಮಿಕರನ್ನು ಪೂರೈಕೆ ಮಾಡುತ್ತಿದ್ದ.
ಪ್ರಕರಣದಲ್ಲಿ ಆರೋಪಿ ಮರಂಡಿ ಹಾಗೂ ಸಾಗೇನ್ ಮಾಧವ ಪಾರ್ಬನ್ ಹಾಗೂ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ರಮೇಶ್ ತಿಳಿಸಿದರು. ಪ್ರಕರಣವನ್ನು ಸೂಲಿ ಬೆಲೆ ಇನ್ಸ್‍ಪೆಕ್ಟರ್ ಪುಟ್ಟ ಓಬಳರೆಡ್ಡಿ, ಎಸ್ಸೈಗಳಾದ ರಾಘವೇಂದ್ರ, ಯೋಗಾನಂದಸ್ವಾಮಿ, ಸಿಬ್ಬಂದಿಗಳಾದ ದತ್ತಾ, ಸಂತೋಷ್ ಹಾಗೂ ನರಸಿಂಹ ತಂಡ ಬಂಧಿಸಿದೆ.
Advertisement