ಬಾಣಸವಾಡಿ; ಇಂದೂ ತೆರವಿಗೆ ರೆಡಿ

ಬಾಣಸವಾಡಿ ಕೆರೆ ಒತ್ತುವರಿ ಕಾರ್ಯಾಚರಣೆ ಸೋಮವಾರವೂ ಮುಂದುವರಿಯಲಿದ್ದು, ಮೂರು ದೊಡ್ಡ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ. ಶನಿವಾರ ಸಂಜೆ ಮಳೆ ಸುರಿದಿದ್ದರಿಂದ ಕಾರ್ಯಾರಣೆ ಕೆಲಕಾಲ ಸ್ಥಗಿತವಾಗಿದ್ದು, ಒಟ್ಟು 5 ಬೃಹತ್ ವಾಣಿಜ್ಯ ಮಳಿಗೆಗಳಲ್ಲಿ ಭಾನುವಾರ 4-5...
ಬಾಣಸವಾಡಿ ಭೂ ಒತ್ತುವರಿ
ಬಾಣಸವಾಡಿ ಭೂ ಒತ್ತುವರಿ

ಮಳೆ ಹಿನ್ನೆಲೆಯಲ್ಲಿ ಶನಿವಾರ ಕೆಲಕಾಲ ಸ್ಥಗಿತ, ಇನ್ನೂ ಎರಡು ದಿನಗಳ ಕಾಲ ನಡೆಯುವ ಸಾಧ್ಯತೆ | ಪರ್ಯಾಯವಾಗಿ ಮನೆ ನಿರ್ಮಿಸಿಕೊಡುವಂತೆ ಸ್ಥಳೀಯರ ಒತ್ತಾಯ.

ಬೆಂಗಳೂರು: ಬಾಣಸವಾಡಿ ಕೆರೆ ಒತ್ತುವರಿ ಕಾರ್ಯಾಚರಣೆ ಸೋಮವಾರವೂ ಮುಂದುವರಿಯಲಿದ್ದು, ಮೂರು ದೊಡ್ಡ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ. ಶನಿವಾರ ಸಂಜೆ ಮಳೆ ಸುರಿದಿದ್ದರಿಂದ ಕಾರ್ಯಾರಣೆ ಕೆಲಕಾಲ ಸ್ಥಗಿತವಾಗಿದ್ದು, ಒಟ್ಟು 5 ಬೃಹತ್ ವಾಣಿಜ್ಯ ಮಳಿಗೆಗಳಲ್ಲಿ ಭಾನುವಾರ 4-5 ಅಂತಸ್ತುಗಳ ಮೂರು ಕಟ್ಟಡಗಳನ್ನು ಕೆಡವಲಾಗಿದೆ.

ಕಟ್ಟಡ ತೆರವು ಮಾಡುತ್ತಿರುವ ಜಾಗದಲ್ಲಿ ಬಿಡಿಎಗೆ ಸೇರಿದ ಮನೆಗಳು, ವಿದ್ಯುತ್ ಕಂಬಗಳಿರುವುದರಿಂದ ಕಾರ್ಯಾಚರಣೆ ನಿಧಾನವಾಗಿದೆ. ಸ್ಥಳೀಯರು ಕೆರೆ ಜಾಗದಲ್ಲಿ ನಿರ್ಮಿಸಿದ 20 ಮನೆಗಳ ತೆರವು ಇನ್ನೂ ಆರಂಭವಾಗಿಲ್ಲ. 8 ಜೆಸಿಬಿ, 2 ಹಿಟಾಚಿ ಹಾಗೂ 2 ಬಿಲ್ಡಿಂಗ್ ಕಟ್ಟರ್‍ಗಳನ್ನು ಸಿಬ್ಬಂದಿಗೆ ಒದಗಿಸಲಾಗಿದ್ದು, ಇನ್ನೂ ಎರಡು ದಿನಗಳ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ.

ಪರ್ಯಾಯಕ್ಕೆ ಮನವಿ

ಕೆರೆ ಜಾಗದಲ್ಲಿ ಮನೆ ನಿರ್ಮಿಸಿದ್ದ 15 ಸ್ಥಳೀಯರು, ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳನ್ನು ಭೇಟಿ ಮಾಡಿ ಪರ್ಯಾಯವಾಗಿ ಮನೆ ನಿರ್ಮಿಸಿಕೊಡುವಂತೆ ಮನವಿಸ ಸಲ್ಲಿಸಿದ್ದಾರೆ. ಸ್ಥಳೀಯರ ಜೊತೆ ಚರ್ಚಿಸಿದ ತಹಸೀಲ್ದಾರ್ ಡಾ.ಹರೀಶ್ ನಾಯ್ಕ್ ಕೊಳಚೆ ನಿರ್ಮೂಲನಾ ಮಂಡಳಿಯ ವಸತಿ ನಿರ್ಮಾಣ ಯೋಜನೆ ಅಥವಾ ರಾಜ್ಯ ಸರ್ಕಾರದ ವಸತಿ ನಿರ್ಮಾಣದ ಯೋಜನೆಗಳಡಿ ಮನೆ ನಿರ್ಮಿಸಿಕೊಡಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗುವುದು. ಒತ್ತುವರಿಗೆ ಕಾರಣರಾದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಸ್ತಾವನೆಯಿದೆ. ಇದರ ಜೊತೆಗೆ ವಸತಿ ಯೋಜನೆಗಳಡಿ ಪರ್ಯಾಯ ಕಲ್ಪಿಸಲು ಯತ್ನಿಸಲಾಗುವುದು ಎಂದು ಮನೆ ಕಳೆದುಕೊಂಡ ನಿವಾಸಿಗಳಿಗೆ ತಿಳಿಸಿದರು.

ಗ್ರಾಮಸ್ಥರ ಪ್ರತಿಭಟನೆ
ಕಾಡುಗೋಡಿ ಪ್ಲಾಂಟೇಷನ್‍ನಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನು ವಶಪಡಿಸಿಕೊಳ್ಳಬಾರದು ಎಂದು ದಿಣ್ಣೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಗೆ ಸೇರಿದ 711 ಎಕರೆ ಜಾಗ ಒತ್ತುವರಿಯಾಗಿದ್ದು, ಜಿಲ್ಲಾಡಳಿತದ ನೆರವಿನಿಂದ ವಶಕ್ಕೆ ಪಡೆಯಲಾಗಿತ್ತು. ದಿಣ್ಣೂರಲ್ಲಿ ಹಲವು ವಸತಿ ಪ್ರದೇಶವಿದ್ದು, ಅರಣ್ಯ ಪ್ರದೇಶವಾಗಿರುವುದರಿಂದ ಮನೆಗಳನ್ನು ತೆರವು ಮಾಡುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಕೆಲವೆಡೆ ಕೃಷಿಗಾಗಿ ಭೂಮಿ ಬಳಸಿಕೊಳ್ಳಲಾಗಿದೆ. ಕೃಷಿ ಹಾಗೂ ಖಾಲಿ ಜಮೀನುಗಳನ್ನು ವಶಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಮುಂದಾದಾಗ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದರು.

`ನೂರಾರು ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಈ ಹಿಂದೆ ಸರ್ಕಾರವೇ ಮನೆಗಳನ್ನು ನಿರ್ಮಿಸಿ ಹಕ್ಕುಪತ್ರ ನೀಡಿದೆ. ಸರ್ಕಾರಕ್ಕೆ ಕಾಲಕಾಲಕ್ಕೆ ತೆರಿಗೆ ಪಾವತಿಸಿಸುತ್ತಿದ್ದು, ಇಷ್ಟು ದಿನ ಇರದ ಸಮಸ್ಯೆ ಈಗ ಬಂದಿದೆ. ಸ್ಥಳೀಯರನ್ನು ಒಕ್ಕಲೆಬ್ಬಿಸುತ್ತಿದ್ದು, ಯಾವುದೇ ಕಾರಣಕ್ಕೂ ಮನೆ, ಜಮೀನುಗಳನ್ನು ಬಿಡುವುದಿಲ್ಲ. ಅಧಿಕಾರಿಗಳು ದಬ್ಬಾಳಿಕೆ ನಡೆಸಿದರೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವುದು' ಎಂದು ಸ್ಥಳೀಯ ನಿವಾಸಿ ಜಯಮ್ಮ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com