ಸೂಕ್ತ ಬೆಲೆ ಕಲ್ಪಿಸಲು ಸಕ್ಕರೆ ಕಾರ್ಖಾನೆಗಳು ವಿಫಲ: ಮಹದೇವ ಪ್ರಸಾದ್

ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಪರ್ಯಾಯ ಬೆಳೆಯತ್ತ ಗಮನ ಹರಿಸಬೇಕಿದೆ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಪರ್ಯಾಯ ಬೆಳೆಯತ್ತ ಗಮನ ಹರಿಸಬೇಕಿದೆ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, `ಕಬ್ಬಿಗೆ ಸೂಕ್ತ ಬೆಲೆ ಕಲ್ಪಿಸಲು ಸಕ್ಕರೆ ಕಾರ್ಖಾನೆಗಳು ವಿಫಲವಾಗುತ್ತಿವೆ. ಕಳೆದ ಮೂರು ವರ್ಷಗಳಿಂದ ಕೆಲವು ಕಾರ್ಖಾನೆಗಳಿಗೆ ರೈತರ ಬಾಕಿ ಹಣ ನೀಡಲು ಸಾಧ್ಯವಾಗಿಲ್ಲ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿದಿರುವುದರಿಂದ ಉತ್ಪಾದನೆ ಮಾಡಿದ ಸಕ್ಕರೆಯನ್ನು ಕಂಪನಿಗಳು ಗೋದಾಮಿನಲ್ಲೇ ಇರಿಸಿಕೊಂಡಿವೆ. ಸಕ್ಕರೆ ಮಾರಾಟವಾಗದೇ ಕಾರ್ಖಾನೆಗಳೂ ಕಂಗಾಲಾಗಿವೆ. ರೈತರಿಗೂ ಕೇಂದ್ರ ನಿಗದಿಪಡಿಸಿದ ಹಣ ಭರಿಸಲು ಸಾಧ್ಯವಾಗುತ್ತಿಲ್ಲ' ಎಂದರು.

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 435 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು 63 ಸಕ್ಕರೆ ಕಾರ್ಖಾನೆಗಳು ಅರೆದಿದ್ದು, ಇನ್ನು 10 ಪಟ್ಟು ಕಬ್ಬು ಅರೆಯುವುದು ಬಾಕಿ ಇದೆ. ಆದಾಗಿಯೂ ಕಬ್ಬು ಬೆಳೆದ ರೈತನಿಗೆ ಸಮರ್ಪಕ ಬೆಲೆ ಮಾತ್ರ ದೊರೆಯುತ್ತಿಲ್ಲ. ರಾಜ್ಯ ಸರ್ಕಾರ ಕಳೆದ ವರ್ಷ ಪ್ರತಿ ಟನ್‍ಗೆ ರು.150 ಪ್ರೊತ್ಸಾಹಧನ ನೀಡಿದ್ದು, ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸಿತ್ತು. ಆದರೆ, ಇದು ಪ್ರತಿ ವರ್ಷ ಸಾಧ್ಯವಿಲ್ಲ. ಉತ್ಪಾದನೆ ಪ್ರತಿ ವರ್ಷ ಹೆಚ್ಚುತ್ತಿದ್ದು ಮಾರಾಟದಲ್ಲಿ ಕುಸಿತ ಕಾಣುತ್ತಿದೆ. ಹೀಗಾಗಿ ರೈತರು ಪರ್ಯಾಯ ಬೆಳೆಗಳತ್ತ ಲಕ್ಷ್ಯವಹಿಸುವುದು ಸೂಕ್ತ ಎಂದರು.

ಈ ಮಧ್ಯೆ ಜಲಸಂಪನ್ಮೂಲ ಇಲಾಖೆ ವತಿಯಿಂದ ಕಬ್ಬು ಬೆಳೆಗಾರರಿಗೆ ಹನಿ ನೀರಾವರಿ ಪದಟಛಿತಿ ಅಳವಡಿಸುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿದರೆ ಕಬ್ಬು ಬೆಳೆ ಉತ್ಪಾದನೆ ದ್ವಿಗುಣಗೊಳ್ಳುತ್ತದೆ. ಆದರೆ, ಉತ್ಪಾದನೆಯಾದ ಎಲ್ಲ ಸಕ್ಕರೆಯ ಮಾರಾಟ ಸಾಧ್ಯವಾಗುತ್ತಿಲ್ಲ. ಕಬ್ಬು ಬೆಳೆ ಪ್ರಮಾಣ ಹೆಚ್ಚಾದಷ್ಟು ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ಮನಗಂಡು ಕಬ್ಬು ಬೆಳೆಗಾರರೇ ಪರ್ಯಾಯ ಬೆಳೆಯತ್ತ ಗಮನ ಹರಿಸುವುದು ಸೂಕ್ತ ಎಂದು ತಿಳಿಸಿದರು.

ಬಾಕಿ ಪಾವತಿಸಿ ಇಲ್ಲದಿದ್ದರೆ ಗೋದಾಮು ವಶಕ್ಕೆ
ರಾಜ್ಯದ ಹಲವು ಸಕ್ಕರೆ ಕಾರ್ಖಾನೆಗಳು ಇನ್ನೂ ರೈತರಿಗೆ ಬಾಕಿ ಹಣ ನೀಡಿಲ್ಲ. ಪ್ರಸಕ್ತ ಹಾಗೂ ಕಳೆದ ಸಾಲಿನ ಒಟ್ಟು ರು.4243 ಕೋಟಿ ಹಣ ಬಾಕಿ ಇದ್ದು, ನಿಗದಿತ ಅವಧಿಯಲ್ಲಿ ಬಾಕಿ ಪಾವತಿಸದೇ ಇದ್ದರೆ ಕಾರ್ಖಾನೆಗಳ ಗೋದಾಮು ವಶಪಡಿಸಿಕೊಳ್ಳಲಾಗುವುದು ಎಂದು ಇದೇ ವೇಳೆ ಎಚ್ಚರಿಸಿದರು.

ಬೆಳಗಾವಿ ಜಿಲ್ಲಾ ವ್ಯಾಪ್ತಿಯ ನಾಲ್ಕು ಸಕ್ಕರೆ ಕಾರ್ಖಾನೆಗಳ ಗೋದಾಮುಗಳನ್ನು ಸರ್ಕಾರ ಈಗಾಗಲೇ ವಶಕ್ಕೆ ತೆಗೆದುಕೊಂಡಿದೆ. ಇದೇ ರೀತಿ ಯಾವ ಕಾರ್ಖಾನೆಗಳು ರೈತರಿಗೆ ಬಾಕಿ ನೀಡುವುದಿಲ್ಲವೂ ಅಂತಹ ಕಾರ್ಖಾನೆಗಳ ಸಕ್ಕರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ರಾಜ್ಯದಲ್ಲಿ 47.95 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ದಾಸ್ತಾನು ಇದ್ದು, ಅದರ ಮೌಲ್ಯ ರು.10000 ಕೋಟಿ ಬೆಲೆ ಬಾಳಲಿದೆ ಎಂದರು.

ಕಬ್ಬು ಬೆಳೆಗಾರರ ಹಿತ ರಕ್ಷಿಸಲು ಕೇಂದ್ರ ಸರ್ಕಾರ ಮುಂದೆ ಬರಬೇಕು. ರಾಜ್ಯದಲ್ಲಿ ದಾಸ್ತಾನಿರುವ ಸಕ್ಕರೆಯನ್ನು ಕೇಂದ್ರ ಖರೀದಿಸಬೇಕು. ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ನೀಡುತ್ತಿದ್ದ ಬಡ್ಡಿ ರತ ಸಾಲವನ್ನು ಮುಂದುವರೆಸಬೇಕು. ಕೇಂದ್ರ ಸರ್ಕಾರ ಸಕ್ಕರೆ ಆಮದು ಸುಂಕವನ್ನು ಶೇ. 25 ರಿಂದ ಶೇ.40ಕ್ಕೆ ಏರಿಸಿದೆ. ವಿದೇಶಗಳಿಂದ ಆಮದು ಆಗುವ ಕಚ್ಚಾ ಸಕ್ಕರೆಯನ್ನು  ಆರು ತಿಂಗಳೊಳಗೆ ಸಕ್ಕರೆಯಾಗಿ ಪರಿವರ್ತಿಸಿಕೊಳ್ಳಿ ಎಂದು ಕೇಂದ್ರ ಷರತ್ತು ವಿಧಿಸಿರುವುದು ಸ್ವಲ್ಪ ಮಟ್ಟಿಗೆ ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸಬಹುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com