
ಸಚಿವರೇ ಈ ರೀತಿ ವಿರೋಧಿಸುವುದು ಸರಿಯಲ್ಲ: ಆಂಜನೇಯ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಬಗ್ಗೆ ಸಚಿವ ಸಂಪುಟ ಸದಸ್ಯರಲ್ಲೇ ಭಿನ್ನಧ್ವನಿ ವ್ಯಕ್ತವಾಗಿದೆ.
ಗಣತಿ ಕಾರ್ಯಕರ್ತರು ಮನೆಗೆ ಬಂದಾಗ ಜಾತಿ ಕೇಳಿದರೆ `ಕ್ಯಾಕರಿಸಿ ಉಗಿದು, ಗೆಟ್‍ಔಟ್' ಎನ್ನುತ್ತಿದ್ದಾರೆ ಎಂದು ವಸತಿ ಸಚಿವ ಅಂಬರೀಷ್ ವ್ಯಂಗ್ಯವಾಡಿದ್ದು, ಎರಡನೇ ಬಾರಿಗೆ ಗಣತಿಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಆದರೆ ಸಂಪುಟ ಸಭೆಗೆ ಮುನ್ನ ಅಂಬರೀಷ್ ಅವರು ನೀಡಿರುವ ಈ ಹೇಳಿಕೆಗೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆ ರಾಜ್ಯ ಸಚಿವ ಸಂಪುಟದ ತೀರ್ಮಾನ. 84 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಮೀಕ್ಷೆ ನಡೆಸುತ್ತಿದ್ದೇವೆ. ಆಳುವ ಸರ್ಕಾರಕ್ಕೆ ಜನಸಂಖ್ಯೆ ಮತ್ತು ಅವರು ಪಡೆಯುತ್ತಿರುವ ಮೀಸಲು ಹಾಗೂ ಇತರೆ ಸೌಲಭ್ಯದ ಅರಿವು ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗಣತಿ ನಡೆಸುತ್ತಿದ್ದೇವೆ. ಅಂಬರೀಷ್ ಅವರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆದರೆ ವಿರೋಧ ವ್ಯಕ್ತಪಡಿಸುವುದು ಮಾತ್ರ ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಮೀಕ್ಷೆಯಲ್ಲಿ ಕೇವಲ ಜಾತಿಯ ಮಾಹಿತಿ ಮಾತ್ರ ಕೇಳುತ್ತಿಲ್ಲ. 55 ಪ್ರಶ್ನೆಗಳಿವೆ. ಜಾತಿ ಅಥವಾ ಧರ್ಮದ ವಿವರ ನೀಡಲು ಇಷ್ಟವಿಲ್ಲದೇ ಇದ್ದರೆ ಗೊತ್ತಿಲ್ಲ ಎಂದು ಹೇಳಲಿ. ಅದನ್ನು ಬಿಟ್ಟು ಈ ರೀತಿ ಮಾತನಾಡಬಾರದು. ಪೇಜಾವರ ಶ್ರೀಗಳನ್ನೂ ಒಳಗೊಂಡಂತೆ ಪ್ರಮುಖ ಮಠಾಧೀಶರು, ಸಮುದಾಯ ಮುಖಂಡರು, ಅವಕಾಶ ವಂಚಿತ ಸಮುದಾಯದವರು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಈ ಸಮೀಕ್ಷೆ ವರದಿ ಬಂದರೆ ಅಂಬರೀಷ್ ಅವರ ಇಲಾಖೆಯಲ್ಲಿ ಯೋಜನೆ ರೂಪಸುವುದಕ್ಕೂ ಅನುಕೂಲವಾಗುತ್ತದೆ ಎಂದಿದ್ದಾರೆ.
ಅಂಬಿ ಹೇಳಿದ್ದೇನು?
ಸಂಪುಟ ಸಭೆಗೆ ಆಗಮಿಸುವುದಕ್ಕೆ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ವಸತಿ ಸಚಿವ ಅಂಬರೀಷ್, ಜಾತಿ ಗಣತಿ ವಿರುದ್ಧ ನಾನು ಮಾತನಾಡಿಲ್ಲ. ಆದರೆ ಗಣತಿ ಮಾಡುವವರು ಮನೆಗೆ ಬಂದು ಜಾತಿ ಕೇಳಿದರೆ ಜನರೆ ಕ್ಯಾಕರಿಸಿ ಉಗಿದು ಗೆಟ್ ಔಟ್ ಎನ್ನುತ್ತಿದ್ದಾರೆ. ನನ್ನ ಮನೆಗೆ ಸಾಮಾಜಿಕ ಸಮೀಕ್ಷೆ ನಡೆಸುವುದಕ್ಕೆ ಬಂದ ಕಾರ್ಯಕರ್ತರೇ ಈ ರೀತಿ ನೋವು ತೋಡಿಕೊಂಡಿದ್ದಾರೆ. ಜಾತಿ ಎಂಬ ಪ್ರಶ್ನೆ ಕೇಳುತ್ತಿದ್ದಂತೆ ಕ್ಯಾಕರಿಸಿ ಉಗಿದು ಗೆಟ್ ಔಟ್ ಎನ್ನುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದೆಲ್ಲ ಕಷ್ಟ. ನಾನು ಒಂದು ಜಾತಿ ನನ್ನ ಹೆಂಡತಿ ಇನ್ನೊಂದು ಜಾತಿ ಎಂದರು.
Advertisement