ಬಂಧಿತ ಆರೋಪಿ ನಿಖಿತಾ
ಬಂಧಿತ ಆರೋಪಿ ನಿಖಿತಾ

ಗೆಳೆಯನ ದರೋಡೆ ಮಾಡಿಸಿದ್ದ ಗೆಳತಿ ಸೆರೆ

ಪತ್ನಿ ಇಲ್ಲದ ವೇಳೆ ಸ್ನೇಹಿತೆಗೆ ಕರೆ ಮಾಡಿ ಮನೆಗೆ ಬರುವಂತೆ ಆಹ್ವಾನಿಸಿದ ವ್ಯಕ್ತಿಯೊಬ್ಬ ತಾನೇ ದರೋಡೆಗೆ ಒಳಗಾಗಿದ್ದ ಪ್ರಕರಣ ಸಂಬಂಧ ಮಹಿಳೆ ಸೇರಿ ಐವರು...

ಬೆಂಗಳೂರು: ಪತ್ನಿ ಇಲ್ಲದ ವೇಳೆ ಸ್ನೇಹಿತೆಗೆ ಕರೆ ಮಾಡಿ ಮನೆಗೆ ಬರುವಂತೆ ಆಹ್ವಾನಿಸಿದ ವ್ಯಕ್ತಿಯೊಬ್ಬ ತಾನೇ ದರೋಡೆಗೆ ಒಳಗಾಗಿದ್ದ ಪ್ರಕರಣ ಸಂಬಂಧ ಮಹಿಳೆ ಸೇರಿ ಐವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಬನ್ನೇರುಘಟ್ಟ ಮುಖ್ಯರಸ್ತೆ ಬಿಳೇಕಹಳ್ಳಿ ನಿವಾಸಿ ಕದಿರೇಶನ್(24), ಹೊಂಗಸಂದ್ರ ಸಮೀಪದ ಆದರ್ಶ ಬಡಾವಣೆಯ ಚರಣ್(22), ತಿಲಕನಗರದ ಉದಯ(25), ಸುರೇಶ(23) ಹಾಗೂ ತಟಗುಪ್ಪೆಯ ನಿಖಿತಾ(19) ಬಂಧಿತರು. ಆರೋಪಿಗಳಿಂದ ರು. 20 ಸಾವಿರ ನಗದು, ಚಿನ್ನದ ಸರ, ಉಂಗುರಗಳು, ಕೈಗಡಿಯಾರ, ಕ್ಯಾಮೆರಾ, ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಚಾಕು ವಶಪಡಿಸಿಕೊಳ್ಳಲಾಗಿದೆ.

ಏ.21ರಂದು ರಾತ್ರಿ 9.15ರ ಸುಮಾರಿಗೆ ಪದ್ಮನಾಭನಗರ ಆರ್‍ಕೆ ಬಡಾವಣೆ 2ನೇ ಹಂತದಲ್ಲಿ ಚಂದ್ರು ಎಂಬವರ ಮನೆಯಲ್ಲಿ ದರೋಡೆ ನಡೆದಿತ್ತು. ಶುಕ್ರವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಯುಕ್ತ ಎಂ.ಎನ್.ರೆಡ್ಡಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.

ಅಂದು ಏನಾಗಿತ್ತು?
ಆದರ್ಶ ಡೆವಲಪರ್ಸ್‍ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಚಂದ್ರು ಅವರಿಗೆ ಕೆಲ ತಿಂಗಳ ಹಿಂದೆ ನಗರ ಹೊರವಲಯದ ರೆಸಾರ್ಟ್‍ವೊಂದರಲ್ಲಿ ಆರೋಪಿ ನಿಖಿತಾ ಪರಿಚಯವಾಗಿದ್ದರು. ಚಂದ್ರುಗೆ ವಿವಾಹವಾಗಿದ್ದು ಪತ್ನಿಯೊಂದಿಗೆ 3ನೇ ಕ್ರಾಸ್ ನಲ್ಲಿರುವ ಮನೆಯೊಂದರ ಮೊದಲನೇ ಮಹಡಿಯಲ್ಲಿ ವಾಸವಿದ್ದರು. ಆದರೆ, ಕೆಲ ದಿನಗಳ ಹಿಂದೆ ಪತ್ನಿ ಊರಿಗೆ ಹೋಗಿದ್ದು ಮನೆಯಲ್ಲಿ ಒಂಟಿಯಾಗಿದ್ದರು. ತಾವು ವಾಸವಿರುವ ಮನೆಯ ಎರಡನೇ ಮಹಡಿಯಲ್ಲಿ ಬಾಡಿಗೆಗೆ ವಾಸವಿದ್ದ ಯುವಕ ಕೆಲಸದ ಮೇಲೆ ಹೊರಗೆ ಹೋಗಿದ್ದ. ಕೆಳಗಿನ ಮನೆಯಲ್ಲಿ ವಾಸವಿದ್ದ ಕುಟುಂಬ ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿದ್ದರು.

ಮನೆಯಲ್ಲಿ ಯಾರೂ ಇಲ್ಲದ ವೇಳೆ ನಿಖಿತಾಗೆ ಕರೆ ಮಾಡಿದ ಚಂದ್ರು, ಫೋನ್‍ನಲ್ಲಿ ಮಾತನಾಡುತ್ತಾ ತನ್ನ ಮನೆಯಲ್ಲಿ ಯಾರು ಇಲ್ಲದಿರುವ ವಿಚಾರ ತಿಳಿಸಿದ್ದ. ಈ ವೇಳೆ ನಿಖಿತಾ ಜತೆ ಆಕೆಯ ಕಾರು ಚಾಲಕ ಹಾಗೂ ಸ್ನೇಹಿತ ಕದಿರೇಶನ್ ಕೂಡಾ ಇದ್ದರು. ಚಂದ್ರು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಳಸಿಕೊಂಡು ಇಬ್ಬರು ಸೇರಿ ಹಣದಾಸೆಗೆ ಚಂದ್ರು ಮನೆಯಲ್ಲಿ ದರೋಡೆಗೆ ಸಂಚು ರೂಪಿಸಿದ್ದರು. ಅದಕ್ಕಾಗಿ ಕದಿರೇಶನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತರಾದ ಚರಣ್, ಉದಯ ಹಾಗೂ ಸುರೇಶ್ ಬಳಸಿಕೊಂಡರು.

ಏ.21ರಂದು ಕದಿರೇಶನ್ ಕಚೇರಿಯಿಂದ ಮನೆಗೆ ಹೋಗುವುದನ್ನು ಗಮನಿಸಿ ಹಿಂಬಾಲಿಸಿಕೊಂಡು ಹೋಗಿದ್ದ ಆರೋಪಿಗಳು ಮನೆ ನೋಡಿಕೊಂಡಿದ್ದರು. ರಾತ್ರಿ 9.15ರ ಸುಮಾರಿಗೆ ಚರಣ್, ಉದಯ ಹಾಗೂ ಸುರೇಶ್ ಮಾತ್ರ ಚಂದ್ರು ಮನೆಗೆ ನುಗ್ಗಿ ಬಾಯಿಗೆ ಬಟ್ಟೆ ತುರುಕಿ, ಕೈ-ಕಾಲು ಕಟ್ಟಿ ಹಾಕಿ ಚಾಕುವಿನಿಂದ ಬೆದರಿಸಿ ಚಿನ್ನಾಭರಣ, ರು. 40 ಸಾವಿರ ನಗದು, 100 ಯುಕೆ ಪೌಂಡ್ ಹಾಗೂ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಕ್ಕಿಬಿದ್ದಿದ್ದು ಹೇಗೆ?
ತನಿಖೆ ಆರಂಭಿಸಿದ ಪೊಲೀಸರಿಗೆ ಚಂದ್ರು ವಾಸವಿದ್ದ ಮನೆಯ ಮೇಲಿನ ಮನೆ ಹಾಗೂ ಕೆಳಗಿನ ಮನೆ ಖಾಲಿ ಇರುವುದು ಹಾಗೂ ಚಂದ್ರು ಪತ್ನಿ ಮನೆಯಲ್ಲಿ ಇಲ್ಲದ ವೇಳೆಯೇ ಈ ಕೃತ್ಯ ನಡೆದಿರುವುದರಿಂದ ಪರಿಚಿತರ ತಂಡವೇ ದರೋಡೆ ನಡೆಸಿರಬಹುದು ಎನ್ನುವ ಅನುಮಾನವಿತ್ತು. ಹೀಗಾಗಿ, ಚಂದ್ರು ಮೊಬೈಲ್ ಫೋನ್ ಕರೆಗಳ ಪರಿಶೀಲನೆ ನಡೆಸಿದಾಗ ನಿಖಿತಾಳನ್ನು ಸಂಪರ್ಕಿಸಿರುವುದು ಗೊತ್ತಾಗಿತ್ತು. ಪೊಲೀಸರು ನಿಖಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನಗೆ ಏನೂ ಗೊತ್ತಿಲ್ಲ ಎಂದಿದ್ದಳು.

ಹೀಗಾಗಿ, ಪೊಲೀಸರು ನಿಖಿತಾಳೊಂದಿಗೆ ಸಂಪರ್ಕದಲ್ಲಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಕದಿರೇಶನ್ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಎಸಗಿದ್ದ ಮೂವರ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಲದೇ ನಿಖಿತಾ ಕೂಡಾ ದರೋಡೆ ಸಂಚು ರೂಪಿಸಿದ್ದಾಗ ಬಾಯ್ಬಿಟ್ಟಿದ್ದಾರೆ. ನಗರದಲ್ಲಿ ಒಂಟಿ ಮನೆಗೆ ನುಗ್ಗಿ ದರೋಡೆ ಎಸಗುವ ಪ್ರಕರಣಗಳು ಅತಿ ವಿರಳ. ಆದರೆ, ಇಂತಹ ಪ್ರಕರಣಗಳು ಜನರಲ್ಲಿ ಭೀತಿ ಮೂಡಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.
- ಎಂ.ಎನ್ ರೆಡ್ಡಿ, ನಗರ ಪೊಲೀಸ್ ಆಯುಕ

Related Stories

No stories found.

Advertisement

X
Kannada Prabha
www.kannadaprabha.com