
ಬೆಂಗಳೂರು: ಅಕಾಲಿಕ ಮಳೆಗಳಿಂದ ತತ್ತರಿಸಿರುವ 8 ಜಿಲ್ಲೆಗಳ ರೈತರಿಗೆ ಪರಿಹಾರ ಹಣವನ್ನಾಗಿ ರಾಜ್ಯ ಸರ್ಕಾರ ರು.216 ಕೋಟಿ ಬಿಡುಗಡೆ ಮಾಡಿದೆ.
ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರಗಿ, ಬೀದರ್, ವಿಜಯಪುರ ಹಾಗೂ ಗದಗ ಜಿಲ್ಲೆಗಳಲ್ಲಿ ಕಳೆದ ವಾರ ಸುರಿದ ಆಲಿಕಲ್ಲು ಮಳೆಯಿಂದ 69 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿನ ಬೆಳೆ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಹೆಕ್ಟೇರ್‍ಗೆ ರು.25 ಸಾವಿರದಂತೆ ರು.216 ಕೋಟಿ ಹಣವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಶನಿವಾರದಿಂದಲೇ ರೈತರಿಗೆ ಪರಿಹಾರ ಹಣ ವಿತರಣೆಯಾಗಲಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಮಾನದಂಡದಂತೆ ಪ್ರತಿ ಹೆಕ್ಟೇರ್‍ಗೆ ರು.13,500 ಪರಿಹಾರ ನೀಡಲಾಗುತ್ತಿತ್ತು. ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ಈಗ ಪ್ರತಿ ಹೆಕ್ಟೇರ್ ಗೆ ರು.25 ಸಾವಿರ ನೀಡಲಾಗುವುದು. ಸರ್ಕಾರ ತಾನು ನೀಡಿದ್ದ ಮಾತು ಉಳಿಸಿಕೊಂಡಿದೆ. ಆದರೆ ಕೇಂದ್ರ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತಾಳಿರುವುದು ಬೇಸರ ತಂದಿದೆ. ರಾಜ್ಯ ಸರ್ಕಾರ ತನ್ನ ಅನುದಾನದಿಂದಲೇ ಸಂಪೂರ್ಣ ಪರಿಹಾರ ಧನ ನೀಡುತ್ತಿದೆ.
ಕೇಂದ್ರವು ಎಸ್‍ಡಿಆರ್‍ಎಫ್ ನಿಂದ ನೀಡಬೇಕಿರುವ ರು.103.5 ಕೋಟಿಯನ್ನು ಜೂನ್ ಅಂತ್ಯದೊಳಗೆ ನೀಡುವ ವಿಶ್ವಾಸವಿದೆ. ಆದರೆ ರಾಜ್ಯದಲ್ಲಿ ಸುರಿದಿರುವ ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ಕೇಂದ್ರ ಬರುತ್ತಿಲ್ಲ. ಈ ಸಂಬಂಧ ಪತ್ರ ಬರೆದಿದ್ದರೂ ಕೇಂದ್ರ ಕೃಷಿ ಸಚಿವಾಲಯದಿಂದ ಧನಾತ್ಮಕ ಪ್ರತಿಕ್ರಿಯೆ ಬಂದಿಲ್ಲ.ಹಾನಿ ವೀಕ್ಷಣೆಗೆ ಸಮೀಕ್ಷಾ ತಂಡವನ್ನು ಕಳುಹಿಸುವುದಿಲ್ಲ ಎಂದು ಕೇಂದ್ರ ಹೇಳಿದೆ. ಎನ್ ಡಿಎ ಸರ್ಕಾರದ ರೈತ ಕಾಳಜಿ ಇಲ್ಲಿ ಪ್ರದರ್ಶನ ವಾಗುತ್ತದೆ. ರಾಜ್ಯದ ಮೇಲೆ ಸಂಪೂರ್ಣ ಹೊರೆ ಹೊರಿಸುವುದು ಸೂಕ್ತವಲ್ಲ ಎಂದರು.
ಅಕಾಲಿಕ ಮಳೆಯಿಂದ ರು.596.79 ಕೋಟಿ ನಷ್ಟವಾಗಿದೆ. ಸಂಪೂರ್ಣ ವೆಚ್ಚ ಭರಿಸಬೇಕಾದರೆ ಕೇಂದ್ರ ನೆರವಿಗೆ ಬರಬೇಕು. ಇದಲ್ಲದೇ ರಾಜ್ಯದಲ್ಲಿ ಉಳಿದ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಸರ್ಕಾರ ಈ ಬಗೆಗೂ ಎಚ್ಚರವಹಿಸಬೇಕು. ಆದರೆ ನಾವು ಯಾವುದೇ ಹಣವನ್ನು ನೀಡುವುದಿಲ್ಲ ಎಂದು ಕೇಂದ್ರ ಹೇಳಿದರೆ ರಾಜ್ಯ ಸರ್ಕಾರದ ಪರಿಸ್ಥಿತಿ ಏನಾಗಬೇಕು? ಇದು ರೈತರಿಗೆ ಕೇಂದ್ರ ನೀಡುತ್ತಿರುವ ಬಹುಮಾನವಾಗಿದೆ. ಉಳಿದ ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿರುವ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ. ಆಗಲಾದರೂ ಪರಿಹಾರ ನೀಡುವ ಹಾಗೂ ವೀಕ್ಷಣಾ ತಂಡ ಕಳುಹಿಸುವ ಕ್ರಮ ತೆಗೆದುಕೊಳ್ಳಲಿ ಎಂದರು.
Advertisement