ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿ ಎ.ಟಿ.ರಾಮಸ್ವಾಮಿ

ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಮೂಲ ಭೂಗಳ್ಳರನ್ನು ಪತ್ತೆ ಮಾಡಿ, ಭೂಗಳ್ಳರಿಗೆ ಸಹಕರಿಸಿದ ಅಧಿಕಾರಿ ಹಾಗೂ ನೌಕರರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಆಗ್ರಹಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಮೂಲ ಭೂಗಳ್ಳರನ್ನು ಪತ್ತೆ ಮಾಡಿ, ಭೂಗಳ್ಳರಿಗೆ ಸಹಕರಿಸಿದ ಅಧಿಕಾರಿ ಹಾಗೂ ನೌಕರರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು
ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಆಗ್ರಹಿಸಿದ್ದಾರೆ.

ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿಯ ನಾಯಕತ್ವ ವಹಿಸಿರುವ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ವಿಧಾನಸಭೆ ಮಾಜಿ ಸ್ಪೀಕರ್ ಕೃಷ್ಣ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ, ಭೂಕಬಳಿಕೆ ಕುರಿತು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿ 20 ಅಂಶಗಳ ಮನವಿ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಸ್ವಾಮಿ, ಭೂ ಕಬಳಿಕೆಗೆ ಸಂಬಂಧಿಸಿದಂತೆ ಸರ್ಕಾರ ಕ್ರಿಯಾ ಯೋಜನೆ ಮಾಡದೆ ಮನಬಂದಂತೆ ಕಾರ್ಯಾಚರಣೆ ನಡೆಸುವುದು ಸೂಕ್ತವಲ್ಲ. `ಅಮಾಯಕರಿಗೆ ಶಿಕ್ಷೆ ಕಳ್ಳರಿಗೆ ರಕ್ಷಣೆ ಎಂಬಂತೆ ಆಗಬಾರದು.

ಮೂಲ ಭೂಗಳ್ಳರನ್ನು ಪತ್ತೆ ಹಚ್ಚಬೇಕು. ಸರ್ಕಾರದ ಜಮೀನು ಕಬಳಿಕೆ ಮಾಡಿ ನೂರಾರು ಕೋಟಿ ಆಸ್ತಿ ಸಂಪಾದನೆ ಮಾಡಿದವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಮನೆಗಳನ್ನು ಕಳೆದುಕೊಂಡವರಿಗೆ ಆ ಹಣದಿಂದ ಸರ್ಕಾರ ಪರಿಹಾರ ನೀಡಬೇಕು ಎಂದರು.

ಇಂದು ಕೇವಲ ಕೆರೆಗಳು ಮಾತ್ರವಲ್ಲದೇ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‍ಡಿಎ), ಅವಿಭಜಿತ ಬೆಂಗಳೂರು ಜಿಲ್ಲೆ, ಬೆಂಗಳೂರು ನಗರ ಮತ್ತು ರಾಮನಗರದ ಸುತ್ತಮುತ್ತ ಸುಮಾರು 5 ಲಕ್ಷ ಎಕರೆ ಸರ್ಕಾರಿ ಭೂಮಿ ಇದ್ದು, ಇಂದು ಸುಮಾರು 1 ಲಕ್ಷ ಕೋಟಿಗೂ ಮೀರಿ ಬೆಲೆ ಬಾಳುವ ಸರ್ಕಾರಿ ಭೂಮಿಗೆ ಭೂಗಳ್ಳರು ಸುಳ್ಳು ದಾಖಲೆ ಸೃಷ್ಟಿಸಿ ನುಂಗಿ ನೀರು ಕುಡಿದಿದ್ದಾರೆ. ಈ ರೀತಿ ಮಾಡಿದವರು ಅಮಾಯಕರಲ್ಲ, ಅವರೆಲ್ಲರೂ ಬಲಾಢ್ಯರು ಮತ್ತು ಪ್ರಭಾವಶಾಲಿಗಳು.

ಅಧಿಕಾರಿಗಳ ಮತ್ತು ನೌಕರ ವರ್ಗದ ಶಾಮೀಲಿನಿಂದಾಗಿ ನೂರಾರು ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಭೂಗಳ್ಳರು ನುಂಗಿ ನೀರು ಕುಡಿದಿದ್ದಾರೆ. ಸರ್ಕಾರ ಒಂದು ಕಾಲಮಿತಿಯೊಳಗೆ ಕಾರ್ಯಕ್ರಮ ರೂಪಿಸಿ ಸರ್ಕಾರ ತನ್ನ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಬೇಕು. ಹಾಗೆಯೇ ಭೂ ಕಬಳಿಕೆ ಮಾಡಿದವರಿಗೆ ಶಿಕ್ಷೆಗೆ ಒಳಪಡಿಸಬೇಕು ಎಂದರು.

ಬೆಂಗಳೂರು ಸುತ್ತಮುತ್ತಲಿನ ಕೆರೆಗೆ ಸಂಬಂಧಿಸಿದಂತೆ ಈ ಹಿಂದೆಯೇ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಕೆರೆಗಳಿಗೆ ಸಂಬಂಧಿಸಿದಂತೆ ವಸ್ತು ಸ್ಥಿತಿ ಮತ್ತು ಕೆರೆಗಳ ರಕ್ಷಣೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸುವಂತೆ ಹೈಕೋರ್ಟ್ ಸಮಿತಿ ರಚನೆ ಮಾಡಿತ್ತು. 2012ರಲ್ಲಿ ತೀರ್ಪು ನೀಡಿ ಸಮಿತಿ ನೀಡಿದ ವರದಿಯಲ್ಲಿನ ಅಂಶವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಷ್ಠಾನಗೊಳಿಸುವಂತೆ ಆದೇಶ ನೀಡಿತ್ತು.

ಆ ಪ್ರಕರಣದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೇ ಮೊದಲನೆಯ ಪ್ರತಿವಾದಿಯಾಗಿದ್ದರು. ಆದರೆ ಮುಖ್ಯ ಕಾರ್ಯದರ್ಶಿಗಳು ಆದೇಶ ಪಾಲಿಸದೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇವರು ಆ ಅಕ್ರಮದಲ್ಲಿ ಶಾಮೀಲಾಗಿದ್ದಾರಾ? ರಾಜ್ಯದ ಸಂಪತ್ತನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರ ಹಾಗೂ ಅಧಿಕಾರಿಗಳ ಮೇಲಿದೆ. ಇದನ್ನು ನಿರ್ವಹಿಸಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಯವರು ಇದಕ್ಕೆ ಪ್ರತಿಕ್ರಿಯಿಸಿದ್ದು, ಈಗ ರಾಜ್ಯದಲ್ಲಿ ಗ್ರಾಪಂ ಚುನಾವಣೆ ಘೋಷಣೆಯಾಗಿದೆ.

ಚುನಾವಣೆ ಮುಗಿದ ಬಳಿಕ ಮತ್ತೊಮ್ಮೆ ಸಮಿತಿಯ ಪ್ರಮುಖರನ್ನು ಕರೆಯಿಸಿ, ರಾಜ್ಯಮಟ್ಟದ ಅಧಿಕಾರಿಗಳು ಸೇರಿ ಈ ಬಗ್ಗೆ ವಿಸ್ತೃತ ಚರ್ಚೆ ಮಾಡಲಾಗುವುದು. ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಮನವಿಯಲ್ಲೇನಿದೆ?

  • ಕೆರೆಗಳ ರಕ್ಷಣೆ ಕುರಿತಂತೆ ಹೈಕೋರ್ಟ್ ನೀಡಿದ ಆದೇಶ ಉಲ್ಲಂಘಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ವಿಚಾರಣೆಗೆ ಒಳಪಡಿಸಬೇಕು.
  • ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಮಾಜಿ ಸಂಸದ ಸಾಂಗ್ಲಿಯಾನ ಅವರ ಕುಟುಂಬ ಸದಸ್ಯರ ಹೆಸರಲ್ಲಿದ್ದ 8 ಎಕರೆ ಭೂಮಿಯನ್ನು
  • ಜಿಲ್ಲಾಡಳಿತಾಧಿಕಾರಿ ವಶಪಡಿಸಿಕೊಂಡಿದ್ದಾರಷ್ಟೆ. ಆದರೆ ಅವರ ವಿರುದ್ಧ ಈವರೆಗೂ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ ಮತ್ತು ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲು ವಿಫಲವಾಗಿರುವ ಡಿಪಿಎಆರ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.
  • 2011ರಿಂದ 2014ರವರೆಗೆ ಸುಮಾರು 30 ಲಕ್ಷ ಎಕರೆ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗಿದೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.
  • ಕಾಲಮಿತಿಯಲ್ಲಿ ಕ್ರಿಯಾ ಯೋಜನೆ ರೂಪಿಸಬೇಕು. ಭೂ ಒತ್ತುವರಿದಾರರ ಮತ್ತು ಅದಕ್ಕೆ ಸಹಕರಿಸಿದ ಅಧಿಕಾರಿಗಳ ಪಟ್ಟಿ ತಯಾರು ಮಾಡಿ ಎಫ್ಐಆರ್ ದಾಖಲಿಸಬೇಕು.
  • ಬಿಡಿಎ 1962ರಿಂದ ಸುಮಾರು 20 ಸಾವಿರ ಎಕರೆ ಭೂಮಿ ವಶಪಡಿಸಿಕೊಂಡಿದ್ದು, 4 ಸಾವಿರ ಎಕರೆ ಡಿನೋಟಿಫೈ ಮಾಡಲಾಗಿದೆ. ಉಳಿದ 16 ಸಾವಿರ ಎಕರೆಯಲ್ಲಿ 4 ಸಾವಿರ ಎಕರೆ ನಾಗರಿಕ ಬಳಕೆಗಾಗಿ(ಸಿಎ) ಮೀಸಲಿಟ್ಟಿದೆ. ಆದರೆ ವಾಸ್ತವವಾಗಿ ಬಿಡಿಎ ಬಳಿ ಸದ್ಯ ಕೇವಲ 800 ಎಕರೆ ಮಾತ್ರ ಬಾಕಿ ಉಳಿದಿದೆ. ಬರೋಬ್ಬರಿ 3 ಸಾವಿರ ಎಕರೆ ಬಿಡಿಎ ಜಾಗವನ್ನು ರಾಜಕಾರಣಿಗಳು ಹಾಗೂ ಬಿಲ್ಡರ್‍ಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಸ್ವತಃ ಬಿಡಿಎ 21 ಬಡಾವಣೆಗಳನ್ನು ಕೆರೆಗಳ ಮೇಲೆ ಅಕ್ರಮವಾಗಿ ನಿರ್ಮಾಣ ಮಾಡಿದೆ.
  • ಬಿಡಿಎ ಮಾಡಿದ ತಪ್ಪಿನಿಂದ ಸಾರಕ್ಕಿ ಮತ್ತು ಬಾಣಸವಾಡಿ ಕೆರೆ ಸುತ್ತಮುತ್ತ ವಾಸವಿದ್ದ ಅಮಾಯಕ ಮಧ್ಯಮ ಮತ್ತು ಬಡವರು ಇಂದು ಬೀದಿ ಪಾಲಾಗಿದ್ದಾರೆ.ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಸರ್ಕಾರ ಮಾಡಬೇಕು. ಕೆರೆಗಳನ್ನು ಒತ್ತುವರಿ ಮಾಡಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕಾನೂನು ಕ್ರಮ ತೆಗೆದುಕೊಳ್ಳಬೇಕು.
  • ಸರ್ಕಾರಿ ಭೂಮಿಯಲ್ಲಿ ವಾಸವಾಗಿದ್ದವರನ್ನು ತೆರವುಗೊಳಿಸಿದವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಬಿಡಿಎಗೆ ನೀಡಿರುವ 326 ಎಕರೆ 18 ಗುಂಟೆ ಜಾಗವನ್ನು ನಿಜವಾದ ಫಲಾನುಭವಿಗಳಿಗೆ ನೀಡಬೇಕು. ಈ ಕುರಿತು ಬಿಡಿಎ ಸಮಿತಿ ರಚಿಸಿ ಫಲಾನುಭವಿಗಳ ಪಟ್ಟಿ ತಯಾರು ಮಾಡಬೇಕು. ಬೆಂಗಳೂರು ನಗರ ಜಿಲ್ಲಾಧಿಕಾರಿ ಸಹ ಸಮಿತಿಯಲ್ಲಿ ಸದಸ್ಯರಾಗಿದ್ದು, ಈವರೆಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ನೀಡುವ ಕ್ರಮಕ್ಕೆ ಮುಂದಾಗಲೇ ಇಲ್ಲ. ಈ ಬಗ್ಗೆ ಕ್ರಮ ಆಗಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com