
ಬೆಂಗಳೂರು: ಎಲ್ಲ ಜಿಲ್ಲೆಗಳಲ್ಲೂ ಸರ್ಕಾರ ಗಾಂಧಿ ಭವನ ನಿರ್ಮಿಸುತ್ತದೆ. ಆ ಮೂಲಕ ಗಾಂಧೀಜಿ ಸಿದ್ಧಾಂತವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೆಂಟ್ರಲ್ ಕಾಲೇಜಿನ ಜ್ಞಾನಭಾರತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ `ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ' ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿ, ಗಾಂಧಿ ಸ್ಮಾರಕ ಭವನ ಹೆಚ್ಚಿನ ಕೆಲಸ ಮಾಡುವಂತಾಗಬೇಕು. ಯಾವುದೇ ಹೊಸ ಕಾರ್ಯಕ್ರಮ ಹಮ್ಮಿಕೊಂಡರೂ ಸರ್ಕಾರ ಪ್ರೊತ್ಸಾಹಿಸುತ್ತದೆ ಎಂದು ಭರವಸೆ ನೀಡಿದರು.
ಗಾಂಧೀಜಿ ಜಗತ್ತಿಗೇ ನಾಯಕ. ಅಮೆರಿಕ ಅಧ್ಯಕ್ಷ ಒಬಾಮಾ, ಮಾರ್ಟಿನ್ ಲೂಥರ್ ಸಹ ಮಹಾತ್ಮನ ಗುಣಗಾನ ಮಾಡಿದ್ದಾರೆ. ಎಲ್ಲ ಧರ್ಮಗಳನ್ನು ಪ್ರೀತಿಸುವ, ಸಕಲ ಧರ್ಮೀಯ. ಗ್ರಾಮಗಳ ಸ್ವಾವಲಂಬನೆ ಕನಸು ಕಂಡಿದ್ದ ಅವರು, ತೀವ್ರ ಸಮಸ್ಯೆಗಳನ್ನೂ ಬಗೆಹರಿಸುವಂತವರಾಗಿದ್ದರು. ಸುಖಾ ಸುಮ್ಮನೆ ನ್ಯಾಯಾಲಯಗಳ ಮೆಟ್ಟಿಲು ಹತ್ತದಂತೆ
ನೋಡಿಕೊಳ್ಳುತ್ತಿದ್ದರು ಎಂದರು.
ಚಿಂತನೆಗಳು ಎಂದಿಗೂ ಪ್ರಸ್ತುತ
ಗಾಂಧೀಜಿ ಬದುಕಿರುವವರೆಗೂ ಸತ್ಯದ ಅನ್ವೇಷಣೆಯಲ್ಲಿ ತೊಡಗಿದ್ದರು. ಕೋಮು ಸೌಹಾರ್ದತೆಯ ಪ್ರತೀಕವಾಗಿದ್ದರು. ಕರ್ನಾಟಕಕ್ಕೆ 18 ಬಾರಿ ಆಗಮಿಸಿದ್ದಾರೆ. ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆ ಬಿಟ್ಟರೆ ಉಳಿದೆಲ್ಲೆಡೆ ಸಂಚರಿಸಿರುವುದು ರಾಜ್ಯದ ಜನರ ಪುಣ್ಯ ಎಂದು ಹೇಳಿದರು. ನವದೆಹಲಿಯ ಮಹಾತ್ಮಗಾಂಧಿ ರಾಷ್ಟ್ರೀಯ ಸ್ಮಾರಕ ವಸ್ತು ಸಂಗ್ರಹಾಲಯ ನಿರ್ದೇಶಕ ಅಣ್ಣಾಮಲೈ, ಬೇರೆ ರಾಜ್ಯಗಳಲ್ಲಿ ಇಂಥ ಸರ್ಕಾರಿ ಕಾರ್ಯಕ್ರಮ ಮಾಡುವುದಾದರೆ ಜನರ, ಸಂಘ-ಸಂಸ್ಥೆಗಳ ಸಹಕಾರ ಅಗತ್ಯ. ಆದರೆ, ಇಲ್ಲಿ ರಾಜ್ಯ ಸರ್ಕಾರವೇ ಸ್ವತಃ ಆಸಕ್ತಿ ವಹಿಸಿರುವುದನ್ನು ಶ್ಲಾಘಿಸಿದರು. ಸಚಿವ ರಾದ ರೋಷನ್‍ಬೇಗ್, ಸಚಿವ ಎಚ್.ಕೆ. ಪಾಟೀಲ್, ಉಮಾಶ್ರೀ ಇತರರು ಇದ್ದರು.
Advertisement