
ಬೆಂಗಳೂರು: ಭೂ ಒತ್ತುವರಿ ತೆರವು ಇಷ್ಟೆಲ್ಲ ಅವಾಂತರ ಸೃಷ್ಟಿಸುತ್ತಿದ್ದರೂ ಪ್ರತಿಪಕ್ಷಗಳು ಏಕೆ ಮಾತನಾಡುತ್ತಿಲ್ಲ? ಭೂಗಳ್ಳರಿಂದ ಪ್ರತಿಪಕ್ಷಗಳಿಗೆ ಸೂಟ್‍ಕೇಸ್ ಹೋಗಿದೆ. ಅದಕ್ಕೆ ಯಾರೂ ಮಾತನಾಡುತ್ತಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ಭೂಗಳ್ಳರ ಪರ ಪ್ರತಿಭಟನೆಗೆ ಇಳಿದಿವೆ. ಕೆರೆಗಳು ಬೇಕೋ ಬೇಡವೋ ಎಂಬುದನ್ನು ಮೊದಲು ನಿರ್ಧರಿಸಲಿ. ಬಿಡಿಎ, ಟೌನ್‍ಶಿಪ್ ಎಲ್ಲವನ್ನೂ ಒಡೆದು ಹಾಕಲೇಬೇಕು. ಭೂಗಳ್ಳರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಮಾಯಕರಿಗೆ ನಿವೇಶನ ನೀಡುವುದು ಸರ್ಕಾರದ ಕರ್ತವ್ಯ. ಭೂ ಒತ್ತುವರಿಗೆ ಸಂಬಂಧಪಟ್ಟಂತೆ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಿರುವುದು ಸರ್ಕಾರದ ಉತ್ತಮ ನಿರ್ಧಾರ. ವಾರದಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಆದಷ್ಟು ಶೀಘ್ರ ಇದಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
ಶಾಂತಿನಗರ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಬಡವರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಯನ್ನು ಭೇಟಿ ಮಾಡಿ ಚರ್ಚಿಸುವೆ. ಬಡವರಿಗೆ ನ್ಯಾಯ ಸಿಗದೇ ಇದ್ದರೆ ರಕ್ತಪಾತ ಆಗಲಿದೆ. ಕಾನೂನು ತಿಳಿದಿಲ್ಲ ಎಂದು ಹೇಳಿದರೆ ಮಾಡಿದ ಅಪರಾಧಕ್ಕೆ ಕ್ಷಮೆ ಇರುವುದಿಲ್ಲ ಎಂದರು.
Advertisement