
ಬೆಂಗಳೂರು: ಹೆಬ್ಬಾಳ ಬಳಿ ಕೆಂಪಾಪುರ ಸಿಗ್ನಲ್‍ನಲ್ಲಿ ಸ್ಕೈವಾಕ್ ನಿರ್ಮಿಸಲು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಕೊಲಂಬಿಯಾ ಏಷಿಯಾ ಸಂಸ್ಥೆಯೊಂದಿಗೆ ಸಭೆ ನಡೆಸಿದ್ದು, 120 ದಿನಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲು ಸೂಚಿಸಲಾಗಿದೆ.
ಹೆಬ್ಬಾಳದ ಎಸ್ಟೀಮ್ ಮಾಲ್ ಬಳಿ ಫೆ.27ರಂದು ನಡೆದ ಅಪಘಾತದಲ್ಲಿ ಇಬ್ಬರು ಬಲಿಯಾಗಿದ್ದರು. ಇಲ್ಲಿ ಸ್ಕೈವಾಕ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿ ಎರಡು ತಿಂಗಳೂ ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಸ್ಕೈವಾಕ್ ನಿರ್ಮಿಸಲು ಒಪ್ಪಿಕೊಂಡಿದ್ದ ಕೊಲಂಬಿಯಾ ಏಷಿಯಾ ಸಂಸ್ಥೆಯೊಂದಿಗೆ ಸೋಮವಾರ ಆಡಳಿತಾಧಿಕಾರಿ ವಿಜಯಭಾಸ್ಕರ್ ಸಭೆ ನಡೆಸಿದ್ದು, 120 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.
ಸ್ಕೈವಾಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ, ಕೊಲಂಬಿಯಾ ಏಷಿಯಾ ಸಂಸ್ಥೆ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‍ಎಚ್‍ಎಐ) ನಡುವಿನ ಒಪ್ಪಂದಕ್ಕೆ ಮೇ 20ರೊಳಗೆ ಸಹಿ ಬೀಳಲಿದೆ. ಸ್ಕೈವಾಕ್ ನಿರ್ಮಿಸಲು ರು.2.60 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಯೋಜನಾ ವರದಿ(ಡಿಪಿಆರ್) ಹಾಗೂ ಕಾಮಗಾರಿಯ ವಿನ್ಯಾಸ ಸಿದ್ಧವಾಗಿದ್ದು, ಬಿಬಿಎಂಪಿಗೆ ಸಲ್ಲಿಕೆಯಾಗಿದೆ.
ಇದು ಅನುಮೋದನೆಗೊಂಡ ನಂತರ ಕಾಮಗಾರಿ ಆರಂಭವಾಗಲಿದೆ. ಸ್ಕೈವಾಕ್ ನಿರ್ಮಾಣ ಸ್ಥಳದಲ್ಲಿ ವಿದ್ಯುತ್ ಹಾಗೂ ನೀರು ಸಂಪರ್ಕವನ್ನು ಸ್ಥಳಾಂತರಿಸಿ ಬೇರೆ ಕಡೆ ಸಂಪರ್ಕ ನೀಡುವುದನ್ನು ಎನ್‍ಎಚ್‍ಎಐ ನಿರ್ಧರಿಸಲಿದೆ. ಸ್ಕೈವಾಕ್ ನಿರ್ಮಿಸುವ ಜಾಗ ಎನ್‍ಎಚ್‍ಎಐ ಗೆ ಸೇರಿದ್ದು, ಸ್ಥಳ ಹಾಗೂ ವಿಸ್ತೀರ್ಣದ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
ಮೊದಲು ಡಿ-ಬೂಟ್ (ವಿನ್ಯಾಸ, ನಿರ್ಮಾಣ, ಹಸ್ತಾಂತರ, ನಿರ್ವಹಣೆ) ಮಾದರಿಯಲ್ಲಿ ಸ್ಕೈವಾಕ್ ನಿರ್ಮಿಸಲು ಚಿಂತಿಸಲಾಗಿತ್ತು. ಈ ಮಾದರಿ ಕೈ ಬಿಟ್ಟಿದ್ದು, ಸಂಸ್ಥೆಯು ಸ್ಕೈವಾಕ್ ನಿರ್ಮಿಸಿದ ನಂತರ ಬಿಬಿಎಂಪಿಯೇ ನಿರ್ವಹಣೆ ಮಾಡಲಿದೆ. ಎನ್ಎಚ್ಎಐ ನಿಯಮದ ಪ್ರಕಾರವೇ ಸ್ಕೈವಾಕ್ ನಲ್ಲಿ ಸಂಸ್ಥೆಯ ಜಾಹೀರಾತುಗಳನ್ನು ಅಳವಡಿಸಲಾಗುತ್ತದೆ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
Advertisement