ಸಾಲು ದರೋಡೆ, ಸರಗಳ್ಳತನ, ಸುಲಿಗೆ!

ಅಪರಾಧ ತಡೆಗೆ ರೌಡಿಗಳ ಪರೇಡ್, ಹಳೇ ಅಪರಾಧಿಗಳ ಮೇಲೆ ನಿಗಾ ಮುಂತಾದ ಮುಂಜಾಗ್ರತ ಕ್ರಮ ಕೈಗೊಂಡು, ಏನೆಲ್ಲಾ ಸರ್ಕಸ್ ಮಾಡಿದರೂ ನಿಯಂತ್ರಣಕ್ಕೆ ಬಾರದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪರಾಧ ತಡೆಗೆ ರೌಡಿಗಳ ಪರೇಡ್, ಹಳೇ ಅಪರಾಧಿಗಳ ಮೇಲೆ ನಿಗಾ ಮುಂತಾದ ಮುಂಜಾಗ್ರತ ಕ್ರಮ ಕೈಗೊಂಡು, ಏನೆಲ್ಲಾ ಸರ್ಕಸ್ ಮಾಡಿದರೂ ನಿಯಂತ್ರಣಕ್ಕೆ ಬಾರದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಮುಂಜಾಗ್ರತ ಕ್ರಮಗಳು ಅಪರಾಧಿಗಳ ಮೇಲೆ ಪ್ರಭಾವ ಬೀರಿಲ್ಲ. ಏಕೆಂದರೆ, ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೆ ಮೂವರು ವೃದ್ಧರು ಸೇರಿ ಐವರನ್ನು ದುಷ್ಕರ್ಮಿಗಳು ದರೋಡೆ ಎಸಗಿದ್ದಾರೆ. ವಾಯುವಿಹಾರ ಮುಗಿಸಿ ಮನೆಗೆ ಮರಳುತ್ತಿದ್ದಾಗ ಗೇಟ್ ಬಳಿ ವಿಳಾಸ ಕೇಳುವ ನೆಪದಲ್ಲಿ ಮಾನಾಡಿಸಿದ ದುಷ್ಕರ್ಮಿಗಳಿಬ್ಬರು 200 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.

ಸರ ಕಸಿದರು

ಸಂಜಯನಗರ ಜಲದರ್ಶಿನಿ ಬಡಾವಣೆ 2ನೇ ಕ್ರಾಸ್ ನಿವಾಸಿ ಕಮಲಮ್ಮ(76) ಸರ ಕಳೆದುಕೊಂಡವರು. ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಕಮಲಮ್ಮ, 9.45ರ ವೇಳೆಗೆ ಮನೆಗೆ ವಾಪಸ್ಸಾಗಿದ್ದಾರೆ. ಗೇಟ್‍ನ ಮುಂದೆ ನಿಂತಿದ್ದ ಇಬ್ಬರು ಅಪರಿಚಿತರು ಹಿಂದಿಯಲ್ಲಿ ವಿಳಾಸ ಕೇಳಿದ್ದು, ಕಮಲಮ್ಮ ಪ್ರತಿಕ್ರಿಯಿಸುವಷ್ಟರಲ್ಲಿ ಸರ ಕಸಿದು ಕ್ಷಣಮಾತ್ರದಲ್ಲಿ ಬೈಕ್‍ನಲ್ಲಿ ಕಣ್ಮರೆಯಾಗಿದ್ದಾರೆ. ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್, ಉತ್ತರ ವಿಭಾಗ ಡಿಸಿಪಿ ಟಿ.ಆರ್.ಸುರೇಶ್ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಮಲಮ್ಮ ಅವರಿಂದ ಸರಗಳ್ಳರ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಕಳುವಾದ ಆಭರಣ ಹಿಂದಿರುಗುವ ಭರವಸೆ ನೀಡಿದ್ದಾರೆ.

ಬಸವೇಶ್ವರನಗರದ ಪ್ರಕರಣ
ಹಾಲು ಖರೀದಿಸಿ ಮನೆ ಒಳಗೆ ಹೋಗಲು ಗೇಟ್ ತೆಗೆಯುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿ 100 ಗ್ರಾಂ ಚಿನ್ನದ ಸರ ಕಸಿದು ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಮತ್ತೊಬ್ಬನ ಜತೆ ಪರಾರಿಯಾಗಿದ್ದಾನೆ. ಬಸವೇಶ್ವರನಗರ 3ನೇ ಹಂತ 2ನೇ ಕ್ರಾಸ್ ನಿವಾಸಿ ನಾಗರತ್ನ (59) ಬೆಳಗ್ಗೆ 7.10ರ ಸುಮಾರಿಗೆ ಸಮೀಪದ ಅಂಗಡಿಯಲ್ಲಿ ಹಾಲು ಖರೀದಿಸಿ ಮನೆಗೆ ವಾಪಸ್ಸಾಗಿದ್ದರು. ಗೇಟ್ ತೆಗೆದು ಇನ್ನೇನು ಒಳಗೆ ಹೋಗಬೇಕೆನ್ನುವಷ್ಟರಲ್ಲಿ ಹಿಂದಿನಿಂದ ಬಂದ ದುಷ್ಕರ್ಮಿ ಸರ ಕಿತ್ತು ಓಡಿದ್ದಾನೆ. ಸುಮಾರು ಅರ್ಧ ಗಂಟೆಯಿಂದ ಇಬ್ಬರು ಅಪರಿಚಿತರು ಮನೆ ಮುಂದೆ ಹಿಂದಿಯಲ್ಲಿ ಮಾತನಾಡುತ್ತ ನಿಂತಿದ್ದರು. ಅವರನ್ನು ಯಾರೆಂದು ಕೇಳಬೇಕು ಎನಿಸಿತು. ಆದರೆ, ಜಲಮಂಡಳಿ ಕಾಮಗಾರಿ ನಡೆಯುತ್ತಿದ್ದರಿಂದ ಕೆಲಸಗಾರರು ಇರಬೇಕು ಎಂದು ಸುಮ್ಮನಾಗಿದ್ದೆ ಎಂದು ನಾಗರತ್ನ ಅವರು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

50 ಗ್ರಾಂ ಚಿನ್ನದ ಸರ ಕದ್ದರು
ನಾಗರಬಾವಿ 9ನೇ ಬ್ಲಾಕ್‍ನಲ್ಲಿ ಮನೆ ಸಮೀಪದ ತರಕಾರಿ ಅಂಗಡಿಗೆ ತೆರಳಿ ಮನೆಗೆ ವಾಪಸಾಗುತ್ತಿದ್ದ ಸುನೀತಾ(50) ಎಂಬುವರಿಂದ 50 ಗ್ರಾಂ ಸರವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಸುನೀತಾ ಅವರು ಬೆಳಗ್ಗೆ ತರಕಾರಿ ತೆಗೆದುಕೊಂಡು ಮನೆಗೆ ಬರುತ್ತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಸರ ಅಪಹರಿಸಿದ್ದಾರೆ. ನಾಗರತ್ನ ಗಾಬರಿಗೊಂಡು ಕಿರುಚಾಡುವಷ್ಟರಲ್ಲಿ ದುಷ್ಕರ್ಮಿಗಳು ಕಣ್ಮರೆಯಾಗಿದ್ದರು. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹೋದರರ ದರೋಡೆ
ಜೆಸಿ ರಸ್ತೆಯಲ್ಲಿ ಮಂಗಳವಾರ ರಾತ್ರಿ 11.40ರ ಸುಮಾರಿಗೆ ಊಟ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಇಬ್ಬರು ಸ್ನೇಹಿತರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ದುಷ್ಕರ್ಮಿಗಳು 8 ಗ್ರಾಂ ಚಿನ್ನದ ಸರ ಹಾಗೂ ಬೈಕ್ ದೋಚಿದ್ದಾರೆ. ಸುಣ್ಣಕಲ್ ಪೇಟೆ ನಿವಾಸಿ ನಿತೀಶ್ ಅವರು ಸಹೋದರ ನಿಖಿಲ್ ಜತೆ ಚಿಕ್ಕಪ್ಪನ ಮನೆಯಲ್ಲಿ ಊಟ ಮಾಡಿಕೊಂಡು ಜೆ.ಸಿ ರಸ್ತೆಯಲ್ಲಿ ಮನೆಗೆ ಮರಳುತ್ತಿದ್ದರು. ರಾತ್ರಿ 11.40ರ ಸುಮಾರಿಗೆ ಸಿಂಡಿಕೇಟ್ ಬ್ಯಾಂಕ್ ಎದುರು ನಾಲ್ವರು ದುಷ್ಕರ್ಮಿಗಳು 2 ಬೈಕ್‍ಗಳಲ್ಲಿ ಬಂದು ಅಡ್ಡಗಟ್ಟಿ ಹಲ್ಲೆ ನಡೆಸಿ ಸರ ಹಾಗೂ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com