ಕನ್ನಡಕ್ಕೆ ಪದವಿ

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ಪದವಿ ತರಗತಿಗಳಿಗೆ ಕನ್ನಡ ಭಾಷೆ ಕಡ್ಡಾಯಗೊಳಿಸಲು ನಿರ್ಧರಿಸಿದೆ. 2015-16ನೇ ...
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು

ಬೆಂಗಳೂರು: ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ಪದವಿ ತರಗತಿಗಳಿಗೆ ಕನ್ನಡ ಭಾಷೆ ಕಡ್ಡಾಯಗೊಳಿಸಲು ನಿರ್ಧರಿಸಿದೆ. 2015-16ನೇ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸು ಮೇರೆಗೆ ಎಲ್ಲವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಪರಿಷತ್ ಸೂಚನೆ ನೀಡಿದೆ. ಮುಂದಿನ  ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಂಡು ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಮೊದಲ 4 ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಆರ್ .ವಿ.ದೇಶಪಾಂಡೆ ನೇತೃತ್ವದಲ್ಲಿ ನಡೆದ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ಸದ್ಯಕ್ಕೆ ಈ ನಿಯಮ ಎಂಜಿನಿಯರಿಂಗ್, ಎಂಬಿಬಿಎಸ್ ಹಾಗೂ  ನರ್ಸಿಂಗ್‍ಗೆ ಅನ್ವಯವಾಗುವುದಿಲ್ಲ. ಉನ್ನತ ಶಿಕ್ಷಣ ಪರಿಷತ್‍ನಲ್ಲಿ ಬುಧವಾರ ನಡೆದ ಕುಲಪತಿಗಳ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಎಲ್ಲ ಕುಲಪತಿಗಳು ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಯನ್ನು ಒಪ್ಪಿಕೊಂಡಿವೆ. ಇದಲ್ಲದೇ ಈ  ಸಂಬಂಧ ನಿರ್ಣಯವನ್ನು ಮುಂದಿನ  ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಳ್ಳಲೇಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ಅವರು ಎಲ್ಲ ಕುಲಪತಿಗಳಿಗೆ ಗುರುವಾರ ಪತ್ರ ಬರೆಯುತ್ತಿದ್ದಾರೆ. ಏತನ್ಮಧ್ಯೆ, ಉನ್ನತ ಶಿಕ್ಷಣದ ನಾನಾ ಹಂತದಲ್ಲಿ ಕನ್ನಡವನ್ನು ಕಲಿಸುವ ಪಠ್ಯವೊಂದನ್ನು ಸಿದ್ದಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಭಾಷಾ ತಜ್ಞರ ಕಮ್ಮಟ ಏರ್ಪಡಿಸಿ ಮಾರ್ಗಸೂಚಿ ತಯಾರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವೃತ್ತಿ ಶಿಕ್ಷಣ ಸಂಬಂಧ ಸಮಿತಿ

ಎಂಜಿನಿಯರಿಂಗ್, ವೈದ್ಯ, ದಂತವೈದ್ಯ ಹಾಗೂ ನರ್ಸಿಂಗ್ ಪದವಿ ತರಗತಿಗಳಿಗೆ ಕನ್ನಡ ಭಾಷೆಯನ್ನು ಕಲಿಸುವ ಸಂಬಂಧ ಹಂಪಿ ವಿವಿ ಕುಲಪತಿ ಪ್ರೊ. ರ.ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಶೀಘ್ರವೇ ವರದಿ ನೀಡುವಂತೆ ಸಮಿತಿ ಅಧ್ಯಕ್ಷರಿಗೆ ಸೂಚಿಸಲಾಗಿದೆ. ವರದಿ ಆಧರಿಸಿ ಮುಂಬರುವ ಶೈಕ್ಷಣಿಕ ವರ್ಷ ದಿಂದಲೇ ವೃತ್ತಿ ಶಿಕ್ಷಣಕ್ಕೂ ಅನ್ವಯ ಮಾಡುವ ಬಗ್ಗೆ ಸರ್ಕಾರ ಕಾತರಗೊಂಡಿದೆ. ವರದಿ ಆಧರಿಸಿ ಅಂತಿಮ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಲ್. ಹನುಮಂತಯ್ಯ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.


ಶಿಫಾರಸುಗಳು
ಬಿಸಿಎ, ಬಿಬಿಎಂ ಹಾಗೂ ಬಿಎಚ್‍ಎಂ ಸೇರಿ ಎಲ್ಲ ಪದವಿ ತರಗತಿಗಳಲ್ಲಿ ಕನ್ನಡ ಪಠ್ಯಕ್ರಮದ ಭಾಗವಾಗಬೇಕು. ಎಲ್‍ಎಲ್‍ಬಿ, ಐಟಿಐ, ನರ್ಸಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ
ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು ಈ ಕೋರ್ಸ್‍ಗಳಲ್ಲಿ ಕನ್ನಡ ಮಾಧ್ಯಮಕ್ಕೂ ಅವಕಾಶ ಮಾಡಿಕೊಡಬೇಕು. ಬಿಎಡ್, ಡಿಎಡ್‍ಗಳಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಬೇಕು. ವಿದೇಶಗಳಲ್ಲಿರುವಂತೆ ಇಲ್ಲೂ ವೃತ್ತಿ ಶಿಕ್ಷಣ ಪದವಿ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯನ್ನು ಕಡ್ಡಾಯಗೊಳಿಸಬೇಕು. ಕೃಷಿ ವಿವಿಗಳಲ್ಲಿಯೂ ಕನ್ನಡ ಭಾಷೆ
ಕಡ್ಡಾಯವಾಗಬೇಕು.


ಪ್ರಸ್ತುತಿ


ಮೊದಲ 4 ಸೆಮಿಸ್ಟರ್‍ಗಳಲ್ಲಿ ಒಂದು ಭಾಷೆಯಾಗಿ ಇಂಗ್ಲಿಷ್ ಕಡ್ಡಾಯ. ಕನ್ನಡ, ಹಿಂದಿ, ಸಂಸ್ಕೃತ ಅಥವಾ ಇತರೆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು.
 ಅಂತಿಮ ಪದವಿ ಕೋರ್ಸ್‍ಗೆ ಯಾವುದೇ ಭಾಷೆ ಇರುತ್ತಿರಲಿಲ್ಲ.


ಮೊದಲ 4 ಸೆಮಿಸ್ಟರ್‍ಗೆ ಕನ್ನಡವೂ ಕಡ್ಡಾಯ.
 ಆದರೆ ಇಂಗ್ಲಿಷ್ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com