ಎಟಿಎಂ ಸೆಕ್ಯುರಿಟಿ ಗಾರ್ಡ್ ಹತ್ಯೆ

ಹಳೆ ಮದ್ರಾಸ್ ರಸ್ತೆ ವಿಜಿನಾಪುರದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕೇಂದ್ರಕ್ಕೆ ಹಣ ದೋಚಲು ನುಗ್ಗಿದ ದುಷ್ಕರ್ಮಿಯೊಬ್ಬ...
ಮಿನ್ನತ್ ವುಲ್ಲಾ ಬಾರ್ಬಿಯಾ
ಮಿನ್ನತ್ ವುಲ್ಲಾ ಬಾರ್ಬಿಯಾ

ಬೆಂಗಳೂರು: ಹಳೆ ಮದ್ರಾಸ್ ರಸ್ತೆ ವಿಜಿನಾಪುರದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕೇಂದ್ರಕ್ಕೆ ಹಣ ದೋಚಲು ನುಗ್ಗಿದ ದುಷ್ಕರ್ಮಿಯೊಬ್ಬ ಸೆಕ್ಯುರಿಟಿ ಗಾರ್ಡ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ, ಹತ್ಯೆ ಮಾಡಿದ್ದಾನೆ.

ಅಸ್ಸಾಂ ಮೂಲದ ಮಿನ್ನತ್‍ವುಲ್ಲಾ ಬಾರ್ಬಿಯಾ (25) ಕೊಲೆಯಾ ವ್ಯಕ್ತಿ. ಭಾನುವಾರ ನಸುಕಿನ 3.30ರ ಸುಮಾರಿಗೆ ಕೃತ್ಯ ನಡೆದಿದ್ದು, ಸಂಜೆ 3 ಗಂಟೆ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ. 2 ವರ್ಷಗಳಿಂದ ಒನ್ ಮ್ಯಾನ್ ಸೆಕ್ಯುರಿಟಿ ಏಜೆನ್ಸಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಮಿನ್ನತ್‍ವುಲ್ಲಾ 2 ತಿಂಗಳಿಂದ ಎಟಿಎಂ ಭದ್ರತೆಗೆ ನಿಯೋಜನೆ ಗೊಂಡಿದ್ದ.

ಶನಿವಾರ ರಾತ್ರಿ ಪಾಳಿ ಕರ್ತವ್ಯಕ್ಕೆ ಬಂದಿದ್ದು, ಎಟಿಎಂ ಕೇಂದ್ರದ ಒಳಗಿರುವ ಚಿಕ್ಕ ಕೊಠಡಿಯಲ್ಲಿ ಲಘು ನಿದ್ರೆಗೆ ಜಾರಿದ್ದ. ಬೆಳಗಿನ ಜಾವ ಎಟಿಎಂ ಘಟಕದೊಳಗೆ ನುಗ್ಗಿದ ದುಷ್ಕರ್ಮಿ ಹಣ ದೋಚಲು ಯತ್ನಿಸಿದ್ದಾನೆ. ಎಚ್ಚರಗೊಂಡು ಮಿನ್ನತ್ ಹೊರಗೆ ಬಂದಿದ್ದಾನೆ.

ಹಣ ದೋಚುವ ಯತ್ನಕ್ಕೆ ವಿರೋಧಿಸಿದರೆ ದುಷ್ಕರ್ಮಿಯಿಂದ ತೊಂದರೆಯಾಗಬಹುದೆಂದು ಅಂದಾಜಿಸಿ ಹೊರಗೆ ಓಡಿ ಹೋಗಲು ಯತ್ನಿಸಿದ್ದಾನೆ. ಅಷ್ಟರಲ್ಲೇ ದುಷ್ಕರ್ಮಿ ರಾಡ್‍ನಿಂದ ಮಿನ್ನತ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಆದರೂ, ಹೇಗೋ ಹೊರ ಬಂದಾಗ ಮತ್ತೆ ಹಲ್ಲೆ ಮಾಡಿದ ದುಷ್ಕರ್ಮಿ, ಬಾಯಿಗೆ ಟೇಪ್ ಸುತ್ತಿ ಕೈ ಕಾಲು ಕಟ್ಟಿ ಹಾಕಿದ್ದಾನೆ. ಬಳಿಕ ಎಟಿಎಂ ಕೇಂದ್ರದ ಒಳಗೆ ನುಗ್ಗಿ ಸುಮಾರು 5 ನಿಮಿಷ ಎಟಿಎಂ ಯಂತ್ರ ಹೊಡೆದು ಹಣ ದೋಚಲು ಯತ್ನಿಸಿದ್ದಾನೆ. ಸಾಧ್ಯವಾಗದ ಕಾರಣ ಸ್ಥಳದಿಂದ ಪರಾರಿಯಾಗಿದ್ದಾನೆ.

ಬ್ಯಾಂಕ್, ಎಟಿಎಂ ಸೇರಿದಂತೆ ಬೇರೆ ಬೇರೆ ಮಳಿಗೆಗಳು ಒಂದೇ ಕಾಂಪ್ಲೆಕ್ಸ್‍ನಲ್ಲಿದ್ದು, ಭಾನುವಾರ ಎಲ್ಲಾ ಮಳಿಗೆಗಳು ಬಂದ್ ಆಗಿದ್ದವು. ಜನ ಸಂಚಾರ ಇರಲಿಲ್ಲ. ಆದರೆ, ಸಂಜೆ 3 ಗಂಟೆ ಸುಮಾರಿಗೆ ಸ್ಥಳೀಯರು ಎಟಿಎಂ ಬಳಿ ತೆರಳಿದಾಗ ಶವ ಬಿದ್ದಿರುವುದನ್ನು ಗಮನಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಎಟಿಎಂ ಕೇಂದ್ರದ ಒಳಗಿರುವ ಸಿಸಿ ಕ್ಯಾಮೆರಾದಲ್ಲಿ ಹಂತಕನ ಕೃತ್ಯ ಸೆರೆಯಾಗಿದೆ. ಸುಮಾರು 5 ನಿಮಿಷ ಎಟಿಎಂ ಹೊಡೆಯಲು ದುಷ್ಕರ್ಮಿ ಯತ್ನಿಸಿದ್ದಾನೆ. ಮೇಲ್ನೋಟಕ್ಕೆ ಹಣ ದೋಚಲು ಕೃತ್ಯ ನಡೆದಿರುವುದು ಕಂಡು ಬಂದಿದೆ. ಆದರೂ, ಬೇರೆ ಬೇರೆ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗ ಡಿಸಿಪಿ ಸತೀಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com