
ಬೆಂಗಳೂರು: ಬಿಬಿಎಂಪಿ ಹಾಗೂ ರೈಲ್ವೆ ಇಲಾಖೆ ಜಂಟಿಯeಗಿ ನಡೆಸುತ್ತಿರುವ ಅಳ್ಳಾಳಸಂದ್ರ ಹಾಗೂ ಓಕಳಿಪುರ ರೈಲ್ವೆ ಮೇಲ್ಸೇತುವೆ ಯೋಜನೆಗಳಿಗೆ ತಕ್ಷಣಕ್ಕೆ ರು.20 ಕೋಟಿ ಬಿಡುಗಡೆ ಮಾಡಲು ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ರೈಲ್ವೆ ಇಲಾಖೆ, ಬಿಎಂಆರ್‍ಸಿಎಲ್, ಬಿಡಿಎ, ಬೆಸ್ಕಾಂ, ಜಲಮಂಡಳಿ, ರಕ್ಷಣಾ ಇಲಾಖೆ, ಕೆಎಸ್‍ಆರ್ ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ, ಬಿಬಿಎಂಪಿ ಸಹಭಾಗಿತ್ವದಲ್ಲಿ ನಡೆಯುವ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು. ನಗರದಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆಗಳ ಕಾಮಗಾರಿ ನಡೆಯಬೇಕಿದ್ದು, ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನೂ ಬಳಸಿಕೊಳ್ಳಬೇಕಿದೆ. ಈ ಹಿಂದೆ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಪ್ರಸ್ತಾವನೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಮೇಲಧಿಕಾರಿಗಳಿಂದ ಉತ್ತರ ಬರುವುದು ತಡವಾದಷ್ಟೂ ಬಿಬಿಎಂಪಿ ಕಾಮಗಾರಿಗಳನ್ನು ಮುಂದೂಡಬೇಕಾಗುತ್ತದೆ.ಹೀಗಾಗಿ ಮತ್ತೊಮ್ಮೆ ಲೀಸ್ ಒಪ್ಪಂದ ಮಾಡಿಕೊಂಡು ಬಿಬಿಎಂಪಿ ಜಾಗಗಳನ್ನು ನೀಡಬೇಕು. ಜಾಗಕ್ಕೆ ಬದಲಾಗಿ ಅದೇ ಮೌಲ್ಯದ ಮತ್ತೊಂದು ಜಾಗ ನೀಡಬೇಕೇ ಅಥವಾ ಹಣ ನೀಡಬೇಕೇ ಎಂಬುದನ್ನು ಅಧಿಕಾರಿಗಳು ನಿರ್ಧರಿಸಬೇಕು ಎಂದರು. ಈ ಬಗ್ಗೆ ಶೀಘ್ರದಲ್ಲಿ ಚರ್ಚಿಸಿ ಪ್ರತಿಕ್ರಿಯೆ ನೀಡಲಾಗುವುದು ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದರು.
ಕಸಮುಕ್ತ ಮಾಡಿ
ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಜಾಗ, ಕಚೇರಿಗಳ ಆವರಣದಲ್ಲಿ ಬೀಳುವ ಕಸವನ್ನು ಸಂಸ್ಥೆಗಳೇ ನಿರ್ವಹಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿದೆ. ಸರ್ಕಾರಿ ಸಂಸ್ಥೆಗಳ ಕಚೇರಿಗಳು ದೊಡ್ಡದಾಗಿದ್ದರೆ ಕಸ ವಿಲೇವಾರಿ ಮಾಡುವುದು ಬಿಬಿಎಂಪಿಗೆ ಹೊರೆಯಾಗುತ್ತದೆ. ಹೀಗಾಗಿ ಸಂಸ್ಥೆಗಳೇ ಕಸವನ್ನು ಗೊಬ್ಬರ, ವಿದ್ಯುತ್ ತಯಾರಿಕೆಯಂಥ ಕಾರ್ಯಗಳಿಗೆ ಬಳಸಿ ಬಿಬಿಎಂಪಿ ಹೊರೆ ಕಡಿಮೆ ಮಾಡಬೇಕು. ಬೆಸ್ಕಾಂ ಸಿಬ್ಬಂದಿ ಮರದ ರೆಂಬೆಗಳನ್ನು ಕಡಿಯುವಾಗ ಪಾದಚಾರಿ ಮಾರ್ಗದ ಮೇಲೆಯೇ ರೆಂಬೆಗಳನ್ನು ಬೀಳಿಸಿ ಹೋಗುತ್ತಾರೆ. ಮರ ಕಡಿದಾಗ ರೆಂಬೆಗಳನ್ನೂ ಕೊಂಡೊಯ್ಯಬೇಕು ಎಂದು ಸೂಚಿಸಲಾಯಿತು.
ಬಿಬಿಎಂಪಿಯಿಂದ ಒಣತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸುತ್ತಿದ್ದು, ಬಿಡಿಎ ನಿರ್ಮಿಸುವ ಹೊಸ ಬಡಾವಣೆಗಳಲ್ಲೂ ಘಟಕ ನಿರ್ಮಿಸುವ ಪ್ರಸ್ತಾವನೆಯಿದೆ. ಇದಕ್ಕಾಗಿ ಬಿಡಿಎ 32 ಸಿಎ ನಿವೇಶನಗಳನ್ನು ನೀಡಲು ಒಪ್ಪಿದೆ. ಆದರಿನ್ನೂ ಹಸ್ತಾಂತರವಾಗಿಲ್ಲ. ಶೀಘ್ರವಾಗಿ ನಿವೇಶನಗಳನ್ನು ನೀಡಿ ಘಟಕ ನಿರ್ಮಾಣಕ್ಕೆ ಸಹಕರಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಬಿಡಿಎ ಆಯುಕ್ತ ಶ್ಯಾಮï ಭಟ್ ಅವರಿಗೆ ಸೂಚಿಸಲಾಯಿತು.
ಮೇ ತಿಂಗಳೊಳಗೆ ಸ್ವಚ್ಛ ಮಾಡಿ
ಬಿಎಂಆರ್‍ಸಿಎಲ್ ನಿರ್ಮಿಸುತ್ತಿರುವ ಮೆಟ್ರೋ ರೈಲ್ವೆ ಮಾರ್ಗಗಳ ಕೆಳಗೆ ಕಟ್ಟಡ ತ್ಯಾಜ್ಯ ಹಾಕಲಾಗುತ್ತಿದೆ. ಕಟ್ಟಡ ತ್ಯಾಜ್ಯ ಹಾಕಲು ನಗರದ ಹೊರವಲಯಗಳಲ್ಲಿ 6 ಕ್ವಾರಿಪಿಟ್ ಗಳನ್ನು ನಿಗದಿ ಮಾಡಲಾಗಿದೆ. ಮೆಟ್ರೋ ಮಾರ್ಗದ ಬದಿಯಲ್ಲೇ ಕಟ್ಟಡ ತ್ಯಾಜ್ಯ ರಾಶಿ ಹಾಕುವುದರಿಂದ ರಸ್ತೆಯಲ್ಲಿ ಬರುವ ವಾಹನಗಳ ಸಂಚಾರಕ್ಕೆ ಅಡ್ಡಿಯುಯಂಟಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತ್ಯಾಜ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮೇ ಅಂತ್ಯದೊಳಗೆ ತ್ಯಾಜ್ಯ ಸಾಗಿಸಿ, ಸ್ವಚ್ಛಗೊಳಿಸಬೇಕು. ಆಗಾಗ್ಗೆ ಲಾರಿಗಳನ್ನು ತಂದು ಕಟ್ಟಡ ತ್ಯಾಜ್ಯಸಾಗಿಸುವ ಬದಲು ಬೃಹತ್ ಲಾರಿಗಳಲ್ಲಿ ಒಂದೇ ಬಾರಿಗೆ ಕ್ವಾರಿಗಳಿಗೆ ಸಾಗಿಸಬೇಕು ಎಂದು ಆಯುಕ್ತ ಜಿ.ಕುಮಾರ್ ನಾಯಕ್ ಸೂಚಿಸಿದರು. ಕಟ್ಟಡ ತ್ಯಾಜ್ಯ ಸಾಗಿಸಲು ಟೆಂಡರ್ ಕರೆದಿದ್ದು, ಶೀಘ್ರದಲ್ಲಿಯೇ ಮೆಟ್ರೋ ಮಾರ್ಗಗಳಲ್ಲಿ ಸ್ವಚ್ಛಗೊಳಿಸಲಾಗುವುದು ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದರು.
Advertisement