
ಬೆಂಗಳೂರು: ಬಿಬಿಎಂಪಿಯ ಎಲ್ಲ ವಲಯಗಳಲ್ಲಿ `ತೀವ್ರ ಆಸ್ತಿ ತೆರಿಗೆ ವಸೂಲಾತಿ ಅಭಿಯಾನ' ಆರಂಭಿಸುವಂತೆ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಹಾಗೂ ಆಯುಕ್ತ ಜಿ.ಕುಮಾರ್ ನಾಯಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ವಲಯ ಮಟ್ಟದಲ್ಲಿ ರಚನೆಯಾಗಿರುವ ತಂಡಗಳು ಬುಧವಾರದಿಂದ ತೆರಿಗೆ ವಸೂಲಿ ಮಾಡಬೇಕು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡಗಳಿಗೆ ಭೇಟಿ ನೀಡುವಾಗ ಹಿರಿಯ ಅಧಿಕಾರಿಗಳು ಕಟ್ಟಡದ ನಕ್ಷೆ , ಮಂಜೂರು ಮಾಡಿದ ಎಫ್ ಎಆರ್, ಕಳೆದ ಸಾಲಿನಲ್ಲಿ ಪಾವತಿಸಿದ ಆಸ್ತಿ ತೆರಿಗೆ ವಿವರಗಳ ದಾಖಲು ಇಟ್ಟಕೊಂಡೇ ಹೋಗಬೇಕು. ಆಸ್ತಿ ಮಾಲೀಕರಿಗೆ ಮೊದಲು, ಮೇ ವರೆಗೆ ಶೇ.5 ರಿಯಾಯಿತಿ ನೀಡಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಆಯುಕ್ತ ಕುಮಾರ್ ನಾಯಕ್ ವಲಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ಕಟ್ಟಡದ ನಕ್ಷೆ ಹಾಗೂ ನೀಡಲಾದ ಎಫ್ಎಆರ್ ಸೇರಿದಂತೆ ವಿವಿಧ ವಿವರಗಳನ್ನು ಹೋಲಿಕೆ ಮಾಡಿ ನೋಡಿದರೆ ವ್ಯತ್ಯಾಸ ತಿಳಿಯುತ್ತದೆ. ಆಸ್ತಿ ತೆರಿಗೆ ಪಾವತಿಸುವಲ್ಲಿ ವ್ಯತ್ಯಾಸ ಕಂಡುಬಂದರೆ ಆಸ್ತಿ ಮಾಲೀಕರಿಗೆ ಮನದಟ್ಟು ಮಾಡಿಸಿ ತೆರಿಗೆ ವಸೂಲಿ ಮಾಡಬೇಕು. ತೆರಿಗೆ ಪಾವತಿಸದಿದ್ದರೆ ವಿವರಣೆಗೆ ಕೂಡಲೇ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ಬಾಡಿಗೆಗೆ ಕಟ್ಟಡ ನೀಡಿ ಸ್ವಂತಕ್ಕೆ ಬಳಸುವುದು, ವಾಣಿಜ್ಯ ಕಟ್ಟಡವಾಗಿದ್ದರೂ ವಾಸಕ್ಕೆ ಎಂದು ತೋರಿಸಿ ಆಸ್ತಿ ತೆರಿಗೆ ಪಾವತಿ ಮಾಡಿರುವ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಆಸ್ತಿ ತೆರಿಗೆ ವಸೂಲಿ ಮಾಡಬೇಕು. ಇಂತಹ ವಂಚನೆಯ ಪ್ರಕರಣಗಳನ್ನು ಪತ್ತೆಮಾಡಿ ತೆರಿಗೆ ವಸೂಲಿ ಮಾಡಿದರೆ ಬಿಬಿಎಂಪಿಗೆ ಅಧಿಕ ಆದಾಯ ಬರುತ್ತದೆ ಎಂದು ಸೂಚಿಸಿದ್ದಾರೆ.
ತಂಡಗಳ ರಚನೆ: ಎಲ್ಲ ವಾರ್ಡ್ ಗಳಲ್ಲಿ ಬೀದಿ ದೀಪಗಳ ಪರಿಸ್ಥಿತಿ ಬಗ್ಗೆ ಪರಿಶೀಲಿಸಲು ಹಾಗೂ ಏಕಕಾಲಕ್ಕೆ ತಪಾಸಣೆ ಮಾಡಲು ಪ್ರತಿ ವಾರ್ಡ್ ಗಳಿಗೆ ಒಂದು ತಂಡ ರಚಿಸಲಾಗಿದೆ.
ಹೊರವಲಯದಲ್ಲಿರುವ ವಾರ್ಡ್ ಗಳಿಗೆ ತಲಾ ಎರಡು ತಂಡ ರಚಿಸಲಾಗಿದೆ. `ತಂಡಗಳ ಮೇಲ್ವಿಚಾರಣೆಗೆ ಒಟ್ಟು 27 ಹಿರಿಯ ಅಧಿಕಾರಿಗಳನ್ನು ನೇಮಿಸಿದ್ದು, ವಾರ್ಡ್‍ಗಳಲ್ಲಿ ಸಂಚರಿಸಿ
ಬೀದಿದೀಪ ನಿರ್ವಹಣೆ ಬಗ್ಗೆ ತಪಾಸಣೆ ಮಾಡಲಿದ್ದಾರೆ. ಒಟ್ಟು ಬೀದಿ ದೀಪಗಳ ಪೈಕಿ ಉರಿಯುತ್ತಿರುವ ದೀಪಗಳು, ದುರಸ್ಥಿಗೊಳಪಟ್ಟ ದೀಪಗಳು, ಗುತ್ತಿಗೆದಾರರಿಗೆ ವಿಧಿಸಿರುವ
ದಂಡ, ಸೇರಿದಂತೆ ಎಲ್ಲ ವಿವರಗಳನ್ನು ಎಸ್‍ಎಂಎಸ್ ಮೂಲಕ ಅಧಿಕಾರಿಗಳು ಕಳುಹಿಸುತ್ತಾರೆ' ಎಂದು ಆಡಳಿತಾಧಿಕಾರಿ ವಿಜಯಭಾಸ್ಕರ್ ತಿಳಿಸಿದ್ದಾರೆ.
Advertisement