
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಸಾಮಾಜಿಕ ಭದ್ರತೆ ವಿಮಾ ಯೋಜನೆಗೆ ಸದಸ್ಯರಾದರೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಮಹಿಳೆಯನ್ನು ನಂಬಿಸಿದ ವಂಚಕನೊಬ್ಬ ಆಕೆಯ ಚಿನ್ನದ ಸರ ಪಡೆದು ಪರಾರಿಯಾಗಿದ್ದಾನೆ.
ಸಂಪಂಗಿರಾಮನಗರ ನಿವಾಸಿ ಪುಷ್ಪಾ(55) ವಂಚನೆಗೊಳಗಾಗಿ ಸರ ಕಳೆದುಕೊಂಡವರು. ಈ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸ್ತಮಾ ಕಾಯಿಲೆಯಿಂದ ಬಳಲು ತ್ತಿರುವ ಪತಿ ಮುನಿರಾಜುರನ್ನು ಪುಷ್ಪಾ ಅವರು ಮಂಗಳವಾರ ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ರಕ್ತಪರೀಕ್ಷೆ ಹಾಗೂ ಮೂತ್ರ ಪರೀಕ್ಷೆಗಾಗಿ ಕ್ಯಾಶ್ ಕೌಂಟರ್‍ನಲ್ಲಿ ಹಣ ಪಾವತಿಸುವಾಗ ಅಲ್ಲಿಗೆ ಬಂದ ಆರೋಪಿ, ದಂಪತಿ ಬಳಿ ಸಭ್ಯಸ್ಥನಂತೆ ಮಾತನಾಡಿದ್ದಾನೆ. ಚಿಕಿತ್ಸೆಗಾಗಿ ಹಣ ವ್ಯಯಿಸುವ ಬದಲು ಬಡವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಸದಸ್ಯರಾದರೆ ಉಚಿತ ಚಿಕಿತ್ಸೆ ಸಿಗಲಿದೆ.
ಆ ಕಾರ್ಡ್ ನ್ನು ತಾನೇ ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದ. ಇದನ್ನು ನಂಬಿದ ಪುಷ್ಪಾ, ಪತಿಗೆ ಆಸ್ಪತ್ರೆಯಲ್ಲೇ ಇರಲು ಹೇಳಿ ಆರೋಪಿಯೊಂದಿಗೆ ಶೇಷಾದ್ರಿಪುರಕ್ಕೆ ಹೋಗಿದ್ದರು. ಆಟೋದಲ್ಲಿ ಶೇಷಾದ್ರಿಪುರ ಪಾಲಿಕೆ ಕಚೇರಿ ಬಳಿ ಬಂದಾಗ, ಕಾರ್ಡ್ ಮಾಡಿಕೊಡುವ ಅಧಿಕಾರಿ ಮುಂದೆ ಬಡವರಂತೆ ಕಾಣಬೇಕು.
ಚಿನ್ನದ ಸರ ಬಿಚ್ಚಿ ಬ್ಯಾಗ್‍ನಲ್ಲಿಟ್ಟುಕೊಳ್ಳುವಂತೆ ಆರೋಪಿ ಪುಷ್ಪಾ ಅವರಿಗೆ ಹೇಳಿದ್ದಾನೆ. ಅದರಂತೆ ಚಿನ್ನದ ಸರ ತೆಗೆದು ಬ್ಯಾಗ್‍ಗೆ ಹಾಕಿಕೊಂಡಿದ್ದರು. ಆದರೆ, ಕಚೇರಿ ಸಮೀಪಕ್ಕೆ ಹೋಗುತ್ತಿದ್ದಂತೆ ಚಿನ್ನದ ಸರ ಕಿತ್ತುಕೊಂಡ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಪುಷ್ಪಾ ಅವರು ಶೇಷಾದ್ರಿಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
Advertisement