
ಬೆಂಗಳೂರು: ಮದ್ಯಪಾನ ಮಾಡಿ ನಿತ್ಯ ಕಿರುಕುಳ ನೀಡುತ್ತಿದ್ದ ಪತಿಯ ವರ್ತನೆಯಿಂದ ರೋಸಿಹೋದ ಮಹಿಳೆಯೊಬ್ಬರು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದು ಬಳಿಕ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾಳೆ.
ಆಂಧ್ರಪ್ರದೇಶ ಮೂಲದ ವಿಜಯ್ ಕುಮಾರ್ (38) ಕೊಲೆಯಾದವ. ರಾಜಗೋಪಾಲನಗರ ಸಮೀಪದ ಚೌಡೇಶ್ವರಿ ನಗರದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾರೆ ಕೆಲಸ ಮಾಡುತ್ತಿದ್ದ ವಿಜಯ್, ಪತ್ನಿ ಮಲ್ಲೇಶ್ವರಿ ಮತ್ತು ಮೂವರು ಮಕ್ಕಳ ಜತೆ ಚೌಡೇಶ್ವರಿ ನಗರ ನಾಲ್ಕನೇ ಅಡ್ಡರಸ್ತೆಯಲ್ಲಿ ವಾಸವಿದ್ದರು. ನಿತ್ಯ ಮದ್ಯಪಾನ ಮಾಡಿ ಬರುತ್ತಿದ್ದ ವಿಜಯ್, ಜಗಳ ಮಾಡುತ್ತಿದ್ದ. ಅಲ್ಲದೇ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ. ಅದೇ ರೀತಿ ಗುರುವಾರ ರಾತ್ರಿ ಕೂಡ ಮದ್ಯದ ನಶೆಯಲ್ಲಿ ಬಂದು ಜಗಳ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ಮಲ್ಲೇಶ್ವರಿ, ಪತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಬಳಿಕ ಶವಕ್ಕೆ ಬೆಂಕಿ ಹಚ್ಚಿ ಹೊರಗಿನಿಂದ ಮನೆಗೆ ಬೀಗ ಹಾಕಿಕೊಂಡು ಮಕ್ಕಳನ್ನು ಕರೆದುಕೊಂಡು ಪರಾರಿಯಾಗಿದ್ದಾಳೆ. ಮನೆ ಒಳಗಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಬಾಗಿಲು ಮುರಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಿಜಯ್ ಶವ ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ.
ಪರಾರಿಯಾಗಿರುವ ಮಲ್ಲೇಶ್ವರಿಗಾಗಿ ಶೋಧಕಾರ್ಯ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement