ದೇವನಹಳ್ಳಿ ಪ್ರತ್ಯೇಕ ನಗರವಾಗಿ ಅಭಿವೃದ್ಧಿ

ದೇವನಹಳ್ಳಿ ಕ್ಲಸ್ಟರ್ ಪ್ರದೇಶವನ್ನು ರು. 6 ಸಾವಿರ ಕೋಟಿ ವೆಚ್ಚದಲ್ಲಿ ಪ್ರತ್ಯೇಕ ನಗರವನ್ನಾಗಿ ರೂಪಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ರಾಜ್ಯ ನಗರ ಮೂಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ದೇವನಹಳ್ಳಿ ಕ್ಲಸ್ಟರ್ ಪ್ರದೇಶವನ್ನು ರು. 6 ಸಾವಿರ ಕೋಟಿ ವೆಚ್ಚದಲ್ಲಿ ಪ್ರತ್ಯೇಕ ನಗರವನ್ನಾಗಿ ರೂಪಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ರಾಜ್ಯ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆ.ಯು.ಐ.ಡಿ.ಎಫ್.ಸಿ) ವ್ಯವಸ್ಥಾಪಕ ನಿರ್ದೇಶಕ ದರ್ಪಣ್ ಜೈನ್ ತಿಳಿಸಿದ್ದಾರೆ.

ಸ್ಮಾರ್ಟ್ ಸಿಟೀಸ್ ಇಂಡಿಯಾ ಫೌಂಡೇಷನ್ ಬುಧವಾರ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ಏರ್ಪಡಿಸಿದ್ದ "ಸ್ಮಾರ್ಟ್ ಕ್ಯಾಪಿಟಲ್: ಕ್ರಿಯೇಟಿಂಗ್ ಸ್ಮಾರ್ಟ್ ಸೊಲ್ಯೂಷನ್ಸ್ ಫಾರ್ ಬೆಂಗಳೂರು' ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. "ಬೆಂಗಳೂರು ನಗರದಂತೆ ದೇವನಹಳ್ಳಿಯನ್ನೂ ಪ್ರತ್ಯೇಕ ನಗರವಾಗಿ ರೂಪಿಸಲು ಯೋಜನೆ ರೂಪಿಸಿದ್ದು, ಇದಕ್ಕೆ ಒಟ್ಟು ರೂ. 6 ಸಾವಿರ ಕೋಟಿವೆಚ್ಚವಾಗಲಿದೆ. ದೇವನಹಳ್ಳಿಯ 9,800 ಹೆಕ್ಟೇರ್ ಪ್ರದೇಶವನ್ನು ಬೃಹತ್ ನಗರವಾಗಿ ಬೆಳೆಸಲಾಗುವುದು. 32 ಲಕ್ಷ ಜನರು ವಾಸಿಸಲು ಅನುಕೂಲವಾಗುವಂತೆ ದೇವನಹಳ್ಳಿ  ಅಭಿವೃದ್ಧಿ ಪಡಿಸಲಾಗುವುದು. ನಗರಪ್ರದೇಶದಲ್ಲಿ ಜನಸಂಖ್ಯೆ 1 ಕೋಟಿ ಮೀರುತ್ತಿದ್ದು, ಒಂದು ದಶಕ ಕಳೆಯುವಷ್ಟರಲ್ಲಿ 30 ಲಕ್ಷ ಜನಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ದೇವನಹಳ್ಳಿ ಅಭಿವೃದ್ಧಿಯಿಂದ ನಗರದ ಹೊರೆ ಕಡಿಮೆಯಾಗಲಿದೆ. ಸಾರಿಗೆ ಹಾಗೂ ಸಂಪರ್ಕ ಕ್ಷೇತ್ರದ ಅಭಿವೃದ್ಧಿಗೆ ರೂ. 376 ಕೋಟಿ, ಕುಡಿಯುವ ನೀರು ಸೌಲಭ್ಯಕ್ಕೆ ರೂ.315 ಕೋಟಿ ಸೇರಿದಂತೆ ಈ ಪ್ರದೇಶದ ಒಟ್ಟು ಅಭಿವೃದ್ಧಿಗೆ ರೂ. 6 ಸಾವಿರ ಕೋಟಿ ವೆಚ್ಚವಾಗಲಿದೆ ಎಂದರು.

ಖಾಸಗಿ ಹೂಡಿಕೆಗೆ ಒತ್ತು
ಬೆಂಗಳೂರು ನಗರ ಸಾಕಷ್ಟು ಬೆಳೆದಿದ್ದು, 100 ಕಿಮೀ ವ್ಯಾಪ್ತಿಯಲ್ಲಿ 9 ನಗರ ಪ್ರದೇಶಗಳು ಹರಡಿಕೊಂಡಿವೆ. ನಗರ ಬೆಳವಣಿಗೆಯಾಗಿದ್ದರೂ, ಮೂಲಸೌಕರ್ಯ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿವೆ. ದೇವನಹಳ್ಳಿ ಪ್ರದೇಶ ವೇಗವಾಗಿ ಬೆಳೆಯುತ್ತಿರುವುದರಿಂದ ಪ್ರತ್ಯೇಕ ನಗರವಾಗಿ ಬೆಳೆಸಲು ತಿರ್ಮಾನಿಸಲಾಗಿದೆ. ಸರ್ಕಾರ ಮೂಲಸೌಕರ್ಯ ಮಾತ್ರ ಒದಗಿಸಿದರೆ ನಗರ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಖಾಸಗಿ ಹೂಡಿಕೆ ಹೆಚ್ಚಾದಷ್ಟೂ ನಗರ ವೇಗವಾಗಿ ಬೆಳೆಯುತ್ತದೆ. ದೇವನಹಳ್ಳಿಯಲ್ಲಿ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸಬೇಕಿದ್ದು, ಬಂಡವಾಳ ಹೂಡಿಕೆ ಹೆಚ್ಚಾಗುವಂತೆ ಮಾಡಬೇಕಿದೆ ಎಂದರು.

ರಾಮನಗರ, ದೊಡ್ಡಬಳ್ಳಾಪುರ, ಬೊಮ್ಮಸಂದ್ರ, ನೆಲಮಂಗಲ, ದಾಬಸ್ ಪೇಟೆ, ಹಾರೋಹಳ್ಳಿ, ವಿಜಯಪುರ, ಆನೇಕಲ್, ಬಿಡದಿ, ಮಾಗಡಿ, ಪ್ರದೇಶಗಳನ್ನು ಕ್ಲಸ್ಟರ್ ಗಳಾಗಿ ವಿಭಾಗಿಸಲಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ಮೂಲಸೌಕರ್ಯ ಕೊರತೆ ಕಂಡುಬರುತ್ತಿದೆ. ಬೇರೆ ಮೂಲಸೌಕರ್ಯಕ್ಕಿಂತ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಈ ಪ್ರದೇಶಗಳಲ್ಲಿ ಪರಿಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಫೌಂಡೇಶನ್ ಅಧ್ಯಕ್ಷ ಡಾ.ಎ.ರವೀಂದ್ರ ಮಾತನಾಡಿ, "ನಗರದಲ್ಲಿ ಹಲವು ಕ್ಲಸ್ಟರ್ ಗಳಿದ್ದು, ಪ್ರತಿ ಕ್ಲಸ್ಟರ್ ಗಳನ್ನೂ ಪ್ರತ್ಯೇಕ "ಸ್ಮಾರ್ಟ್ ಸಿಟಿ''ಗಳಾಗಿ ಅಭಿವೃದ್ಧಿ ಮಾಡಬಹುದು. ಶಿವಾಜಿನಗರ, ಚಿಕ್ಕಪೇಟೆ ಸೇರಿದಂತೆ ನಗರದ ಮುಖ್ಯ ಪ್ರದೇಶಗಳನ್ನು ಆರಿಸಿಕೊಂಡು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಗೊಳಿಸಬೇಕು. ದೇಶದಲ್ಲಿ ಪ್ರತಿ ತಿಂಗಳು 6 ದಶಲಕ್ಷ ಮೊಬೈಲ್ ಬಳಕೆದಾರರು ಸೇರ್ಪಡೆಯಾಗುತ್ತಿದ್ದು, 200 ಮಿಲಿಯನ್ ಸ್ಮಾರ್ಟ್ ಫೋನ್ ಬಳಕೆಯಲ್ಲಿವೆ. ತಂತ್ರಜ್ಞಾನ ಬೆಳೆಯುತ್ತಿರುವ ಯುಗದಲ್ಲಿ ಸ್ಮಾರ್ಟ್ ಸಿಟಿಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿರುವುದು ಮಹತ್ವದ ಯೋಜನೆ' ಎಂದು ಅಭಿಪ್ರಾಯಪಟ್ಟರು. ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ. ವಿಜಯ ಭಾಸ್ಕರ್ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com