ಮಂಗಮ್ಮನಪಾಳ್ಯದಲ್ಲಿ ತಾಯಿ-ಮಗನ ಕೊಲೆ ಪ್ರಕರಣ: 10 ಮಂದಿ ಬಂಧನ

ಮಂಗಮ್ಮನಪಾಳ್ಯದಲ್ಲಿ ಮನೆಗೆ ನುಗ್ಗಿ ತಾಯಿ-ಮಗನನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಗುರುವಾರ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಂಗಮ್ಮನಪಾಳ್ಯದಲ್ಲಿ ಮನೆಗೆ ನುಗ್ಗಿ ತಾಯಿ-ಮಗನನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಗುರುವಾರ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಮ್ಮನಪಾಳ್ಯದ ಮದೀನಾ ನಗರದ ಮೆಕ್ಕಾಂ ಮಸೀದಿ ಬಳಿ ವಾಸಿವಿದ್ದ ಅಸ್ಮಾತಾಜ್ ಅವರ ಪತಿ ಮಹಮ್ಮದ್ ಇರ್ಫಾನ್ ಎಂಬುವವರು ಜನವರಿ 15 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅಸ್ಮಾತಾಜ್ ಳಿಗೆ ಇಬ್ಬರು ಮಕ್ಕಳಿದ್ದು, ಗಂಡ ನಡೆಸುತ್ತಿದ್ದ ಗುಜರಿ ಅಂಗಡಿಯ ವ್ಯವಹಾರವನ್ನು ಅಸ್ಮಾತಾಜ್ ಮುಂದವರೆಸಿದ್ದರು. ಅಂಗಡಿಯ ಕೆಲಸಕ್ಕಾಗಿ ಅಸ್ಮಾತಾಜ್ ಅವರು 9 ಮಂದಿಯನ್ನು ಇಟ್ಟುಕೊಂಡಿದ್ದರು. ಆದರೆ 9 ಮಂದಿಯೂ ಸರಿಯಾಗಿ ಕೆಲಸ ಮಾಡದಿರುವ ಕಾರಣ ಕೆಲಸದಿಂದ ತೆಗೆದುಹಾಕಿದ್ದರು. ಹೀಗಾಗಿ ಅಸ್ಮಾತಾಜ್ ಅವರ ಮೇಲೆ ಈ 9 ಮಂದಿಯೂ ದ್ವೇಷ ಕಟ್ಟಿಕೊಂಡಿದ್ದರು. ನಂತರ ಹಲವು ಬಾರಿ ಅಸ್ಮಾತಾಜ್ ಳನ್ನು ಕೊಲೆ ಮಾಡಲು ಪ್ರಯತ್ನಿಸಿದರಾದರೂ ವಿಫಲರಾಗಿದ್ದರು ಎನ್ನಲಾಗಿದೆ.

ಆಸ್ತಿ ವಿಚಾರದಲ್ಲಿ ಅಸ್ಮಾತಾಜ್ ಳ ಜೊತೆ ಭಾವ ಮಹಮ್ಮದ್ ಇಷಾನುಲ್ಲಾ ಸಹ ದ್ವೇಷ ಇಟ್ಟುಕೊಂಡಿದ್ದನು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ 9 ಮಂದಿ ಆರೋಪಿಗಳು ಮಹಮ್ಮದ್ ಇಷಾನುಲ್ಲಾ ಸಹಾಯ ಪಡೆದು ಕೊಲೆ ಮಾಡಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.

ಇದರಂತೆ ಮೇ.25 ರಂದು ಅಸ್ಮಾತಾಜ್ ಳ ಮಗಳು ಕಾಲೇಜಿಗೆ ಹೋಗಿದ್ದಾಗ ಮನೆಯಲ್ಲಿ ಯಾರು ಇಲ್ಲ ಎಂದು ಭಾವಿಸಿದ ಆರೋಪಿಗಳು, ಅಸ್ಮಾತಾಜ್ ಹಾಗೂ ಆಕೆ ಮಗ ರುಮಾನುಲ್ಲಾರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಡಿವಾಳ ಪೊಲೀಸರು ತನಿಖೆಗೆ ತಂಡವೊಂದನ್ನು ರೂಪಿಸಿ ಕಾರ್ಯಾಚರಣೆಗಿಳಿದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ಅಸ್ಮಾತಾಜ್ ಮೇಲಿದ್ದ ದ್ವೇಷದಿಂದಾಗಿ ಹತ್ಯೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com