ಬೆಂವಿವಿ ಸುವರ್ಣ ಘಟಿಕೋತ್ಸವ, 47,202 ವಿದ್ಯಾರ್ಥಿಗಳಿಗೆ ಪದವಿ

ಬೆಂಗಳೂರು ವಿಶ್ವವಿದ್ಯಾಲಯದ ಸುವರ್ಣ ಘಟಿಕೋತ್ಸವದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು 47,202 ವಿದ್ಯಾರ್ಥಿಗಳಿಗೆ ಪದವಿ, 212 ವಿದ್ಯಾರ್ಥಿಗಳಿಗೆ ಪಿಎಚ್‍ಡಿ, 199 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ...
ಹಿರಿಯ ಎಂಜಿನಿಯರ್ ಎಸ್.ಚಿನ್ನಸ್ವಾಮಿ ಮಾಂಬಳ್ಳಿ, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಕರ್ನಾಟಕ ವಿವಿ ನಿವೃತ್ತ ಕುಲಪತಿ ಜಿ.ಕೆ.ನಾರಾಯಣ ರೆಡ್ಡಿ ಅವರಿಗೆ ಗೌರ ಡಾಕ್ಟರೇಟ್ ಪದ
ಹಿರಿಯ ಎಂಜಿನಿಯರ್ ಎಸ್.ಚಿನ್ನಸ್ವಾಮಿ ಮಾಂಬಳ್ಳಿ, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಕರ್ನಾಟಕ ವಿವಿ ನಿವೃತ್ತ ಕುಲಪತಿ ಜಿ.ಕೆ.ನಾರಾಯಣ ರೆಡ್ಡಿ ಅವರಿಗೆ ಗೌರ ಡಾಕ್ಟರೇಟ್ ಪದ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸುವರ್ಣ ಘಟಿಕೋತ್ಸವದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು 47,202 ವಿದ್ಯಾರ್ಥಿಗಳಿಗೆ ಪದವಿ, 212 ವಿದ್ಯಾರ್ಥಿಗಳಿಗೆ ಪಿಎಚ್‍ಡಿ, 199 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ಒಳಗೊಂಡಂತೆ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ಶನಿವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿವಿಯ ಸುವರ್ಣ ಘಟಿಕೋತ್ಸವದಲ್ಲಿ ಸ್ನಾತಕ ವಿಭಾಗ(ಬಿಎಸ್ಸಿ 8 ಸುವರ್ಣ ಪದಕ)ದಲ್ಲಿ ಮತ್ತು 6 ನಗದು ಬಹುಮಾನಗಳಿಸಿದ ಜಿ.ಎ. ಸಂಧ್ಯಾ, ಕನ್ನಡ ವಿಭಾಗ (ಸ್ನಾತಕೋತ್ತರ)ದಲ್ಲಿ 7 ಚಿನ್ನದ ಪದಕ ಗಳಿಸಿದ ಎಸ್.ಎನ್.ಅರುಣ್ ಒಳಗೊಂಡಂತೆ ಆಯಾ ವಿಭಾಗಗಳಲ್ಲಿ ಸುವರ್ಣ ಪದಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ಪ್ರದಾನ ಮಾಡಿದರು.

ಗೌರವ ಡಾಕ್ಟರೇಟ್ ಪುರಸ್ಕೃತರು:
ಕನ್ನಡ ಚಿತ್ರಮರಂಗದ ಪ್ರಥಮ ಮಹಿಳಾ ಸಿನಿಮಾ ನಿರ್ಮಾಪಕಿ, ವಿತರಣೆ ಹಾಗೂ ಪ್ರದರ್ಶನ ಕ್ಷೇತ್ರಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಪಾರ್ವತಮ್ಮ ರಾಜ್‍ಕುಮಾರ್ ಸಲ್ಲಿಸಿರುವ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಹಿರಿಯ ಎಂಜಿನಿಯರ್ ಚಿನ್ನಸ್ವಾಮಿ ಮಾಂಬಳ್ಳಿ ಲೋಕೋಪಯೋಗಿ ಇಲಾಖೆಯಲ್ಲಿ ಸಲ್ಲಿಸಿರುವ ಸೇವೆ ಹಾಗೂ ಕರ್ನಾಟಕ ವಿವಿ ನಿವೃತ್ತ ಕುಲಪತಿ ಜಿ.ಕೆ.ನಾರಾಯಣ ರೆಡ್ಡಿ ಸಂಶೋಧನಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಗೌರವ ಡಾಕ್ಟರೇಟ್‍ಗೆ ಭಾಜನರಾದರು.

ಜಾಗತಿಕ ಸ್ಪರ್ಧೆಗೆ ಅಣಿಗೊಳಿಸಿ: ವೇದಪ್ರಕಾಶ್: ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದ ಅಧ್ಯಕ್ಷ ಪ್ರೊ. ವೇದಪ್ರಕಾಶ್ ಮಾತಾಡಿ, `ಉನ್ನತ ಶಿಕ್ಷಣದಲ್ಲಿ ಕೌಶಲ್ಯಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗೆ ಅಣಿಗೊಳಿಸಬೇಕು. ಆ ನಿಟ್ಟಿನಲ್ಲಿ ವಿವಿಗಳು ಇಂದಿನ ಅಗತ್ಯಕ್ಕೆ ತಕ್ಕಂತೆ ಪಠ್ಯಗಳನ್ನು ರೂಪಿಸಬೇಕಿದೆ. ಕಾಲೇಜು ಹಾಗೂ ವಿವಿಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಸಮಾಜ ನಿರೀಕ್ಷಿಸುತ್ತಿರುವ ಮೌಲ್ಯಯುತ ಶಿಕ್ಷಣ ನೀಡುವಲ್ಲಿ ವಿವಿಗಳು ಯಶಸ್ವಿಯಾಗಿಲ್ಲ, ಆ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು' ಎಂದು ಕಿವಿಮಾತು ಹೇಳಿದರು.

ನಿರಂತರ ಅಧ್ಯಯನವೇ ಯಶಸ್ಸಿನ ಸೂತ್ರ. ಯಾವುದಾದರೂ ಒಂದು ಕ್ಷೇತ್ರ ಆಯ್ದು ಕೊಂಡು ಕಾರ್ಯ ಪ್ರವೃತ್ತರಾಗಬೇಕು. ಅದರಲ್ಲಿ ಶೇ. 99ರಷ್ಟು ಸೋಲಿದ್ದರೂ ಎದೆಗುಂದದೆ ಮುಂದುವರಿಯಬೇಕು. ಶಿಸ್ತು ಜೀವನ, ಸಮಯ ನಿರ್ವಹಣೆ ಹಾಗೂ ಶ್ರಮವಹಿಸಿ ಕಾರ್ಯ ನಿರ್ವಹಿಸುವುದರಿಂದ ಯಶಸ್ಸು ಲಭ್ಯವಾಗುತ್ತದೆ ಎಂದು ಪದವೀಧರರಿಗೆ ತಿಳಿ ಹೇಳಿದರು.

ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಕುಲಪತಿ ಪ್ರೊ. ಬಿ. ತಿಮ್ಮೇಗೌಡ, ಕುಲಸಚಿವೆ ಕೆ.ಕೆ.ಸೀತಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ. ಕೆ.ಎನ್.ನಿಂಗೇಗೌಡ ಉಪಸ್ಥಿತರಿದ್ದರು.

ಮಹಿಳೆಯೂ ಚಿತ್ರ ನಿರ್ಮಾಪಕಿಯಾಗಿ ಗೆಲ್ಲಬಹುದು. ನಿರ್ಮಾಪಕಿಯಾಗಿದ್ದಾಗ ಸಣ್ಣ ಪುಟ್ಟ ಸವಾಲುಗಳಿದ್ದರೂ ವಾತಾವರಣ ಪೂರಕವಾಗಿತ್ತು. ನನ್ನ ಸಾಧನೆಗೆ ಡಾ.ರಾಜ್‍ಕುಮಾರ್ ಅವರ ಮಾರ್ಗದರ್ಶನ, ಕುಟುಂಬದ ಪ್ರೋತ್ಸಾಹವೇ ಕಾರಣ.
-ಪಾರ್ವತಮ್ಮ ರಾಜ್‍ಕುಮಾರ್,
ಗೌರವ ಡಾಕ್ಟರೇಟ್ ಪುರಸ್ಕೃತರು


ಬಿಎಸ್ಸಿಯಲ್ಲಿ 8 ಚಿನ್ನದ ಪದಕ ಹಾಗೂ 6 ನಗದು ಬಹುಮಾನ ನಿರೀಕ್ಷಿಸಿರಲಿಲ್ಲ. ಸಂಶೋಧನೆಯಲ್ಲಿ ಮುಂದುವರಿಯುವ ಆಸಕ್ತಿಯಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ನನ್ನ ಊರು. ತಂದೆ ಸೈಕಲ್ ಶಾಪ್ ನಡೆಸುತ್ತಿದ್ದು, ಕುಟುಂಬದವರು ಕಲಿಕೆಗೆ ಪ್ರೋತ್ಸಾಹಿಸುತ್ತಾರೆ. ಗೌರಿಬಿದನೂರಿನ ಎಇಎಸ್ ಕಾಲೇಜಿನಲ್ಲಿ ಕಲಿಯುತ್ತಿದ್ದ ನನಗೆ ಎಂದೂ ನಗರ ಪ್ರದೇಶದ ವಿದ್ಯಾರ್ಥಿಗಳೊಡನೆ ಸ್ಪರ್ಧಿಸುವ ಆತಂಕ ಕಾಡಲಿಲ್ಲ.

- ಜಿ.ಎ. ಸಂಧ್ಯಾ, ಬಿಎಸ್ಸಿ ಪ್ರಥಮ ರ್ಯಾಂಕ್


ಸಾಹಿತ್ಯ ಕ್ಷೇತ್ರದ ಮೇಲಿನ ಪ್ರೀತಿಯೇ ವಿವಿಯ ಕನ್ನಡ ವಿಭಾಗದಲ್ಲಿ ಕಲಿತ ನನಗೆ ಪ್ರಥಮ ರ್ಯಾಂಕ್ ಗಳಿಸಲು ಸಾಧ್ಯವಾಯಿತು. ಉತ್ತಮ ಬರಹಗಾರನಾಗಿ, ಸಂಶೋಧಕನಾಗಿ ಗುರುತಿಸಿಕೊಳ್ಳುವ ಇಚ್ಛೆ ಇದೆ.

- ಎಸ್.ಎನ್.ಅರುಣ್,
ಕನ್ನಡ ವಿಭಾಗದಲ್ಲಿ ಪ್ರಥಮ ರ್ಯಾಂಕ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com