
ಬೆಂಗಳೂರು: ಆಟವಾಡುವಾಗ ಆಕಸ್ಮಿಕವಾಗಿ ರಾಜ ಕಾಲುವೆಗೆ ಬಿದ್ದು ಜುನೈದ್ ಎಂಬ ಬಾಲಕ ಮೃತಪಟ್ಟಿರುವ ಘಟನೆ ಬೆಳ್ಳಂದೂರು ಕೆರೆ ಸಮೀಪ ಸಂಭವಿಸಿದೆ. ಉತ್ತರಪ್ರದೇಶ ಮೂಲದ ಕೂಲಿ ಕಾರ್ಮಿಕ ಮುನಾವರ ಎಂಬುವರ ಪುತ್ರ ಜುನೈದ್(10) ಮೃತ ಬಾಲಕ.
ಇಲ್ಲಿನ ಕರಿಯಮ್ಮನ ಅಗ್ರಹಾರದಲ್ಲಿ ಹಲವು ಕೂಲಿ ಕಾರ್ಮಿಕರು ತಾತ್ಕಾಲಿಕ ಶೆಡ್‍ಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ. ಮೃತ ಬಾಲಕ ತನ್ನ ಪಾಲಕರೊಂದಿಗೆ ಅಲ್ಲಿರುವ ಶೆಡ್‍ವೊಂದರಲ್ಲಿ ವಾಸವಿದ್ದ. ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಜುನೈದ್ ಆಟವಾಡಲು ಹೋಗಿದ್ದ. ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಹಿಡಿಯಲು ಹೋಗಿ ಆಕಸ್ಮಿಕವಾಗಿ ರಾಜ ಕಾಲುವೆಗೆ ಬಿದ್ದಿದ್ದ ಎನ್ನಲಾಗಿದೆ. ಆದರೆ, ಆಟವಾಡಲು ಹೋಗಿದ್ದ ಮಗ ಮನೆಗೆ ವಾಪಸ್ ಬಾರದ ಕಾರಣ ಪಾಲಕರು ಹುಡುಕಾಟ ನಡೆಸಿದರು. ಎಲ್ಲಿಯೂ ಕಾಣಿಸದ ಕಾರಣ ಅಂತಿಮವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುತ್ತ ಮುತ್ತ ಹುಡುಕಾಟ ನಡೆಸಿ ಬಳಿಕ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ರಾತ್ರಿ 8.30ರ ಸುಮಾರಿಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾ ವಾಹನ ಹಾಗೂ 20 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಾತ್ರಿ 11 ಗಂಟೆವರೆಗೂ ರಾಜಕಾಲುವೆಯಲ್ಲಿ ಹುಡುಕಾಟ ನಡೆಸಲಾಯಿತು. ಆದರೆ, ಶವ ಪತ್ತೆಯಾಗಲಿಲ್ಲ. ಹೀಗಾಗಿ, ರಾತ್ರಿ ಕಾರ್ಯಾಚರಣೆ ನಿಲ್ಲಿಸಿಲಾಯಿತು. ಭಾನುವಾರ ಬೆಳಗ್ಗೆ 6 ಗಂಟೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿ ಬಾಲಕ ನಾಪತ್ತೆಯಾಗಿದ್ದ ಜಾಗದಿಂದ ಹುಡುಕಾಟ ಆರಂಭಿಸಲಾಯಿತು.
ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಕಾರಣ, ಮರುಳು ತುಂಬಿದ ಸಿಮೆಂಟ್ ಮೂಟೆಗಳನ್ನು ಹಾಕಿ ನೀರಿನ ಹರಿವು ತಗ್ಗಿಸಲಾಯಿತು ಎಂದು ರಕ್ಷಣಾ ಕಾರ್ಯಾಚರಣೆ ಉಸ್ತುವರಿ ವಹಿಸಿದ್ದ ಮುಖ್ಯ ಅಗ್ನಿಶಾಮಕ ಅಧಿಕಾರಿ ಸಿ.ಬಸವಣ್ಣ ತಿಳಿಸಿದರು. ಸುಮಾರು 4 ತಾಸುಗಳ ಕಾರ್ಯಾಚರಣೆ ಬಳಿಕ ಅರ್ಧ ಕಿ.ಮೀ. ದೂರದಲ್ಲಿ ಬೆಳ್ಳಂದೂರು ಕೆರೆ ಸಮೀಪ ಜುನೈದ್ ಶವ ಪತ್ತೆಯಾಗಿದೆ. ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳು ಕಾಲುವೆಯಲ್ಲಿ ತುಂಬಿದ್ದವು. ಹೀಗಾಗಿ, ಶವ ಹುಡುಕುವುದು ಕಷ್ಟವಾಯಿತು. ನಾಲ್ವರು ಅಧಿಕಾರಿಗಳು ಹಾಗೂ 15 ಸಿಬ್ಬಂದಿ ಸೇರಿ ರಕ್ಷಣಾ ಸಾಮಗ್ರಿಗಳನ್ನು ಬಳಸಿ ಶವ ಮೆಲೆತ್ತಲಾಯಿತು ಎಂದು ಸಿಎಫ್ಓ ಬಸವಣ್ಣ ತಿಳಿಸಿದರು. ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement