ಇಂಗ್ಲಿಷ್ ಎಂಬುದು ಮಾಯಾಲೋಕವಿದ್ದಂತೆ: ಡಾ.ಜಿ.ಎಸ್.ಆಮೂರ

40 ವರ್ಷಗಳ ಕಾಲ ಪ್ರಾಧ್ಯಾಪಕನಾಗಿ ಇಂಗ್ಲಿಷ್ ವಲಯದಲ್ಲಿದ್ದ ನನಗೆ, ಇಂಗ್ಲಿಷ್ ಮಾಯಾಲೋಕವೆಂದು ಗೊತ್ತಾಗಿದ್ದು ಕನ್ನಡದ ವಲಯಕ್ಕೆ ಬಂದಾಗ!...
ಡಾ.ಜಿ.ಎಸ್.ಆಮೂರರು ತಮ್ಮ ಆತ್ಮಕಥೆ ನೀರ ಮೇಲಣ ಗುಳ್ಳೆ ಕುರಿತು ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭ.
ಡಾ.ಜಿ.ಎಸ್.ಆಮೂರರು ತಮ್ಮ ಆತ್ಮಕಥೆ ನೀರ ಮೇಲಣ ಗುಳ್ಳೆ ಕುರಿತು ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭ.

ಧಾರವಾಡ: 40 ವರ್ಷಗಳ ಕಾಲ ಪ್ರಾಧ್ಯಾಪಕನಾಗಿ ಇಂಗ್ಲಿಷ್ ವಲಯದಲ್ಲಿದ್ದ ನನಗೆ, ಇಂಗ್ಲಿಷ್ ಮಾಯಾಲೋಕವೆಂದು ಗೊತ್ತಾಗಿದ್ದು ಕನ್ನಡದ  ವಲಯಕ್ಕೆ ಬಂದಾಗ!

ಹೀಗೆಂದು ಹೇಳಿದವರು ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರ. ಡಾ.ಅಣ್ಣಾಜಿರಾವ್ ಶಿರೂರ ರಂಗಮಂದಿರ ಪ್ರತಿಷ್ಠಾನ ಹಾಗೂ ಡಾ.ಜಿ.ಎಸ್.  ಆಮೂರ ಅಭಿನಂದನಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿವಂದನೆ ಸ್ವೀಕರಿಸಿ ಮಾತನಾಡಿದ ಅವರು, ಇಂಗ್ಲಿಷ್  ಮಾಯಾಲೋಕ ಬಿಟ್ಟು ಕನ್ನಡದಲ್ಲಿ ಗಂಭೀರವಾಗಿ ಬರೆದಾಗ ಇದು ನಿಜವಾದ ಲೋಕ ಎನ್ನಿಸಿತು. ಬೇರೆ ಭಾಷೆ ಜನರನ್ನು ಗಮನಿಸಿದಾಗ ಕನ್ನಡದ  ಮನಸ್ಸುಗಳಲ್ಲಿ ಉದಾರತೆ ಇದೆ. ನಮ್ಮಲ್ಲಿ ಅಧಿಕಾರ ಶಾಹಿ ಇಲ್ಲ. ಹೊಸದನ್ನು ಬೇಗ ಸ್ವೀಕರಿಸುವ ಮನೋಭಾವ ಇದೆ. ಕನ್ನಡದ ಜನ ದೊಡ್ಡವರು. ಕನ್ನಡಿಗರಿಗೆ ಬೇರೆ ಭಾಷೆಯವರಿಗಿಂತ ಉತ್ತಮ ಭವಿಷ್ಯವಿದೆ.

ಯಾವುದೋ ಶಕ್ತಿ ನನ್ನಲ್ಲಿ ಆಹ್ವಾನಗೊಂಡು ಇಷ್ಟೊಂದು ಕೃತಿಗಳ ರಚನೆಗೆ ಕಾರಣನಾದೆ. ನನ್ನ ಬಗ್ಗೆ ನಾನೇ ಮಾತನಾಡುವುದು, ಬರೆಯುವುದು  ಅಸಹ್ಯ ಎಂದುಕೊಂಡವ ನಾನು. ಆತ್ಮಚರಿತ್ರೆಯಲ್ಲಿ ನನ್ನನ್ನು ಬೆಳೆಸಿದ ತಂದೆ-ತಾಯಿ, ಜತೆಗಿದ್ದ ಪತ್ನಿ ಹಾಗೂ ಸಾಹಿತ್ಯ ವಲಯದ ನಂಟಿನ ಬಗ್ಗೆ ಜಾಸ್ತಿ ಬರೆದುಕೊಂಡಿದ್ದೇನೆ ಎಂದರು.

ಅಭಿನಂದಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಎಚ್.ಎಸ್. ರಾಘವೇಂದ್ರರಾವ್, 90ರ ಇಳಿವಯಸ್ಸಿನಲ್ಲೂ ಪ್ರತಿಭೆಗೆ ಶ್ರಮ ಹಾಗೂ ಪರಿಶ್ರಮ  ತುಂಬಿದವರು ಆಮೂರರು. ಅವರ ಒಟ್ಟು 47 ಪುಸ್ತಕಗಳ ಪೈಕಿ ನಾಲ್ಕು ಪುಸ್ತಕಗಳನ್ನು ಹೊರತುಪಡಿಸಿ ಉಳಿದವೆಲ್ಲವೂ 60ರ ಗಡಿದಾಟಿದಾಗಲೇ  ಬರೆದಿದ್ದಾರೆ. ಇತ್ತೀಚೆಗೆ ವಿಮರ್ಶೆಗಳು ಒಂದು ನಿಲುವನ್ನು ಅಧ್ಯಾಪಕ ಹೇಳಿದ ರೀತಿಯಲ್ಲಿ ಹೇಳುವ ಬದಲು ವಕೀಲನ ರೀತಿಯಲ್ಲಿ ಬಿಂಬಿಸುತ್ತಿವೆ. ಇದರಿಂದ ಸಾಹಿತ್ಯತ್ವ ಕಳೆದು ಹೋಗುತ್ತದೆ. ಆದರೆ, ಆಮೂರರ ಬರವಣಿಗೆಯಲ್ಲಿ ಮೆಚ್ಚುಗೆಯ  ಜೊತೆಗೆ ಟೀಕೆಗಳೂ ಇವೆ. ಹೇಳುವ ರೀತಿ ಅಧ್ಯಾಪಕನಂತಿದೆ. ಓದುಗ ಆಮೂರರ ಟೀಕೆ, ಭಿನ್ನಾಭಿಪ್ರಾಯಗಳನ್ನು ತಿಳಿದುಕೊಳ್ಳಬೇಕಷ್ಟೇ ಎಂದರು.

ಇದೇ ಸಂದರ್ಭದಲ್ಲಿ ಡಾ.ಜಿ.ಎಸ್. ಆಮೂರರಿಗೆ ಆತ್ಮೀಯ ಅಬಿsನಂದನೆ ನಡೆಯಿತು. ಇದಕ್ಕೂ ಮುಂಚೆ ಆಮೂರರ ಸ್ವೀಕೃತಿ, ಕುವೆಂಪು-ಯುಗದ  ಕವಿ ಹಾಗೂ ನೀರ ಮೇಲಣ ಗುಳ್ಳೆ ಕೃತಿಗಳನ್ನು ಡಾ.ಎಂ.ಎಸ್. ಆಶಾದೇವಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗೂ ಡಾ.ಎಚ್.ಎಚ್.  ವೆಂಕಟೇಶಮೂರ್ತಿ ಬಿಡುಗಡೆಗೊಳಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಚೆನ್ನವೀರ ಕಣವಿ ಆಮೂರರೊಂದಿಗಿನ ಕ್ಷಣಗಳನ್ನು  ಹಂಚಿಕೊಂಡರು. ಡಾ.ಎಂ.ಎಂ. ಕಲಬುರ್ಗಿ, ಡಾ. ಗಿರಡ್ಡಿ ಗೋವಿಂದರಾಜ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಶ್ಯಾಮಸುಂದರ ಬಿದರಕುಂದಿ, ಆರ್ಯ ಆಚಾರ್ಯ, ಚಂದ್ರಕಾಂತ ಬೆಲ್ಲದ, ಡಾ.ವೀಣಾ ಶಾಂತೇಶ್ವರ, ಡಾ.ಜಿ.ಎಂ. ಹೆಗಡೆ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ರಮಾಕಾಂತ  ಜೋಶಿ, ಸಮೀರ ಜೋಶಿ ಇದ್ದರು.

ಪ್ರಸ್ತುತ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಹಿರಿಯ ಲೇಖಕರನ್ನು ವಿಸ್ಮೃತಿಗೆ ತಳ್ಳುತ್ತಿದ್ದೇವೆ ಎನಿಸುತ್ತಿದೆ. ಒಂದು ಸಾಹಿತ್ಯ ಪರಂಪರೆ ಹಾಗೂ ಭಾಷೆ  ಜೀವಂತವಾಗಿರಬೇಕಾದರೆ ಅದನ್ನು ಪುನರ್ ವಿಮರ್ಶೆಗೆ ಒಳಪಡಿಸಬೇಕು. ಇದು ಸಾಹಿತ್ಯ ಚಿಂತಕರ ಜವಾಬ್ದಾರಿಯೂ ಹೌದು. ಈ ಸಂದರ್ಭದಲ್ಲಿ  ಡಾ. ಜಿ.ಎಸ್. ಆಮೂರರು ಕುವೆಂಪು ಅವರ ಸಮಗ್ರ ಸಾಹಿತ್ಯ ಅಧ್ಯಯನ ಮಾಡಿ ಬರೆದಿರುವ ವಿಮರ್ಶಾ ಗ್ರಂಥ ವಿಮರ್ಶೆಯ ಘನತೆಯನ್ನು  ಹೆಚ್ಚಿಸಿದೆ.

- ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ,
ಹಿರಿಯ ವಿಮರ್ಶಕ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com