ಶಿಕ್ಷಣ, ಆರೋಗ್ಯಕ್ಕೆ ಕೊಡುಗೆ ನೀಡಿ: ವಾಲಾ

ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಾರ್ವಜನಿಕರು ಸಾಧ್ಯವಾದಷ್ಟು ಕೊಡುಗೆ ನೀಡಬೇಕು ಎಂದು ರಾಜ್ಯಪಾಲ ವಿ.ಆರ್.ವಾಲಾ ಕಿವಿಮಾತು ಹೇಳಿದರು...
ರಾಜ್ಯಪಾಲ ವಿ.ಆರ್.ವಾಲಾ
ರಾಜ್ಯಪಾಲ ವಿ.ಆರ್.ವಾಲಾ

ಬೆಂಗಳೂರು: ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಾರ್ವಜನಿಕರು ಸಾಧ್ಯವಾದಷ್ಟು ಕೊಡುಗೆ ನೀಡಬೇಕು ಎಂದು ರಾಜ್ಯಪಾಲ ವಿ.ಆರ್.ವಾಲಾ ಕಿವಿಮಾತು ಹೇಳಿದರು.

ಯಶವಂತಪುರದ ತುಮಕೂರು ರಸ್ತೆ ಬಳಿ ನೂತನವಾಗಿ ಆರಂಭವಾದ `ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ' ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಹಾಗೂ ಶಿಕ್ಷಣ ಸಂವಿಧಾನದ ಮೂಲಕ ವ್ಯಕ್ತಿಯೊಬ್ಬ ಪಡೆಯುವ ಪ್ರಾಥಮಿಕ ಹಕ್ಕು. ಸಾರ್ವಜನಿಕರು ಈ ಎರಡು ಕ್ಷೇತ್ರಗಳಿಗೆ ಹೆಚ್ಚಿನ ಹಣ ಹಾಗೂ ಸೇವೆ ನೀಡಬೇಕು.

ದೇಶದಲ್ಲಿ ಬಡವರಂತೆ ಶ್ರೀಮಂತರ ಸಂಖ್ಯೆಯೂ ಹೆಚ್ಚಿದೆ. ಶ್ರೀಮಂತರು ಶಿಕ್ಷಣ, ಆರೋಗ್ಯಕ್ಕೆ ಹಣ ನೀಡಿ ಸೇವೆ ಸಲ್ಲಿಸಿದರೆ ಬಡಜನರಿಗೆ ಅನುಕೂಲ ವಾಗುತ್ತದೆ. ಸಮಾಜ ಅಥವಾ ದೇಶದಿಂದಲೇ ಜನರು ಹಣ, ಅನುಭವ, ಉದ್ಯೋಗ ಪಡೆಯುವುದರಿಂದ ಅದರಲ್ಲಿ ಒಂದು ಪಾಲನ್ನು ಮತ್ತೆ ಸಮಾಜಕ್ಕೆ ಸಲ್ಲಿಸಬೇಕು. ಕೊಡುಗೆ ನೀಡುವುದು ಹಾಗೂ ತ್ಯಾಗ ಮಾಡುವುದು ದೇಶದ ಪರಂಪರೆಯಾಗಿದ್ದು, ಸಾಧ್ಯವಾದಷ್ಟು ಬಡವರ ಸೇವೆ ಮಾಡಬೇಕು ಎಂದರು.

ವ್ಯಕ್ತಿ ಎಷ್ಟೇ ಬುದ್ಧಿವಂತನಾಗಿದ್ದರೂ ಆರೋಗ್ಯವಿಲ್ಲದಿದ್ದರೆ ಎಲ್ಲವೂ ವ್ಯರ್ಥವಾ ಗುತ್ತದೆ. ಹಣ ಹಾಗೂ ಶಿಕ್ಷಣದಿಂದ ಪಡೆದ ಜ್ಞಾನದ ಬಲದಿಂದ ಯುವಜನರು ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಯತ್ನಿಸ ಬೇಕು. ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಮೂಲಕ ಸಾಕಷ್ಟು ಬದಲಾವಣೆಯಾಗಿದೆ. ಶರೀರದ ಅಂಗಗಳನ್ನು ಕಸಿ ಮಾಡುವ ತಂತ್ರಜ್ಞಾನ ಈ ಹಿಂದೆ ಲಿವರ್ ಹಾಗೂ ಮೂತ್ರಪಿಂಡಕ್ಕೆ ಮಾತ್ರ ಸೀಮಿತವಾಗಿತ್ತು.

ಈಗ ಕಸಿ ತಂತ್ರಜ್ಞಾನದಿಂದ ಹೃದಯವನ್ನೂ ಬದಲಿಸಬಹುದು. ಸರ್ಕಾರವೂ ಇಂಥ ನೂತನ ತಂತ್ರಜ್ಞಾನ ಬಳಸಿಕೊಂಡು ಸೇವೆ ನೀಡುತ್ತಿದೆ. ಆದರೆ, ಸಾರ್ವಜನಿಕರು ಬೆಂಬಲ ನೀಡಿದರೆ ಮಾತ್ರ ಆರೋಗ್ಯ ಕ್ಷೇತ್ರದ ಮೂಲಕ ಬಡವರಿಗೆ ನೆರವು ನೀಡಬಹುದು. ಸರ್ಕಾರಿ ಆಸ್ಪತ್ರೆಗಳ ಜೊತೆ ಖಾಸಗಿ ಸಂಸ್ಥೆಗಳು ಆರಂಬಿsಸುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಂಖ್ಯೆಯೂ ಹೆಚ್ಚಾದರೆ ಆರೋಗ್ಯ ಕ್ಷೇತ್ರದಲ್ಲಿ ಹೊರೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, `ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂದಾಕ್ಷಣ ಹೆಚ್ಚು ದರದ ಭಯದಿಂದ ಬಡಜನರು ದೂರ ಸರಿಯುತ್ತಾರೆ  ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ, ಬಡಜನರನ್ನು ಆರಿಸಿ ಉಚಿತ ಚಿಕಿತ್ಸೆ ನೀಡಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮುಂದಾಗಬೇಕು. ಸ್ಪರ್ಶ್ ಸಮೂಹದ ಆಸ್ಪತ್ರೆಗಳು ರಾಜ್ಯದ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿವೆ. ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ರಾಯಚೂರು, ಬೆಳಗಾವಿ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಸಮೂಹದಿಂದ ಆಸ್ಪತ್ರೆ ಆರಂಭಿಸಬೇಕು' ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, `ಆಸ್ಪತ್ರೆಗಳ ಸಮೂಹ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸುಲಭವಾಗಿ ಆರೋಗ್ಯ ಸೇವೆ ದೊರೆಯು ವಂತಾಗಬೇಕು' ಎಂದರು. ನ್ಯಾ.ಶಿವರಾಜ್ ಪಾಟೀಲ್ ಮಾತನಾಡಿ, `ದೇಶದಲ್ಲಿ ಶೇ.65 ಮಂದಿ ಪ್ರಾಥಮಿಕ ಆರೋಗ್ಯ ಸವಲತ್ತುಗಳಿಂದ ವಂಚಿತರಾಗಿದ್ದಾರೆ.

ಬೆಂಗಳೂರಿನಿಂದ ಆರಂಭವಾಗಿರುವ ಸಂಸ್ಥೆಯ ಸೇವೆ ಇನ್ನು ಉತ್ತರ ಕರ್ನಾಟಕಕ್ಕೂ ವಿಸ್ತರಣೆಯಾಗಲಿದೆ. 200 ವಿಕಲಚೇತನರಿಗೆ ಪ್ರತಿವರ್ಷ ಉಚಿತ ಚಿಕಿತ್ಸೆ, 100 ನಿವೃತ್ತ ಶಿಕ್ಷಕರಿಗೆ ಉಚಿತ ಚಿಕಿತ್ಸೆ ಸೇರಿದಂತೆ ಹಲವು ಯೋಜನೆಗಳನ್ನು ಸಂಸ್ಥೆ ಹೊಂದಿದೆ' ಎಂದರು. ಸಚಿವ ಶಾಮನೂರು ಶಿವಶಂಕರಪ್ಪ, ನಟ ಪುನೀತ್ ರಾಜ್ ಕುಮಾರ್, ಸ್ಪರ್ಶ್ ಸಮೂಹದ ಮುಖ್ಯಸ್ಥ ಡಾ.ಶರಣ್ ಪಾಟೀಲ್ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com