ಮಾತೃಭಾಷೆಯೇ ಕಲಿಕಾ ಮಾಧ್ಯಮವಾಗಬೇಕು: ಕೋ ಚೆನ್ನಬಸಪ್ಪ ಪ್ರತಿಪಾದನೆ

ಕರ್ನಾಟಕದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗ ಬೇಕೆಂದು ವಿಶ್ರಾಂತ ನ್ಯಾಯಮೂರ್ತಿ ಹಾಗೂ ಸಾಹಿತಿ ಕೋ. ಚೆನ್ನಬಸಪ್ಪ ಪ್ರತಿಪಾದಿಸಿದರು.
ಕೋ. ಚೆನ್ನಬಸಪ್ಪ
ಕೋ. ಚೆನ್ನಬಸಪ್ಪ

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗ ಬೇಕೆಂದು ವಿಶ್ರಾಂತ ನ್ಯಾಯಮೂರ್ತಿ ಹಾಗೂ ಸಾಹಿತಿ ಕೋ. ಚೆನ್ನಬಸಪ್ಪ ಪ್ರತಿಪಾದಿಸಿದರು.
ನ್ಯಾಷನಲ್ ಪದವಿ ಕಾಲೇಜು, ಬೆಂಗಳೂರು ಸಮಾಜ ವಿಜ್ಞಾನಗಳ ವೇದಿಕೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ `60ರ ಹೊಸ್ತಿಲಲ್ಲಿ ಏಕೀಕರಣ ಕರ್ನಾಟಕ' ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ದೇಶದ ಪ್ರಗತಿಯ ಮೂಲ ಶಿಕ್ಷಣ. ಬಸವಣ್ಣ, ಸರ್ದಾರ್ ವಲ್ಲಭಭಾಯ್ ಪಟೇಲ್ ವಿಗ್ರಹ, ಬಹುಮಹಡಿ ಕಟ್ಟಡ, ಬೃಹತ್ ಫ್ಯಾಕ್ಟರಿಗಳ  ನಿರ್ಮಾಣದಿಂದ ದೇಶದ ಉದ್ಧಾರ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಶಿಕ್ಷಣದ ಪ್ರಗತಿಗೆ ಶ್ರಮಿಸಬೇಕು. ಮಕ್ಕಳು ಮಾತೃಭಾಷೆಯಲ್ಲೇ ಶಿಕ್ಷಣ ಕಲಿಯುವ ವಾತಾವರಣ ನಿರ್ಮಿಸಬೇಕು. ಉದಾಹರಣೆಗೆ ಕರ್ನಾಟಕದಲ್ಲಿ ತಮಿಳು, ತೆಲುಗು, ಉರ್ದು, ಮಲೆಯಾಳಂ ಮೊದಲಾದ ಭಾಷೆಯವರಿದ್ದಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ಕನ್ನಡಿಗರಿದ್ದಾರೆ.
ಯಾವ ರಾಜ್ಯದವರು ಎಲ್ಲೇ ಇದ್ದರೂ ಅವರವರ ಮಾತೃಭಾಷೆಯೇ ಕಲಿಕಾ ಮಾಧ್ಯಮವಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸಬೇಕೆಂದು ಅವರು ಹೇಳಿದರು. ಸರ್ವೋಚ್ಛ ನ್ಯಾಯಾಲಯ ಕರ್ನಾಟಕದಲ್ಲಿ ಮಕ್ಕಳ ಕಲಿಕಾ ಮಾಧ್ಯಮ ನಿರ್ಧರಿಸುವ ತೀರ್ಮಾನ ಪೋಷಕರಿಗೆ ಬಿಟ್ಟಿದೆ. ಇದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇಷ್ಟವಿಲ್ಲದಿದ್ದರೂ ಪೋಷಕರ ಒತ್ತಡಕ್ಕೆ ಮಣಿದು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕಾಗುತ್ತದೆ.
ಹೀಗಾಗಿ ಸರ್ಕಾರ ನ್ಯಾಯಾಲಯಕ್ಕೆ ಮಾತೃಭಾಷೆ ಕಲಿಕೆ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ನನ್ನ ಪ್ರಕಾರ ಕನ್ನಡದ ಬಹುತೇಕ ಸಾಧಕರು ಕನ್ನಡ ಮಾಧ್ಯಮದಲ್ಲೇ ಕಲಿತು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಈ ವಿಚಾರವನ್ನು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದ 30 ಜಿಲ್ಲೆ ಒಳಗೊಂಡಂತೆ ಒಂದು ಸಮೀಕ್ಷೆ ನಡೆಸಬೇಕು. ಇದಕ್ಕಾಗಿ ಒಂದು ಆಯೋಗ ರಚಿಸಬೇಕು. ಸಮೀಕ್ಷೆಯಲ್ಲಿ ತಿಳಿದು ಬರುವ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಕಣಕಾರ ಡಾ.ರಾಜೇಗೌಡ ಹೊಸಹಳ್ಳಿ, ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕ ಡಾ.ಸಿ.ಆರ್.ಗೋವಿಂದರಾಜು, ಎನ್‍ಇಎಸ್ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಎಚ್.ರಾಮರಾವ್, ಗೌರವ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜ ರೆಡ್ಡಿ, ಪ್ರೊ.ವೇಣುಗೋಪಾಲ್ ಉಪ ಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com