
ಬೆಂಗಳೂರು: ರಾಜ್ಯಕ್ಕೆ ತಡವಾಗಿ ಆಗಮಿಸಿರುವ ಹಿಂಗಾರು ಬೆಂಗಳೂರು ಸುತ್ತಮುತ್ತಲ ಹತ್ತು ಜಿಲ್ಲೆಗಳಿಗಷ್ಟೇ ಸೀಮಿತವಾಗಿದ್ದು, ಇತರ ಭಾಗಗಳಲ್ಲಿ ಎಂದಿನಂತೆ ಬರ ಮುಂದುವರಿಯುವಂತೆ ಮಾಡಿದೆ.
ರಾಜ್ಯದಲ್ಲಿ ಹಿಂಗಾರು ಮಳೆ ಶೇ.15ರಷ್ಟು ಕೊರತೆಯಾಗಿದ್ದರೆ, ಉತ್ತರ ಕರ್ನಾಟಕದ ಭಾಗದಲ್ಲಿ ಶೇ.60ರಷ್ಟು ಕೊರತೆ ಆಗಿದೆ. ಇದರಿಂದ ಆ ಭಾಗದಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗುವ ಲಕ್ಷಣ ಕಾಣುತ್ತಿದೆ. ಹಿಂಗಾರು ಅಕ್ಟೋಬರ್ 28ರಂದೇ ಆರಂಭವಾಗಿದ್ದರೂ ರಾಜ್ಯದಲ್ಲಿ ಮಾತ್ರ ಮೂರು ದಿನಗಳಿಂದಷ್ಟೇ ಸದ್ದು ಮಾಡುತ್ತಿದೆ.
ಇದರಿಂದ ಕೆಲವು ಕಡೆ ಮೇವಿನ ಸಮಸ್ಯೆ ನಿವಾರಣೆಯಾಗಿದ್ದು, ಹಿಂಗಾರು ಬೆಳೆಗಳುತೇವಾಂಶದಿಂದ ಬದುಕುಳಿಯಲು ನೆರವಾಗಿದೆ. ಆದರೆ ಈ ಅನುಕೂಲ ಬೆಂಗಳೂರು ಸುತ್ತಮುತ್ತಲ ಐದಾರು ಜಿಲ್ಲೆಗಳಿಗೆ ಹೆಚ್ಚು ಲಾಭವಾಗುತ್ತಿದ್ದು, ಉಳಿದ ಜಿಲ್ಲೆಗಳಲ್ಲಿ ಸಮಸ್ಯೆ ಎಂದಿನಂತಿದೆ. ಸದ್ಯಕ್ಕೆ ಹಿಂಗಾರು ತಮಿಳುನಾಡಿನಲ್ಲಿ ಹೆಚ್ಚು ಅಬ್ಬರಿಸುತ್ತಿದ್ದು, ಕಾವೇರಿ ನೀರಿಗೆ ಒತ್ತಾಯಿಸುತ್ತಿರುವ ಆ ರಾಜ್ಯದಲ್ಲಿ ಸದ್ಯಕ್ಕೆ ನೀರಿನ ಕೂಗಾಟ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನಬಹುದಾಗಿದೆ. ಆದರೆ ರಾಜ್ಯದಲ್ಲಿ ಮಾತ್ರ ರೈತರ ನೀರೀಕ್ಷೆಯನ್ನು ಹುಸಿಗೊಳಿಸುವಲ್ಲಿ ಹಿಂಗಾರು ಸೋಲುವಂತೆ ಕಾಣುತ್ತಿದೆ. ರಾಜ್ಯದಲ್ಲಿ ಸದ್ಯದ ಸ್ಥಿತಿಯನ್ನು ಅವಲೋಕಿಸಿದರೆ ಶೇ.15ರಷ್ಟು ಹಿಂಗಾರು ಮಳೆ ಕೊರತೆಯಾಗಿದೆ. ವಿಶೇಷವಾಗಿ ಹಿಂಗಾರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚು ಅಬ್ಬರಿಸಿ ಅಲ್ಲಿ ರೈತರನ್ನು ಸಂಭ್ರಮಿಸುವಂತೆ ಮಾಡಬೇಕು. ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದು, ಬಿತ್ತನೆ ಮಾಡಿರುವವರು ಆತಂಕದಿಂದ ದಿನ ದೂಡುವಂತಾಗಿದೆ.
ದಕ್ಷಿಣ ಒಳನಾಡಿಗೆ ಸೀಮಿತ: ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಹಿಂಗಾರು ಈಗ ಬೆಂಗಳೂರು (24ಮಿ.ಮೀ), ಶಿವಮೊಗ್ಗ (21ಮಿ.ಮೀ) ಕೋಲಾರ (24ಮಿ. ಮೀ), ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಜಿಲ್ಲೆಗಳಿಗೆ ತಲಾ 7 ಸೆ.ಮೀ. ವರೆಗೂ ಮಳೆಯಾಗಿದೆ. ಇದರಿಂದ ಆ ಭಾಗದಲ್ಲಿ ಬಿತ್ತನೆ ಕಾರ್ಯ ಚುರುಕಾಗುವಂತೆ ಮಾಡಿದೆ. ಜತೆಗೆ ಬರದಿಂದ ತತ್ತರಿಸಿದ ತಾಲೂಕುಗಳಲ್ಲಿ ಮೇವು ಸಮಸ್ಯೆ ನಿವಾರಣೆಯಾಗುವ ಲಕ್ಷಣಗಳೂ ಗೋಚರಿಸುವಂತಾಗಿದೆ. ಆದರೆ ಈ ಮಳೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ, ಉಳಿದೆಲ್ಲಿಯೂ ಬಿತ್ತನೆ ಪ್ರಮಾಣವನ್ನು ಹೆಚ್ಚಿಸುವ ಮತ್ತು ಬೆಳೆ ಲಾಭದಾಯಕವಾಗುವ ಆಶಾಭಾವನೆ ತಂದಿಲ್ಲ.
Advertisement