ಮೆಟ್ರೋ ಕಾಮಗಾರಿ; ಸುರಂಗ ಮಾರ್ಗದಲ್ಲಿ ಯಂತ್ರಗಳ ಕಾಮಗಾರಿಯಿಂದಾಗಿ ಮನೆ ಬಿರುಕು

ರಾಜಧಾನಿಯ ಮೆಟ್ರೋ ರೈಲು ಕಾಮಗಾರಿಗಾಗಿ ಸಿಲಿಕಾನ್ ಸಿಟಿಯ ಸಾಕಷ್ಟು ಮರಗಳು ಬಲಿಯಾದವು. ಆದರೆ, ಈಗ ಮನೆಗಳಿಗೂ ಸಂಚಕಾರ ಬಂದಿದೆ. ...
ನಮ್ಮ ಮೆಟ್ರೋ ಲೋಗೋ
ನಮ್ಮ ಮೆಟ್ರೋ ಲೋಗೋ

ಬೆಂಗಳೂರು: ರಾಜಧಾನಿಯ ಮೆಟ್ರೋ ರೈಲು ಕಾಮಗಾರಿಗಾಗಿ ಸಿಲಿಕಾನ್ ಸಿಟಿಯ ಸಾಕಷ್ಟು ಮರಗಳು ಬಲಿಯಾದವು. ಆದರೆ, ಈಗ ಮನೆಗಳಿಗೂ ಸಂಚಕಾರ ಬಂದಿದೆ. ನಮ್ಮ ಮೆಟ್ರೋ ಒಂದೆಡೆ ಜನಸ್ನೇಹಿಯಾಗಿದ್ದರೆ ಮತ್ತೊಂದೆಡೆ ಮಾರಕ-ವಾಗಿ ಪರಿಣಮಿಸಿದೆ. ಕಾಮಗಾರಿ ನಡೆಯುವ ಮಾರ್ಗದಲ್ಲಿ ಜನ ನಿತ್ಯ ಜೀವಭಯದಲ್ಲೇ ಕಾಲಕಳೆಯುವ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ನಮ್ಮ ಮೆಟ್ರೋ ಕಾಮಗಾರಿಯಲ್ಲಿ ಯಂತ್ರದಿಂದ ಸುರಂಗ ಕೊರೆಯುತ್ತಿರುವುದರಿಂದ ಬಳೇಪೇಟೆ ಸುತ್ತಮುತ್ತಲಿನ ಹತ್ತಾರು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಲ್ಲಿನ ನಿವಾಸಿಗಳು ನಿತ್ಯ ಜೀವಭಯದಲ್ಲೇ ವಾಸಿಸುತ್ತಿದ್ದಾರೆ. ಯಾವಾಗ ಮನೆ ಕುಸಿದು ಏನು ಅನಾಹುತ ಸಂಭವಿಸುತ್ತದೆಯೋ ಎಂಬ ಕ್ಷಣಕ್ಷಣದ ಆತಂಕ ಅಲ್ಲಿನ ನಿವಾಸಿಗಳದ್ದು. ಬಿರುಕು ಬಿಟ್ಟಿರುವ ಮನೆಗಳು ವಾಸಿಸಲು ಯೋಗ್ಯವಲ್ಲ, ಆದರೂ ಅಧಿಕಾರಿಗಳು ಮಾತ್ರ ಇಲ್ಲಿನ ನಿವಾಸಿಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ.

ವಿಪಯ್ಯಾಸವೆಂದರೆ ಅಲ್ಲಿನ ಮನೆಯೊಂದು ಬಿರುಕು ಬಿಟ್ಟಿರುವುದನ್ನು ಅರಿತ ಬಿಎಂಆರ್‍ಸಿಎಲ್ ಸಿಬ್ಬಂದಿ ಅಡುಗೆ ಮನೆ ಹಾಗೂ ಹಾಲ್‍ನಲ್ಲಿ ಕಬ್ಬಿಣದ ಕಂಬಗಳನ್ನು ಹಾಕಿ ಅನಾಹುತವಾಗ ದಂತೆ ಎಚ್ಚರಿಕೆ ವಹಿಸಿದ್ದಾರೆ. ಆದರೆ, ಇದು ಎಚ್ಚರಿಕೆಯೋ ಅಥವಾ ಬೇಜವಾಬ್ದಾರಿಯೋ ಗೊತ್ತಿಲ್ಲ.

ಕಾಮಗಾರಿಗೆ ಅವಕಾಶ ಕೊಡಲ್ಲ
ಈ ಬಗ್ಗೆ ಕನ್ನಡ ಪ್ರಭ ಜತೆ ಪ್ರತಿಕ್ರಿಯಿಸಿರುವ ನಿವಾಸಿ ಅಶ್ವತ್ಥ್ ನಾರಾಯಣ್, ಎರಡೂವರೆ ವರ್ಷದ ಹಿಂದಷ್ಟೇ ರೂ, 30 ಲಕ್ಷ ಖರ್ಚು ಮಾಡಿ ಮನೆ ನಿರ್ಮಿಸಿದ್ದೆ. ಈಗ ಆ ಮನೆ ಬಿರುಕು ಬಿಟ್ಟಿದೆ. ತಮ್ಮ ಮನೆ ಮಾತ್ರವಲ್ಲ ಇದೇ ರೀತಿ ಸಾಕಷ್ಟು ಮನೆಗಳಿವೆ. ಇಷ್ಟು ದಿನ ಈ ರೀತಿ ಬಿರುಕು ಕಾಣಿಸಿಕೊಂಡಿರಲಿಲ್ಲ. ಆಗಾಗ ಮನೆ ನಡುಗಿದಂತಾಗುತ್ತದೆ. ಹಾಗಾಗಿ ನಮಗೆ ನೆಮ್ಮದಿಯಾಗಿ ನಿದ್ದೆ ಮಾಡಲಾಗುತ್ತಿಲ್ಲ ಎಂದು ಆತಂಕವ್ಯಕ್ತಪಡಿಸಿದರು.

ಗೋಡೆಗಳು ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಭೂಮಿ ಕೊರೆಯುವ ಕಾಮಗಾರಿ ನಿಲ್ಲಿಸಲಾಗಿದೆ. ಇನ್ನು ಒಂದು ದಿನ ಈ ಯಂತ್ರ ಕೆಲಸ ಮಾಡಿದರೂ ಮನೆಗಳು ಬೀಳುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಕಾಮಗಾರಿಗೆ ಅವಕಾಶ ಕೊಡುವುದಿಲ್ಲ ಎಂದರು.

ಕಾಮಗಾರಿಯಿಂದ ಕುತ್ತು
: ಮೊದಲ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಪ್ರಮುಖವಾಗಿ ಸಿಟಿ ಸಿವಿಲ್ ಕೋರ್ಟ್‍ನಿಂದ ಚಿಕ್ಕಪೇಟೆ ಮಾರ್ಗವಾಗಿ ಸುರಂಗ ಮಾರ್ಗ ಹಾದುಹೋಗುತ್ತದೆ. ಈ ಸುರಂಗ ಮಾರ್ಗದಿಂದ ಬಳೇಪೇಟೆ ನಿವಾಸಿಗಳ ಮನೆಗೆ ಕುತ್ತು ಬಂದಿದೆ. ಕಳೆದ ಒಂದೆರಡು ತಿಂಗಳಿಂದ ಬಳೇಪೇಟೆಯ ಸಾಕಷ್ಟು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಕೆಲ ಮನೆಗಳ ಗೋಡೆಗಳು ಬೀಳುವ ಸ್ಥಿತಿಯಲ್ಲಿವೆ. ಜನ ಇತ್ತ ಮನೆ ಖಾಲಿ ಮಾಡಲೂ ಆಗದೇ, ಅತ್ತ ವಾಸಿಸಲೂ ಆಗದೆ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಮನೆಗಳು ಬಿರುಕು ಬಿಟ್ಟಿರುವ ಸಂಬಂಧ `ಸುವರ್ಣ ನೂಸ್' ವರದಿ ಪ್ರಸಾರ ಮಾಡಿದ ನಂತರ ಎಚ್ಚೆತ್ತುಕೊಂಡ ಅ„ಕಾರಿಗಳು ಸ್ಥಳಕ್ಕಾಗಮಿಸಿ ಅಲ್ಲಿನ ನಿವಾಸಿಗಳನ್ನು ಖಾಲಿ ಮಾಡಿಸಿ ಲಾಡ್ಜ್ ವೊಂದರಲ್ಲಿ ತಂಗಲು ಸೂಚಿಸಿದ್ದಾರೆ.ಅದಕ್ಕೂ ಮುನ್ನ ಭೇಟಿ ನೀಡಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿ, ಯಾವುದೇ ಕ್ರಮಕೈಗೊಳ್ಳದೆ ಹಿಂತಿರುಗಿದ್ದರು.

ಬಂಡ ಧೈರ್ಯ- ಮನೆಯಲ್ಲೇ ವಾಸ: ಬಿರುಕು ಬಿಟ್ಟಿರುವ ಮನೆಗಳಲ್ಲಿನ ನಿವಾಸಿಗಳನ್ನು ಖಾಲಿ ಮಾಡಿಸಿ ಲಾಡ್ಜ್ ಗೆ ಕಳುಹಿಸಲಾಗಿದೆ. ಆದರೂ, ಕೆಲವರು ಬಿರುಕು ಬಿಟ್ಟಿರುವ ಮನೆಗಳಲ್ಲೇ ವಾಸಿಸುತ್ತಿದ್ದಾರೆ. ಖಾಲಿ ಮಾಡಿರುವವರು ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದ ಎಲ್ಲಾ ವಸ್ತುಗಳನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ಆ ವಸ್ತುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿದೆ. ಲಾಡ್ಜ್ ಬಿಲ್ ಪಾವತಿಸುವವರು ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮನೆ ಖಾಲಿ ಮಾಡಿ ಲಾಡ್ಜ್ ನಲ್ಲಿರುವವರು ಮೆಟ್ರೋ ಅಧಿಕಾರಿಗಳಿಗೆ ಕರೆ ಮಾಡಿ ಮುಂದೇನು ಎಂದು ಪ್ರಶ್ನಿಸಿದರೆ ನಾಳೆ (ಗುರುವಾರ) ಬೆಳಗ್ಗೆ ಬೇಟಿ ಮಾಡಿ ಪರಿಶೀಲಿಸುತ್ತೇವೆ ಎಂಬ ಎಂಬ ಉತ್ತರ ಬರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com