ಮೆಟ್ರೋ ಸುರಂಗ: 'ಮಾರ್ಗರಿಟಾ' ಮಾರ್ಗ ಪರಿಪೂರ್ಣ

ನಗರದ ಮೆಜಸ್ಟಿಕ್ ನಿಂದ ಸಂಪಿಗೆ ರಸ್ತೆವರೆಗಿನ ನಮ್ಮ ಮೆಟ್ರೋ ಸುರಂಗ ಕೊರೆಯುವ ಕಾರ್ಯವನ್ನು ಮಾರ್ಗರಿಟಾ(ಸುರಂಗ ಕೊರೆಯುವ ಯಂತ್ರ-ಟಿಬಿಎಂ) ಪೂರ್ಣಗೊಳಿಸಿತು.
ಮಾರ್ಗರಿಟಾ ಮಾರ್ಗ ಪರಿಪೂರ್ಣ
ಮಾರ್ಗರಿಟಾ ಮಾರ್ಗ ಪರಿಪೂರ್ಣ

ಬೆಂಗಳೂರು: ನಗರದ ಮೆಜಸ್ಟಿಕ್ ನಿಂದ ಸಂಪಿಗೆ ರಸ್ತೆವರೆಗಿನ ನಮ್ಮ ಮೆಟ್ರೋ ಸುರಂಗ ಕೊರೆಯುವ ಕಾರ್ಯವನ್ನು ಮಾರ್ಗರಿಟಾ(ಸುರಂಗ ಕೊರೆಯುವ ಯಂತ್ರ-ಟಿಬಿಎಂ) ಪೂರ್ಣಗೊಳಿಸಿತು. ಈ ಮೂಲಕ ಉತ್ತರ ಕಾರಿಡಾರ್ ಹಾಗೂ ಅತಿ ಉದ್ದ ಸುರಂಗ ಕಾರಿಡಾರ್ ನ ಹಾಗೂ ಅತಿ ಉದ್ದದ ಸುರಂಗ ಮಾರ್ಗ ಕೊರೆಯುವ ಕೆಲಸವನ್ನು ಮಾರ್ಗರಿಟಾ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸಂಜೆ ಸುಮಾರು 4 ಗಂಟೆಯಿಂದಲೇ ಮೆಟ್ರೋ ಸಿಬ್ಬಂದಿ ಜಕ್ಕರಾಯನ ಕೆರೆ ಬಳಿ(ಟಿಬಿಎಂ ಹೊರಬರುವ ಸ್ಥಳ) ಕಾತುರರಾಗಿ ಕಾಯುತ್ತಿದ್ದರು. ಸುಮಾರು ಮುಕ್ಕಾಲು ಗಂಟೆ ನಂತರ `ಮಾರ್ಗರಿಟಾ' ಯಂತ್ರ ಭೂಮಿ ಸೀಳಿ ಹೊರಬಂತು. ಈ ವೇಳೆ ಮೆಟ್ರೊ ಅಧಿಕಾರಿಗಳು ಮತ್ತು ಸಿಬ್ಬಂದಿ ಹರ್ಷೋದ್ಗಾರ ತೆಗೆದರು. ಮೆಜೆಸ್ಟಿಕ್‍ನಿಂದ ಒಟ್ಟು ಸಂಪಿಗೆ ರಸ್ತೆ ವರೆಗಿನ ಈ ಸುರಂಗ ಮಾರ್ಗ 960 ಮೀಟರ್ ಆಗಿದ್ದು, ಇದನ್ನು ಪೂರ್ಣಗೊಳಿಸಲು `ಮಾರ್ಗರಿಟಾ' ತೆಗೆದುಕೊಂಡ ಕಾಲವಕಾಶ ಬರೋಬ್ಬರಿ ಒಂದು ವರ್ಷ ಒಂದು ತಿಂಗಳು. ಇನ್ನು ಹಳಿ ಹಾಕಬೇಕಷ್ಟೆ...: ಸುರಂಗ ಕೊರೆಯುವ ಕಾರ್ಯ ಪೂರ್ಣವಾಗುವುದರೊಂದಿಗೆ, ಮೆಜೆಸ್ಟಿಕ್‍ನಿಂದ ಪೀಣ್ಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಕ್ಕೆ ಬಹುತೇಕ ಯಶಸ್ಸು ಸಿಕ್ಕಿದೆ. ಇನ್ನು ಹಳಿ ಹಾಕುವ ಕಾರ್ಯ ಮಾತ್ರ ಬಾಕಿ ಉಳಿದಿದೆ. ಈ ಕಾರ್ಯ ಚುರುಕುಗೊಳಿಸಲಾ-ಗುವುದು ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ತಿಳಿಸಿದ್ದಾರೆ. `ಮಾರ್ಗರಿಟಾ' ಯಶಸ್ವಿಯಾಗಿ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸುರಂಗ ಮಾರ್ಗ ಸುಮಾರು 1 ಕಿ.ಮೀ. ಇದೆ. ಇದು ಅತಿ ಉದ್ದವಾದ ಮಾರ್ಗ. ಈ ಮಾರ್ಗ ಪೂರ್ಣಗೊಂಡಿರುವುದರಿಂದ ಪೀಣ್ಯಕ್ಕೆ ಸಂಪರ್ಕ ಕಲ್ಪಿಸುವುದು ಸುಲಭವಾಗಿದೆ.
ಇದಕ್ಕೆ ಎದುರಾಗಿ ಚಿಕ್ಕಪೇಟೆಯಿಂದ ಮೆಜೆಸ್ಟಿಕ್‍ಗೆ ಬರುತ್ತಿರುವ ಕಾವೇರಿ ಟಿಬಿಎಂ ಯಂತ್ರ ಮೆಜೆಸ್ಟಿಕ್‍ಗೆ ಇನ್ನೂ 200 ಮೀ. ದೂರದಲ್ಲಿದೆ. ಅದು ಮುಗಿದರೆ 4 ಕಿ.ಮೀ. (ಚಿಕ್ಕಪೇಟೆ-ಸಂಪಿಗೆ ರಸ್ತೆ) ಮುಕ್ತಾಯವಾದಂತಾಗುತ್ತದೆ. ಆದರೆ, ವಿವಿಧ ಕಾರಣಗಳಿಂದ ಕಾವೇರಿ ಕೊರೆತ ಕುಂಠಿತವಾಗಿದೆ. ಆದರೂ ಹಳಿ ಹಾಕಿ, ಎಲ್ಲಾ ಕೆಲಸ ಶೀಘ್ರದಲ್ಲಿ ಮುಗಿಸಿದರೆ ಪೀಣ್ಯಕ್ಕೆ ಮೆಜೆಸ್ಟಿಕ್‍ನಿಂದ  ಸಂಪರ್ಕ ಕಲ್ಪಿಸುವುದು ಸುಲಭವಾಗುತ್ತದೆ. ಮಾರ್ಚ್ ವೇಳೆಗೆ ರೈಲು ಸಂಚಾರ ಆರಂಭಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com