ಗಂಭೀರ ಅಪರಾಧ ಪ್ರಕರಣಗಳು ನಡೆದರೆ ಅದಕ್ಕೆ ಠಾಣಾಧಿಕಾರಿಯೇ ಹೊಣೆ: ಗೃಹ ಸಚಿವ ಪರಮೇಶ್ವರ್

ಗಂಭೀರ ಅಪರಾಧ ಪ್ರಕರಣಗಳು ನಡೆದಲ್ಲಿ ಅದಕ್ಕೆ ಆಯಾ ಠಾಣೆಯ ಠಾಣಾಧಿಕಾರಿಯನ್ನೇ ಜವಾಬ್ದಾರರ ನ್ನಾಗಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್
Updated on

ಮಂಗಳೂರು: ಗಂಭೀರ ಅಪರಾಧ ಪ್ರಕರಣಗಳು ನಡೆದಲ್ಲಿ ಅದಕ್ಕೆ ಆಯಾ ಠಾಣೆಯ ಠಾಣಾಧಿಕಾರಿಯನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯನ್ನು ದಕ್ಷ ಹಾಗೂ ಪಾರದರ್ಶಕವನ್ನಾಗಿ ಮಾಡುತ್ತೇವೆ. ಕ್ಲಬ್, ಮಸಾಜ್ ಸೆಂಟರ್‍ಗಳಲ್ಲಿ ಅನೈತಿಕ ಚಟುವಟಿಕೆಗಳನ್ನು ಹತ್ತಿಕ್ಕದಿದ್ದರೆ ಅದಕ್ಕೆ ಅಧಿಕಾರಿಗಳನ್ನು ಹೊಣೆ
ಮಾಡುತ್ತೇವೆ. ಈ ಕುರಿತು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳಲು ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಗೆ ಸಿಬ್ಬಂದಿಯನ್ನು ಯಾವುದೇ ಜಾತಿ ಆಧಾರದ ಮೇಲೆ ನೇಮಕ ಮಾಡುತ್ತಿಲ್ಲ. ದೈಹಿಕ, ಮಾನಸಿಕ ಸಾಮರ್ಥ್ಯದ ಅಂಶಗಳ ಮೇಲೆ ನೇಮಕವಾಗುತ್ತಿದೆ. ಹೀಗಾಗಿ ಕೋಬ್ರಾ ಪೋಸ್ಟ್ ನಲ್ಲಿ ಹಿಂದುತ್ವದ ನಾಯಕರು ಹೇಳಿಕೊಂಡಂತೆ ಅವರ ಪರ ಇರುವ ಸಿಬ್ಬಂದಿ ಇದ್ದಾರೆ ಎನ್ನುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು. 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಉಲ್ಲಂಘನೆ ಹೆಚ್ಚುತ್ತಿದೆ. ಕರಾವಳಿ ಜಿಲ್ಲೆಗಳ ಜನತೆ ಸಮಾಜಲ್ಲಿ ಶಾಂತಿ ಕಾಪಾಡಲು ಸಹಕರಿಸಬೇಕು. ಕಾನೂನು ಹಾಗೂ ಪೊಲೀಸ್ ಇಲಾಖೆ ಅದರ ಕಾರ್ಯ ನಡೆಸುತ್ತಿದೆ. ತಮಗೆ ತೊಂದರೆಯಾದಾಗ ಪೊಲೀಸ್ ವ್ಯವಸ್ಥೆ ಬಳಸಿಕೊಳ್ಳಬೇಕು. ಆದರೆ ನೈತಿಕ ಪೊಲೀಸ್ ಗಿರಿ ಹಾಗೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ಕಾರಾಗೃಹಕ್ಕೆ ಭೇಟಿ: ಗ್ಯಾಂಗ್‍ವಾರ್‍ನಲ್ಲಿ ಇಬ್ಬರ ಹತ್ಯೆ ನಡೆದ ಮಂಗಳೂರು ಕೇಂದ್ರ ಕಾರಾಗೃಹಕ್ಕೆ ಗೃಹ ಸಚಿವ ಡಾ.ಪರಮೇಶ್ವರ್ ಭಾನುವಾರ ಭೇಟಿ ನೀಡಿದ್ದರು. ಘಟನೆ ನಡೆದ ಸ್ಥಳ ಪರಿಶೀಲಿಸಿದ ಅವರು, ಜೈಲು ಸಿಬ್ಬಂದಿಯಿಂದ ಘಟನೆಯ ವಿವರ ಪಡೆದರು. ಕೈದಿಗಳಿಗೆ ಸಿದ್ಧ ಪಡಿಸಿರುವ ಅಡುಗೆಯ ತಪಾಸಣೆ ನಡೆಸಿದರು. ನಂತರ ಕೈದಿಗಳ ಸಮಸ್ಯೆ ಆಲಿಸಿದರು.
ಬಳಿಕ ಮಾತನಾಡಿದ ಅಲರು, ಮಂಗಳೂರಿನ ಹೊರವಲಯದ ಮುಡಿಪು ಬಳಿ ತೆರೆದ ಜೈಲು ನಿರ್ಮಾಣಕ್ಕೆ 40 ಎಕರೆ ಜಾಗ ಖರೀದಿಸಲಾಗಿದೆ. ಇದಕ್ಕೆ ಸರ್ಕಾರ ಮುಂದಿನ ಬಜೆಟ್‍ನಲ್ಲಿ ಅನುದಾನ ಮೀಸಲಿಡಲಿದೆ. ಮಂಗಳೂರು ಜೈಲು ಬಹಳ ಹಳೆಯದು. ಇಲ್ಲಿ ಸೌಲಭ್ಯಗಳಿಲ್ಲ. ಹೀಗಾಗಿ ನೂತನ ಜೈಲು ನಿರ್ಮಾಣದವರೆಗೆ ಬೇಕಾದ ಸಣ್ಣಪುಟ್ಟ ಸೌಲಭ್ಯಗಳನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ಕೈಗಾರಿಕಾ ಭದ್ರತಾ ದಳದ 25 ಮಂದಿಯ ನೇಮಕಕ್ಕೂ ತೀರ್ಮಾನಿಸಿದ್ದು ಶೀಘ್ರವೇ ಈ ಸಿಬ್ಬಂದಿ ಆಗಮಿಸಲಿದ್ದಾರೆ. ಜೈಲಿನಲ್ಲಿ ಸಿಸಿ ಟಿವಿ, ಬೆಳಕಿನ ವ್ಯವಸ್ಥೆ ಹಾಗೂ ಮೊಬೈಲ್ ಜಾಮರ್ ಅಳವಡಿಕೆ ನಡೆಯಲಿದೆ. ಈ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಸಿಸಿ ಟಿವಿ ಅಳವಡಿಕೆಯ ವಿಷಯ ಈಗಾಗಲೇ ಬಜೆಟ್ ನ ಪ್ರಸ್ತಾವನೆಯಲ್ಲಿದ್ದು ಆ ಕಾರ್ಯ ಪ್ರಗತಿಯಲ್ಲಿದೆ. ನೂತನ ಜೈಲು ನಿರ್ಮಾಣ ಬಳಿಕ ಹಳೆಯ ಕಾರಾಗೃಹವನ್ನು ವಿಚಾರಣಾಧೀನ ಕೈದಿಗಳನ್ನಿರಿಸುವ ವ್ಯವಸ್ಥೆಗೆ ಮೀಸಲಿರಿಸುವ ಯೋಜನೆಯಿದೆ ಎಂದರು.
ಮಂಗಳೂರು ಕಾರಾಗೃಹದಲ್ಲಿ ನಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಘಟನೆಯಲ್ಲಿ ಯಾರೆಲ್ಲಾ ಭಾಗಿಯಾಗಿರಬಹುದೆಂಬ ಕುರಿತು ಕೂಲಂಕಷ ತನಿಖೆ ನಡೆಯುತ್ತಿದೆ. ಈಗಾಗಲೇ ತನಿಖೆ ಪ್ರಗತಿಯಲ್ಲಿದ್ದು, ಜೈಲಿನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com